ಮಳೆಗಾಲ ಶುರುವಾಗಿದೆ. ಇಂಥ ಟೈಮಲ್ಲಿ ತಿನ್ನೋಕ್ಕೆ ರುಚಿಕರವಾದ, ಕರಿದ ತಿಂಡಿ ಇದ್ರೆ ಚೆನ್ನಾಗಿರತ್ತೆ ಅನ್ನೋದು ಎಲ್ಲರಿಗೂ ಗೊತ್ತು. ಹಾಗಾಗಿ ನೀವು ಮನೆಯಲ್ಲೇ ಹೊಟೇಲ್ ಸ್ಟೈಲ್ ಬೋಂಡಾ ಮಾಡಿ ಸವಿಯಬಹುದು. ಹಾಗಾದ್ರೆ ಈ ಆಲೂಬೋಂಡಾ ಮಾಡೋಕ್ಕೆ ಏನೇನು ಬೇಕು..? ಇದನ್ನ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ನಾಲ್ಕು ಬಟಾಟೆ, ಎರಡು ಈರುಳ್ಳಿ, ಎರಡು ಹಸಿ ಮೆಣಸಿನಕಾಯಿ, ಒಂದು ಸ್ಪೂನ್ ಗರಂ ಮಸಾಲೆ, ಅರ್ಧ ಸ್ಪೂನ್ ಅರಿಶಿನ, ಚಿಟಿಕೆ ಇಂಗು, ಅರ್ಧ ಸ್ಪೂನ್ ಜೀರಿಗೆ, ಸೋಂಪು ಮತ್ತು ವೋಮ, ಕೊಂಚ ಸಣ್ಣಗೆ ಕತ್ತರಿಸಿದ ಕೊತ್ತೊಂಬರಿ ಸೊಪ್ಪು, ಚಿಕ್ಕ ತುಂಡು ಹಸಿ ಶುಂಠಿ, ಒಂದು ಕಪ್ ಕಡಲೆ ಹಿಟ್ಟು, ಎರಡು ಸ್ಪೂನ್ ಕಾರ್ನ್ ಫ್ಲೋರ್, ಒಂದು ಸ್ಪೂನ್ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು, ಕೊಂಚ ಸಕ್ಕರೆ. ಕರಿಯಲು ಎಣ್ಣೆ.
ಮೊದಲು ಹಿಟ್ಟು ರೆಡಿ ಮಾಡಿಕೊಳ್ಳಿ. ಒಂದು ಬೌಲ್‌ಗೆ ಕಡಲೆ ಹಿಟ್ಟು, ಕಾರ್ನ್ ಫ್ಲೋರ್, ಮೆಣಸಿನ ಪುಡಿ, ಅರಿಶಿನ ಪುಡಿ, ಉಪ್ಪು, ಓಮ, ಇಂಗು, ನೀರು ಹಾಕಿ, ಬಜ್ಜಿ ಹಿಟ್ಟಿನ ಹದಕ್ಕೆ ಬ್ಯಾಟರ್ ರೆಡಿ ಮಾಡಿ. ಈಗ ಇನ್ನೊಂದು ಬೌಲ್‌ನಲ್ಲಿ ಬೇಯಿಸಿದ ಆಲೂ ಮ್ಯಾಶ್ ಮಾಡಿ, ಅದಕ್ಕೆ ಸಣ್ಣಗೆ ಕತ್ತರಿಸಿದ ಈರುಳ್ಳಿ ಸೇರಿಸಿ. ನಂತರ ಹಸಿಮೆಣಸು, ಜೀರಿಗೆ, ಕೊತ್ತಂಬರಿ ಸೊಪ್ಪು, ಹಸಿ ಶುಂಠಿ ಮತ್ತು ಸೋಂಪು ಜಜ್ಜಿ ಅದನ್ನ ಆಲೂಗೆ ಸೇರಿಸಿ. ಈಗ ಉಪ್ಪು, ಚಿಟಿಕೆ ಸಕ್ಕರೆ, ಅರಿಶಿನ, ಗರಂ ಮಸಾಲೆ ಪುಡಿ, ಹಾಕಿ ಮಿಕ್ಸ್ ಮಾಡಿ.
ಈಗ ಮಿಕ್ಸ್ ಮಾಡಿಕೊಂಡ ಆಲೂ ಮಸಾಲೆಯನ್ನ ಉಂಡೆ ಮಾಡಿಕೊಂಡು, ಬಜ್ಜಿ ಬ್ಯಾಟರ್‌ನಲ್ಲಿ ಅದ್ದಿ, ಎಣ್ಣೆಯಲ್ಲಿ ತಿಳಿ ಕಂದು ಬಣ್ಣ ಬರುವವರೆಗೂ ಕರಿಯಿರಿ. ಈಗ ಆಲೂ ಬೋಂಡಾ ರೆಡಿ. ಕೊಬ್ಬರಿ ಚಟ್ನಿ ಅಥವಾ ಟೊಮೆಟೋ ಸಾಸ್ ಜೊತೆ ಇದನ್ನ ಸವಿಯಬಹುದು. ಇನ್ನು ಯಾವಾಗಲೂ ಯಾವುದಾದರೂ ಖಾದ್ಯವನ್ನ ಎಣ್ಣೆಯಲ್ಲಿ ಕರಿಯುವಾಗ, ಮೊದಲು ದೊಡ್ಡ ಉರಿಯಲ್ಲಿ ಎಣ್ಣೆಯನ್ನು ಕಾಯಿಸಿ, ಅದಕ್ಕೆ ಖಾದ್ಯವನ್ನ ಹಾಕಿ, ನಂತರ ಮಂದ ಉರಿಯಲ್ಲಿ ಬೇಯಿಸಬೇಕು. ಹೀಗೆ ಮಾಡಿದ್ದಲ್ಲಿ, ಬೋಂಡಾದ ಒಳಗಿನ ಮಿಶ್ರಣವೂ ಚೆನ್ನಾಗಿ ಕಾಯುತ್ತದೆ. ರುಚಿ ಹೆಚ್ಚುತ್ತದೆ.