ನೂತನ ನಗರವಾಗಿ ನಿರ್ಮಾಣವಾಗಲಿರುವ ಅಮರಾವತಿಯೇ (Amarawati) ಆಂಧ್ರ ಪ್ರದೇಶದ ರಾಜಧಾನಿ (Judgment of the Andhra High Court). ಆಂಧ್ರ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ (Chief Justice Prashant Kumar Mishra) ನೇತೃತ್ವದ ತ್ರಿಸದಸ್ಯ ಪೀಠ ಈ ಆದೇಶ ನೀಡಿದೆ. ಆದರೆ ಆಂಧ್ರ ಪ್ರದೇಶದ ಹಾಲಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಗೆ (Jagan Mohan Reddy) ಮೂರು ರಾಜಧಾನಿಗಳನ್ನು ಹೊಂದುವ ಆಶಯವಿತ್ತು. ಅಮರಾವತಿ ಶಾಸಕಾಂಗ ರಾಜಧಾನಿ , ವಿಶಾಖಪಟ್ಟಣಂ (Visakhapatnam) ಕಾರ್ಯಾಂಗ ರಾಜಧಾನಿ ಮತ್ತು ಕರ್ನೂಲ್ ನ್ಯಾಯಾಂಗ ರಾಜಧಾನಿ ಆಗಬೇಕೆಂದು ರಾಜ್ಯ ಸರ್ಕಾರ ಬಯಸಿತ್ತು. ಒಂದು ರಾಜ್ಯಕ್ಕೆ ಮೂರು ರಾಜಧಾನಿಗಳಿರಲು ಸಾಧ್ಯವಿಲ್ಲ ಎಂದು ಆಂಧ್ರ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಆಂಧ್ರಪ್ರದೇಶ ರಾಜಧಾನಿ ವಿಚಾರದಲ್ಲಿ ನಡೆಯುತ್ತಿದ್ದ ಹಗ್ಗಜಗ್ಗಾಟಕ್ಕೆ ಇತಿಶ್ರೀ ಹಾಡಿದೆ. ಅಮರಾವತಿಯಿಂದ ಯಾವುದೇ ಕಚೇರಿ ಸ್ಥಳಾಂತರ ಮಾಡದಂತೆ ಆದೇಶಿಸಿರುವ ಆಂಧ್ರ ಹೈಕೋರ್ಟ್, ಪ್ರಕರಣದಲ್ಲಿ ಎಲ್ಲಾ ಅರ್ಜಿದಾರರಿಗೆ ವೆಚ್ಚವಾಗಿ 50,000 ರೂ. ಪಾವತಿಸುವಂತೆ ಸೂಚಿಸಿದೆ. ಒಪ್ಪಂದದಂತೆ 6 ತಿಂಗಳೊಳಗೆ ಮಾಸ್ಟರ್ ಪ್ಲಾನ್ ಪೂರ್ಣಗೊಳಿಸಲು ಆದೇಶಿಸಲಾಗಿದೆ. ಮಾಸ್ಟರ್ ಪ್ಲಾನ್ ನಲ್ಲಿ ಏನಿದೆಯೋ ಅದನ್ನು ಅನುಷ್ಠಾನಗೊಳಿಸಬೇಕು. ಕಾಲಕಾಲಕ್ಕೆ ಅಭಿವೃದ್ಧಿ ಕಾಮಗಾರಿಗಳ ವರದಿಯನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ಭೂಮಿ ನೀಡಿದ ರೈತರಿಗೆ 3 ತಿಂಗಳಲ್ಲಿ ಪರ್ಯಾಯ ಭೂಮಿ ನೀಡಬೇಕು ಎಂದು ಸರ್ಕಾರಕ್ಕೆ ತಾಕೀತು ಮಾಡಿರುವ ಆಂಧ್ರ ಹೈಕೋರ್ಟ್ ಎಲ್ಲ ಸೌಲಭ್ಯಗಳೊಂದಿಗೆ ಅಭಿವೃದ್ಧಿ ಪಡಿಸಿದ ನಿವೇಶನಗಳನ್ನು 3 ತಿಂಗಳೊಳಗೆ ಜಮೀನು ನೀಡಿದ ರೈತರಿಗೆ ಹಸ್ತಾಂತರಿಸಬೇಕು ಎಂದಿದೆ. ಅಧೀನಕ್ಕೆ ಪಡೆದ ಭೂಮಿಯನ್ನು ರಾಜಧಾನಿ ಅಭಿವೃದ್ಧಿಗಾಗಿ ಮಾತ್ರ ಬಳಕೆ ಮಾಡಬೇಕು. ಇತರ ಕಾರಣಗಳಿಗಾಗಿ ಯಾವುದೇ ಕಾರಣಕ್ಕಾಗಿ ಉಪಯೋಗಿಸುವಂತಿಲ್ಲ ಎಂದೂ ಸ್ಪಷ್ಟಮಾಡಿದೆ.