ವಿದುರ ನೀತಿಯ ಪ್ರಕಾರ, ಮನುಷ್ಯನಲ್ಲಿ 6 ಗುಣಗಳು ಯಾವಾಗಲೂ ಇರಬೇಕಂತೆ. ಆ 6 ಗುಣಗಳನ್ನು ಎಂದಿಗೂ ಬಿಟ್ಟುಕೊಡಬಾರದು ಮತ್ತು ಆ 6 ಕೆಲಸವನ್ನು ಮಾಡುವುದನ್ನ ಎಂದಿಗೂ ನಿಲ್ಲಿಸಬಾರದು ಎಂದು ವಿಧುರ ಹೇಳಿದ್ದಾರೆ. ಹಾಗಾದ್ರೆ ವಿದುರನ ಪ್ರಕಾರ ಯಾವುದು ಆ 6 ಕೆಲಸ..? ಯಾವುದು ಆ 6 ಗುಣ ಎಂಬುದನ್ನ ನೋಡೋಣ ಬನ್ನಿ..
ಮೊದಲನೇಯದಾಗಿ ವಿದುರನ ಪ್ರಕಾರ ಸತ್ಯದ ದಾರಿಯನ್ನು ಎಂದಿಗೂ ಬಿಡಬಾರದು. ಮನದಿಂದ, ವಚನದಿಂದ, ಕರ್ಮದಿಂದ ಸತ್ಯದ ದಾರಿಯಲ್ಲಿ ನಡೆಯಬೇಕು ಎಂದು ವಿದುರ ಹೇಳುತ್ತಾರೆ. ನೀವು ಎಲ್ಲಿಯತನಕ ಸತ್ಯವಂತರಾಗಿರುತ್ತೀರೋ, ಅಲ್ಲಿಯ ತನಕ ನಿಮ್ಮನ್ನು ಸೋಲಿಸಲು, ನಿಮ್ಮನ್ನು ಅವಮಾನಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಮತ್ತು ನೀವು ಸತ್ಯವಂತರೇ ಆಗಿದ್ದಲ್ಲಿ, ನಿಮ್ಮ ಮಾತಿನಲ್ಲಿ ಯಾವಾಗಲೂ ಸ್ಪಷ್ಟತೆ ಇದ್ದೇ ಇರುತ್ತದೆ.
ಎರಡನೇಯದಾಗಿ ದಾನ ಮಾಡುವುದನ್ನು ನಿಲ್ಲಿಸಬೇಡಿ. ವಿದುರನ ಪ್ರಕಾರ ಜೀವನದ ಕೊನೆತನಕವೂ ದಾನ ಮಾಡುವುದನ್ನು ನಿಲ್ಲಿಸಬಾರದು. ನಿಮ್ಮ ಬಳಿ ಇದ್ದುದರಲ್ಲೇ, ಕೊಂಚವಾದರೂ ನಿರ್ಗತಿಕರಿಗೆ ದಾನ ಮಾಡಬೇಕು. ಹಾಗಂತ, ದರಿದ್ರರಾಗುವಂತೆ ದಾನ ಮಾಡುವುದಲ್ಲ. ಬದಲಾಗಿ ನೀವು 10 ರೂಪಾಯಿ ದುಡಿದರೆ, ಅದರಲ್ಲಿ ಒಂದೆರಡು ರೂಪಾಯಿಯಾದರೂ ಉಳಿಸಿ. ಅದರಲ್ಲಿ ಅರ್ಧವಾದರೂ ದಾನ ಮಾಡಿ ಎನ್ನುತ್ತಾರೆ ವಿದುರ.
ಮೂರನೇಯದಾಗಿ ನೀವು ನಿಮ್ಮ ಜವಾಬ್ದಾರಿಯನ್ನು ಮರಿಯಬೇಡಿ ಎನ್ನುತ್ತಾರೆ ವಿದುರರು. ಮನುಷ್ಯ ತನ್ನ ಜವಾಬ್ದಾರಿಯಿಂದ ಎಂದಿಗೂ ನುಣುಚಿಕೊಳ್ಳಬಾರದು. ನೀವು ವಿದ್ಯಾರ್ಥಿಗಳಾಗಿದ್ದರೆ, ನಿಮ್ಮ ಜವಾಬ್ದಾರಿ ಕಲಿಯುವುದಾಗಿರುತ್ತದೆ. ನೀವು ಓರ್ವ ಮನೆ ಯಜಮಾನನಾಗಿದ್ದಲ್ಲಿ, ಆ ಮನೆಜನರ ಹೊಟ್ಟೆ ತುಂಬಿಸುವ ಮತ್ತು, ಮನೆ ಜನರ ರಕ್ಷಣೆ ನಿಮ್ಮ ಜವಾಬ್ದಾರಿಯಾಗಿರುತ್ತದೆ. ಅಂತೆಯೇ ನೀವೋರ್ವ ತಂದೆ- ತಾಯಿಯಾಗಿದ್ದರೆ, ಮಕ್ಕಳ ಸುರಕ್ಷತೆ, ಶಿಕ್ಷಣ, ಉತ್ತಮ ಬುದ್ಧಿ ಹೇಳಿಕೊಡುವುದು ನಿಮ್ಮ ಜವಾಬ್ದಾರಿ. ಮತ್ತು ನೀವೋರ್ವ ಮಗನಾಗಿದ್ದರೆ, ಅಪ್ಪ ಅಮ್ಮನನ್ನು ಕೊನೆಯ ತನಕ ಚೆನ್ನಾಗಿ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ.
ನಾಲ್ಕನೇಯದಾಗಿ ಯಾರ ಬಗ್ಗೆಯೂ ಅಸೂಯೆ ಪಡಬೇಡಿ, ಎಲ್ಲರಿಗೂ ಒಳ್ಳೆಯದೇ ಬಯಸಿ. ವಿದುರ ನೀತಿಯ ಪ್ರಕಾರ, ನೀವು ನಿಮ್ಮ ಜೀವನದಲ್ಲಿ ಯಶಸ್ಸು ಗಳಿಸಬೇಕು. ನೆಮ್ಮದಿಯಿಂದ ಇರಬೇಕು ಅಂದ್ರೆ ನೀವು ಬೇರೆಯವರ ಬಗ್ಗೆ ಹೊಟ್ಟೆಕಿಚ್ಚು ಪಡಬಾರದು. ಬೇರೆಯವರ ಬಗ್ಗೆ ಕೆಟ್ಟದ್ದಾಗಿ ಮಾತನಾಡುವುದು. ಬೇರೆಯವರ ಬಳಿ, ಇನ್ನೊಬ್ಬರ ಬಗ್ಗೆ ಚುಚ್ಚಿಕೊಡುವುದು. ಬೇರೆಯವರಿಗೆ ಕೇಡಾದಾಗ ಖುಷಿ ಪಡುವುದು. ಇಂಥದ್ದೆಲ್ಲ ಮಾಡಬೇಡಿ. ಹೀಗೆ ಮಾಡುವುದರಿಂದ ನೀವೆಂದಿಗೂ ಉದ್ಧಾರವಾಗುವುದಿಲ್ಲ. ನಿಮ್ಮ ಪಾಲಿಗೆ ಎಂದಿಗೂ ದುಃಖವೇ ಸಿಗುತ್ತದೆ. ಹಾಗಾಗಿ ನೀವು ಜೀವನದಲ್ಲಿ ನೆಮ್ಮದಿಯಾಗಿರಬೇಕು ಅಂದ್ರೆ, ಬೇರೆಯವರ ಒಳಿತನ್ನೇ ಬಯಸಿ.
ಐದನೇಯದಾಗಿ ಎಲ್ಲರನ್ನೂ ಕ್ಷಮಿಸುವ ಗುಣ ಹೊಂದಿರಿ. ನೀವು ಎಲ್ಲರನ್ನೂ ಕ್ಷಮಿಸುವ ಗುಣ ಹೊಂದಿದ್ದರೆ, ನಿಮ್ಮನ್ನು ಖುಷಿ ಖುಷಿಯಾಗಿರುವುದರಿಂದ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಯಾಕಂದ್ರೆ ಕ್ಷಮಾ ಗುಣ ಹೊಂದಿರುವವನು, ಜೀವನದಲ್ಲೆಂದೂ ದುಃಖ ತಪ್ತನಾಗಿರಲು ಸಾಧ್ಯವಿಲ್ಲ. ಏಕೆಂದರೆ, ಅವನ ಮನಸ್ಸಿನಲ್ಲಿ ಯಾರ ಬಗ್ಗೆಯೂ ಸಿಟ್ಟಿರುವುದಿಲ್ಲ. ಅಸೂಯೆ ಇರುವುದಿಲ್ಲ. ಅವನು ಶುದ್ಧ ಮನಸ್ಸಿನವನಾಗಿರುವ ಕಾರಣ, ಅವನೆಂದಿಗೂ ಸಂತೋಷದಿಂದಲೇ ಇರುತ್ತಾನೆ.
ಆರನೇಯದಾಗಿ ಎಂದಿಗೂ ಧೈರ್ಯದಿಂದಿರಿ. ಜೀವನದಲ್ಲಿ ನೀವಂದುಕೊಂಡಿದ್ದನ್ನ ಸಾಧಿಸಬೇಕು ಅಂದ್ರೆ ನೀವು ಧೈರ್ಯವಂತರಾಗಿರಬೇಕು. ಯಾರು ಧೈರ್ಯವಂತರಾಗಿರ್ತಾರೋ, ಅವರನ್ನ ಯಾರೂ ಹೆದರಿಸಲು, ಕೆಳಮಟ್ಟದಲ್ಲಿರಿಸಲು ಸಾಧ್ಯವೇ ಇಲ್ಲಾ. ಧೈರ್ಯವಂತರೂ ಯಾರನ್ನೂ ಕೇರ್ ಮಾಡದೇ, ತಮ್ಮ ಕೆಲಸದಲ್ಲಿ ತಾವು ಗಮನ ಕೊಡುತ್ತಾರೆ. ಹಾಗಾಗಿ ಧೈರ್ಯಶಾಲಿಯಾದವರು ಯಶಸ್ಸಿನ ಮೆಟ್ಟಿಲು ಹತ್ತೇ ಹತ್ತುತ್ತಾರೆ.