Bollywood News: ರಾಖಿ ಸಾವಂತ್ 3ನೇ ಮದ್ವೆ! ಪಾಕಿಸ್ತಾನ ಚೆಲುವನಿಗೆ ಸೋತ ಬೆಡಗಿ

Bollywood News: ಬಾಲಿವುಡ್ ಅಂಗಳದಲ್ಲಿ ಆಗಾಗ ಜೋರು ಸುದ್ದಿ ಆಗುವ ನಟಿ ಅಂದರೆ ಅದು ರಾಖಿ ಸಾವಂತ್. ಹೌದು, ಸದಾ ಒಂದಿಲ್ಲೊಂದು ಸುದ್ದಿಗೆ ಗ್ರಾಸವಾಗುತ್ತಿರೋ ರಾಖಿ ಸಾವಂತ್ ಹೆಚ್ಚು ವಿವಾದಗಳಿಂದಲೇ ಸದ್ದು ಮಾಡಿದವರು. ರಾಖಿ ಸಾವಂತ್ ಅಂದಾಕ್ಷಣ ನೆನಪಾಗೋದೇ ಪರದೇಸಿಯಾ ಯೇ ಸಚ್ ಹೈ ಪಿಯಾ ಹಾಡು. ಈ ಹಾಡಿನ ಮೂಲಕ ಪಡ್ಡೆಗಳ ಮನಗೆದ್ದ ರಾಖಿ ಸಾವಂತ್, ಒಂದರ್ಥದಲ್ಲಿ ಬಹುತೇಕರನ್ನು ಹುಚ್ಚೆಬ್ಬಿಸಿದ್ದು ಸುಳ್ಳಲ್ಲ. ವಿವಾದಗಳ ಹೊರತಾಗಿ ಬದುಕುವ ಹಂಬಲ ಇಲ್ಲದ ರಾಖಿ ಸಾವಂತ್ ಎಂಬ ಹಣೆಪಟ್ಟಿ ಪಡೆದವರು. ಹಾಗೆ ನೋಡಿದರೆ ಒಂದು ಕಾಲದಲ್ಲಿ ತನ್ನ ಅಂದ ಚೆಂದದಿಂದಲೇ ಬಾಲಿವುಡ್ ಮಾತ್ರವಲ್ಲ, ಭಾರತೀಯ ಚಿತ್ರರಂಗದವರನ್ನೇ ತನ್ನತ್ತ ಸೆಳೆದಿದ್ದ ಸುಂದರಿ.

ಆ ಕಾಲದಲ್ಲಿ ರಾಖಿ ಸಾವಂತ್ ಜನಪ್ರಿಯತೆ ಎಷ್ಟಿತ್ತೆಂದರೆ, ಆಕೆ ನಿಂತ್ರೂ, ಕುಂತ್ರೂ ಎಲ್ಲೇ ಹೋದ್ರೂ ಸುದ್ದಿಯಾಗುತ್ತಿದ್ದಳು. ಅವರಿಗೆ ಸಿಕ್ಕ ಭಾರೀ ಜನಪ್ರಿಯತೆಯೇ ಮುಳ್ಳಾಗಿಬಿಟ್ಟಿತು. ಅವರ ಜನಪ್ರಿಯತೆಯಿಂದಾಗಿ ತಮ್ಮನ್ನೇ ತಾವು ಮೈ ಮರೆತುಬಿಟ್ಟರು. ಬಾಲಿವುಡ್ ಪಾಲಿಗೆ ರಾಖಿ ಸಾವಂತ್ ದಾರಿ ತಪ್ಪಿದ ಬೆಡಗಿಯಾದಳು. ಅಲ್ಲಿಂದ ರಾಖಿ ಸಾವಂತ್ ಸುದ್ದಿಯಾಗಿದ್ದೇ ವಿವಾದಗಳಿಂದ. ತಾನು ಸದಾ ಸುದ್ದಿಯಲ್ಲಿರಬೇಕು ಅನ್ನುವ ಕಾರಣಕ್ಕೋ ಏನೋ, ಸೋಶಿಯಲ್ ಮೀಡಿಯಾದಲ್ಲೂ ಎಂಟ್ರಿ ಕೊಟ್ಟು ಅಲ್ಲಿ ನಟಿಸೋಕೂ ಶುರುಮಾಡಿಬಿಟ್ಟರು. ವಿವಾದಗಳನ್ನೇ ಮೇಮೇಲೆ ಎಳೆದುಕೊಂಡು ಸದಾ ಟೀಕೆಗೆ ಗುರಿಯಾಗುವ ಮಟ್ಟಕ್ಕೆ ಬಂದರು.

ತನ್ನ ಬದುಕು ಎಲ್ಲೋ ಒಂದು ಕಡೆ ಮುಸುಕಾಯ್ತು ಅಂದುಕೊಂಡರೂ, ರಾಖಿ ಮಾತ್ರ ಅದರಿಂದ ಆಚೆ ಬರುವ ಪ್ರಯತ್ನ ಮಾಡಲಿಲ್ಲ. ತನ್ನ ತಪ್ಪಿದ್ದರೂ ಅದನ್ನು ತಿದ್ದಿಕೊಂಡು ಬದುಕಬೇಕು ಎಂಬ ಮನಸ್ಸು ಮಾಡಲೇ ಇಲ್ಲ. ಇಷ್ಟಾದರೂ ರಾಖಿ ಸಾವಂತ್ ಮತ್ತೊಂದು ಸುದ್ದಿಯಾಗಿದ್ದಾರೆ. ಈ ಬಾರಿ ಯಾವುದೋ ವಿವಾದದಿಂದ ಸುದ್ದಿಯಾಗಿದ್ದಾರೆ ಅಂತಂದುಕೊಳ್ಳುವಂತಿಲ್ಲ. ಬದಲಾಗಿ ಅವರು, ಈಗ ಮೂರನೇ ಸಲ ಮದ್ವೆ ಆಗುವ ಮಾತುಗಳನ್ನಾಡಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ಅಂದಹಾಗೆ, ಮದ್ವೆ ಅವರ ಇಷ್ಟ. ನಿಜ, ಆದರೆ, ಅವರ ಮದ್ವೆ ಬಗ್ಗೆ ಮಾತಾಡೋಕೆ ಕಾರಣ, ಅವರೊಬ್ಬ ನಟಿ ಅನ್ನೋದು.

ಇಷ್ಟಕ್ಕೂ ರಾಖಿ ಈ ಬಾರಿ ಮದುವೆಯಾಗುತ್ತಿರುವ ಗಂಡು ಇಂಡಿಯಾದವರಲ್ಲ. ಬದಲಿಗೆ ಪಾಕಿಸ್ತಾನದವರು ಅನ್ನೋದೇ ಸದ್ಯದ ಬ್ರೇಕಿಂಗ್ ನ್ಯೂಸು. ಹೌದು, ರಾಖಿ ಕೊಟ್ಟಿರುವ ಸಂದರ್ಶನವೊಂದರಲ್ಲಿ ತಮ್ಮ ಮೂರನೇ ಮದ್ವೆ ಕುರಿತು ಪ್ರಸ್ತಾಪಿಸಿದ್ದಾರೆ. ಪಾಕಿಸ್ತಾನದಿಂದ ನನಗೆ ಮದ್ವೆ ಕುರಿತ ಮಾತುಗಳು ಬರುತ್ತಿವೆ. ನನ್ನ ಹಿಂದಿನ ಮದ್ವೆಗಳಿಂದ ಆದಂತಹ ನೋವು, ನಾನು ಅನುಭವಿಸಿದ ನರಕ ಯಾತನೆ, ಎಲ್ಲವೂ ಪಾಕಿಸ್ತಾನದ ಪ್ರಜೆಗಳಿಗೆ ಗೊತ್ತಿದೆ. ಅವರೆಲ್ಲವನ್ನು ನೋಡಿದ್ದಾರೆ ಎಂದಿರುವ ರಾಖಿ ಈ ಬಾರಿ ಉತ್ತಮವಾದ ವ್ಯಕ್ತಿಯನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.

ನಾನು ಪಾಕಿಸ್ತಾನದ ಜನರನ್ನು ತುಂಬಾ ಇಷ್ಟ ಪಡುತ್ತೇನೆ. ಅಲ್ಲಿ ನನಗೆ ತುಂಬಾ ಜನ ಅಭಿಮಾನಿಗಳಿದ್ದಾರೆ. ಈ ರೀತಿಯ ಮದ್ವೆಯಿಂದ ಎರಡು ದೇಶಗಳ ನಡುವೆ ಶಾಂತಿ ನೆಲಸುತ್ತೆ ಎಂದಿದ್ದಾರೆ. ಇನ್ನು ಪಾಕಿಸ್ತಾನದಲ್ಲಿ ನನ್ನ ಮದುವೆ ನಡೆಯಲಿದ್ದು ಭಾರತದಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ . ಸ್ವಿಜರ್ಲ್ಯಾಂಡ್ ಮತ್ತು ನೆದರ್‌ಲ್ಯಾಂಡ್‌ಗೆ ಹನಿಮೂನ್‌ಗೆ ನಾವು ಹೋಗಲಿದ್ದೇವೆ. ಆ ನಂತರ ದುಬೈನಲ್ಲಿ ಖಾಯಂ ಆಗಿ ನೆಲಸಲಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ಇನ್ನು ರಾಖಿ ಸಾವಂತ್ ಮದುವೆಯಾಗುತ್ತಿರುವ ಹುಡುಗನ ಹೆಸರನ್ನೂ ಹೇಳಿದ್ದಾರೆ. ಅವರ ಹೆಸರು ದೋದಿ ಖಾನ್. ವೃತ್ತಿಯಲ್ಲಿ ಪೊಲೀಸ್ ಅಧಿಕಾರಿ. ಅಷ್ಟೇ ಅಲ್ಲ, ಪಾಕಿಸ್ತಾನದ ನಟ ಕೂಡ ಹೌದು ಎಂದಿದ್ದಾರೆ. ರಾಖಿ ಸಾವಂತ್ ಅವರು ಹೇಳಿರುವಂತೆ ಪಾಕಿಸ್ತಾನದ ‘ದುರ್ಜ್’, ‘ಘಬ್ರಾನಾ ನಹೀ ಹೈ’, ‘ಆಖಾರ’, ‘ಚೌಧರಿ’, ಹೀಗೆ ಕೆಲ ಚಿತ್ರಗಳಲ್ಲಿ ದೋದಿ ಖಾನ್ ಅಭಿನಯಿಸಿದ್ದಾರಂತೆ. ಅಲ್ಲದೆ, ಮಾಡೆಲ್ ಆಗಿಯೂ ಗುರುತಿಸಿಕೊಂಡಿದ್ದಾರಂತೆ. ರಾಖಿ ಸಾವಂತ್ 2022ರಲ್ಲಿ ರಿತೇಶ್ ರಾಜ್ ಸಿಂಗ್ ಜೊತೆ ಮದ್ವೆಯಾಗಿದ್ದರು. ಅದು ಅಷ್ಟೇ ಬೇಗ ಮುರಿದು ಬಿತ್ತು. ನಂತರ ಕರ್ನಾಟಕ ಮೂಲದ ಮೈಸೂರು ವಾಸಿ ಆದಿಲ್ ಖಾನ್ ದುರ್ರಾನಿ ಅವರನ್ನು ಮದ್ವೆಯಾಗಿದ್ದರು. ಮದ್ವೆ ಬಳಿಕ ಎರಡನೇ ಪತಿ ವಿರುದ್ದ ಗಂಭೀರ ಆರೋಪ ಮಾಡಿ ಅವರನ್ನು ಜೈಲಿಗೆ ಕಳುಹಿಸಿದ್ದರು. ರಾಖಿ ಸಾವಂತ್ ಅವರನ್ನು ಮದುವೆಯಾದ ತಪ್ಪಿಗೆ ಆದಿಲ್ ಖಾನ್ ದುರ್ರಾನಿ ಆರು ತಿಂಗಳು ಜೈಲು ವಾಸ ಅನುಭವಿಸಿದ್ದರು.

ಈಗ ರಾಖಿ ಮೂರನೇ ಮದ್ವೆಗೆ ರೆಡಿಯಾಗಿದ್ದಾರೆ. ಅವರೇ ಹೇಳಿರುವಂತೆ ಪಾಕ್ ಪೊಲೀಸ್ ಅಧಿಕಾರಿ ಆಗಿರುವ ದೋದಿ ಖಾನ್, ಈಗ ರಾಖಿ ಕೈ ಹಿಡಿಯುತ್ತಿದ್ದಾರೆ. ಪಾಪ ಅವರಿಗೆ ರಾಖಿ ಸಾವಂತ್ ಗುಣ ಗೊತ್ತೋ ಇಲ್ಲವೋ? ಆದರೂ, ರಾಖಿ ಜೊತೆ ಮದ್ವೆಗೆ ಸಜ್ಜಾಗಿದ್ದಾರೆ. ಪಾಕ್ ನೆಲದಲ್ಲಿ ಮದ್ವೆಯಾಗಿ, ಇಂಡಿಯಾದಲ್ಲಿ ರಿಸೆಪ್ಷೆನ್ ಮಾಡಿಕೊಳ್ಳುವ ಉತ್ಸಾಹದಲ್ಲಿ ಇಬ್ಬರೂ ಇದ್ದಾರೆ. ಮದ್ವೆ ಆಗಲಿ. ಆದರೆ, ಮತ್ತದೇ ತಪ್ಪನ್ನು ರಾಖಿ ಮಾಡದಿರಲಿ ಅನ್ನೊದು ನೆಟ್ಟಿಗರ ಕಾಮೆಂಟ್.

About The Author