ಫಿಲ್ಮ್ ಸ್ಟಾರ್ಸ್ ಅಂದಮೇಲೆ ಅವರಿಗೆ ಫ್ಯಾನ್ಸ್ ಇದ್ದೇ ಇರ್ತಾರೆ. ಕೆಲವೊಮ್ಮೆ ಕಟ್ಟಾ ಫ್ಯಾನ್ ಅಲ್ಲದಿದ್ದರೂ, ಫಿಲ್ಮ್ ಸ್ಟಾರ್ಸ್ ಎದುರಿಗೆ ಬಂದಾಗ, ಅವರನ್ನ ನೋಡಿ ಅವರೊಂದಿಗೆ ಒಂದು ಸೆಲ್ಫಿ ತೆಗೆದುಕೊಳ್ಳಬೇಕು ಅಂತಾ ಹಲವರಿಗೆ ಮನಸ್ಸಾಗತ್ತೆ. ಅದೇ ರೀತಿ ಪಂಚಭಾಷಾ ನಟಿ ನಯನತಾರಾ ಫ್ಯಾನ್ಸ್ ಕೂಡ, ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳು, ವೀಡಿಯೋ ಮಾಡಲು ಅವರ ಮೇಲೆ ಮುಗಿಬಿದ್ದಿದ್ದಾರೆ. ಅದಕ್ಕೆ ನಟಿ ಕೋಪಗೊಂಡಿದ್ದಾರೆ.
ನಟಿ ನಯನತಾರಾ ಪತಿ ವಿಘ್ನೇಶ್ ಶಿವನ್‌ರೊಂದಿಗೆ ಕುಂಭಕೋಣಂ ಬಳಿಯ ಕಾಮಾಕ್ಷಿ ಅಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿದ್ದ ಅಪಾರ ಸಂಖ್ಯೆಯ ಅಭಿಮಾನಿಗಳು ಅವರನ್ನ ನೋಡಲು ಮುಗಿಬಿದ್ದರು. ಅಲ್ಲದೇ ಅವರೊಂದಿಗೆ ಸೆಲ್ಫಿ, ವೀಡಿಯೋ ತೆಗೆದುಕೊಳ್ಳೋಕ್ಕೂ ಮುಂದಾದರು. ಹಾಗೆ ಮಾಡಬೇಡಿ, ಶಾಂತವಾಗಿರಿ ಎಂದರೂ ಕೇಳದ ಅಭಿಮಾನಿಗಳು, ಸ್ಥಳವನ್ನ ಗೊಂದಲಮಯ ಮಾಡಿದ್ದಾರೆ. ಹಾಗಾಗಿ ನಯನತಾರಾ ಮತ್ತು ಶಿವನ್ ಬೇಗ ಪೂಜೆ ಮುಗಿಸಿ, ಹೊರಟಿದ್ದಾರೆ.
ಅಲ್ಲಿಂದ ಮುಂದೆ ಹೋದ ಬಳಿಕ, ಅಲ್ಲಿಯೂ ನಯನತಾರಾಗೆ ಫ್ಯಾನ್ಸ್ ಕಾಟ ಕೊಡಲು ಪ್ರಾರಂಭಿಸಿದ್ದಾರೆ. ತಾಳ್ಮೆಗೆಟ್ಟ ನಟಿ, ಹೀಗೆಲ್ಲ ಮಾಡಿದರೆ, ಫೋನ್ ತೆಗೆದು ಬಿಸಾಕುವುದಾಗಿ ಗದರಿದ್ದಾರೆ. ಕೆಲವರು ನಟಿಗೆ ಕೋಪ ಬಂದಿದ್ದರಲ್ಲಿ ತಪ್ಪಿಲ್ಲ ಎಂದು ಹೇಳಿದ್ರೆ, ಅಭಿಮಾನಿಗಳು ಪ್ರೀತಿಯಿಂದ ಬಂದಾಗ ಹೀಗೆಲ್ಲ ಮಾಡಬಾರದು ಅಂತಾ ಇನ್ನು ಕೆಲವರು ಹೇಳಿದ್ದಾರೆ.
ಕೆಲ ತಿಂಗಳುಗಳ ಹಿಂದೆಯಷ್ಟೇ ವಿಘ್ನೇಶ್‌ರೊಂದಿಗೆ ವಿವಾಹವಾಗಿದ್ದ ನಟಿ ನಯನತಾರಾ, ಅವಳಿ ಗಂಡು ಮಕ್ಕಳಿಗೂ ತಾಯಿಯಾಗಿದ್ದಾರೆ. ಸದ್ಯ ಆ ಮಕ್ಕಳ ಆರೈಕೆ ಮಾಡುವುದರಲ್ಲಿ ಬ್ಯುಸಿಯಾಗಿರುವ ನಯನತಾರಾ, ಇನ್ನು ಕೆಲ ವರ್ಷ ನಾನು ಯಾವ ಸಿನಿಮಾದಲ್ಲೂ ನಟಿಸುವುದಿಲ್ಲ, ಮಕ್ಕಳ ಲಾಲನೆ ಪಾಲನೆಗೆ ನಾನು ಮೊದಲ ಪ್ರಾಶಸ್ತ್ಯ ನೀಡುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ ನಯನತಾರಾ, ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಜೊತೆ ಹಿಂದಿ ಚಿತ್ರದಲ್ಲಿ ನಟಿಸಿದ್ದಾರೆ.