Bollywood News: ಎಲ್ಲಾ ಕಡೆ ಜಾತಿ-ಧರ್ಮದ ವ್ಯವಸ್ಥೆ ಕಾಮನ್. ಆ ಜಾತಿ, ಈ ಜಾತಿ, ಧರ್ಮಗಳ ನಡುವೆ ದ್ವೇಷ, ಅಸೂಯೆಯಿಂದಾಗಿ ಅದೆಷ್ಟೋ ಮನಸ್ಸುಗಳು ಛಿದ್ರಗೊಂಡಿವೆ. ಹತ್ಯೆಗಳೂ ನಡೆದಿವೆ. ಈ ಜಾತಿ ವ್ಯವಸ್ಥೆ ಅನ್ನೋದು ಬಹುಶಃ ಭಾರತದಲ್ಲಷ್ಟೇ ಕೋಮು ದ್ವೇಷದ ಖಾಯಿಲೆ ಹೆಚ್ಚಾಗಿದೆಯೇನೋ ಅನ್ಸುತ್ತೆ. ಮನುಷ್ಯ ಹೇಗಿದ್ದರೂ ಕುಹಕವಾಡುವ ಜನ ಇದ್ದೇ ಇರ್ತಾರೆ. ಮನುಷ್ಯತ್ವ ಪರ ಮಾತಾಡುವ ಮಂದಿ ಮೇಲೂ ಗೂಬೆ ಕೂರಿಸುವ ಜನ ಇದ್ದಾರೆ. ಕುಂತರೂ ಸರಿ, ನಿಂತರೂ ಸರಿ ಅದು ತಪ್ಪು ಅನ್ನೋ ಕಾಲವಿದು. ಸದ್ಯ ಜಾತಿ-ಮತ, ಪಂಥ ಇದರ ಆಧಾರದ ಮೇಲೆಯೇ ಬದುಕು ನಡೆಯುತ್ತಿರೋದು ಸುಳ್ಳಲ್ಲ. ಆದರೆ, ಈ ಕಲಾ ಪ್ರಪಂಚಕ್ಕೂ, ಕಲಾವಿದರಲ್ಲೂ ಜಾತಿ-ಧರ್ಮ ಹುಡುಕುವ ಮಂದಿ ಹೆಚ್ಚಾಗಿದ್ದಾರೆ. ಅದಕ್ಕೆ ಸ್ಪಷ್ಟ ಉದಾಹರಣೆ ಅಂದ್ರೆ ಸಲ್ಮಾನ್ ಖಾನ್ ಅವರ ಕುರಿತು ಇತ್ತೀಚೆಗೆ ನಡೆದ ಒಂದು ಪ್ರಕರಣ ಇದಕ್ಕೆ ಸಾಕ್ಷಿ.
ಹೌದು, ಸಿನಿಮಾ ಮಂದಿ ಅಂದರೆ ಕಾಮನ್ ಆಗಿ ಒಂದಷ್ಟು ಶೋಕಿ ಇದ್ದೇ ಇರುತ್ತೆ. ಎಲ್ಲರೂ ಆ ಶೋಕಿಯೊಳಗೆ ಇರ್ತಾರೆ ಅಂತಲ್ಲ, ಕೆಲವು ಸ್ಟಾರ್ಸ್ ಗಳಿಗೆ ಕಾರು, ಬೈಕು, ಡ್ರೆಸ್ಸು ಇತ್ಯಾದಿ ಬಗ್ಗೆ ಕ್ರೇಜ್ ಹುಚ್ಚದು ಹೆಚ್ಚು. ಇನ್ನೂ ಕೆಲವರಿಗೆ ದುಬಾರಿ ಬೆಲೆಯ ಶೂಸ್, ಬಟ್ಟೆ, ವಾಚ್, ಗೋಲ್ಡ್ ಹೀಗೆ ಧರಿಸಿ ತಿರುಗಾಡುವ ಶೋಕಿ ಇದ್ದೇ ಇರುತ್ತೆ. ಕೆಲವರು ಆ ಬಗ್ಗೆ ಯೋಚಿಸುವುದೂ ಇಲ್ಲ. ಎಲ್ಲೋ ಒಮ್ಮೊಮ್ಮೆ ಯಾರೋ ಪ್ರಿತಿಯಿಂದ ಕೊಟ್ಟ ಗಿಫ್ಟ್ ಅನ್ನು ಇಟ್ಟುಕೊಳ್ಳುತ್ತಾರೆ. ಅಥವಾ ಪ್ರೀತಿ ಪಾತ್ರರು ಕೊಡಿಸಿದ ದುಬಾರಿ ಪರಿಕರವನ್ನು ತಮ್ಮ ಬಳಿ ಇರಿಸಿಕೊಳ್ತಾರೆ. ಇದಕ್ಕೆ ಬಾಲಿವುಡ್ ನಟ ಸಲ್ಮಾನ್ ಖಾನ್ ಕೂಡ ಹೊರತಲ್ಲ.
ಸಲ್ಮಾನ್ ಖಾನ್ ಅವರಿಗೆ ದುಬಾರಿ ಬೆಲೆಯ ವಾಚ್ ಖರೀದಿಸುವ ಕ್ರೇಜ್ ಇದೆ. ಹಾಗೆ ನೋಡಿದರೆ, ಸಲ್ಲು ಕೋಟ್ಯಾಂತರ ರುಪಾಯಿ ಬೆಲೆಯ ವಾಚ್ ಗಳನ್ನು ಕಟ್ಟಿಕೊಂಡು ತಮ್ಮದೇ ಶೈಲಿಯ ಪೋಸ್ ಕೊಟ್ಟ ಉದಾಹರಣೆ ಇದೆ. ಇತ್ತೀಚೆಗೆ ಸಲ್ಲು ಮಾಡಿದ್ದು ಅದನ್ನೇ. ವಿಷಯ ಏನಪ್ಪಾ ಅಂದ್ರೆ, ಅಯೋಧ್ಯೆಯ ಶ್ರೀರಾಮ ಮಂದಿರದ ಸ್ಪೆಷಲ್ ಎಡಿಷನ್ ವಾಚ್ ಅನ್ನು ಕಟ್ಟಿಕೊಂಡಿದ್ದ ಸಲ್ಮಾನ್ ಖಾನ್ ಕ್ಯಾಮರಾಗೆ ಫೋಸ್ ಕೊಟ್ಟಿದ್ದರು. ಅವರು ವಾಚ್ ಕಟ್ಟಿಕೊಂಡು ಕೊಟ್ಟ ಫೋಸ್ ಸಮಸ್ಯೆಯಾಗಿಲ್ಲ. ಆದರೆ ಅವರು ಕಟ್ಟಿಕೊಂಡ ವಾಚ್ ಅಯೋಧ್ಯೆಯ ಶ್ರೀರಾಮ ಮಂದಿರದ ಸ್ಪೆಷಲ್ ಎಡಿಷನ್ ವಾಚ್ ಸಮಸ್ಯೆಯಾಗಿದೆ. ಇದು ಸದ್ಯ ಅವರ ಮುಸ್ಲಿಂ ಧರ್ಮಗುರುಗಳ ಕಣ್ಣಿಗೆ ಬಿದ್ದು ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಈ ಬಗ್ಗೆ ತಗಾದೆ ಎತ್ತಿರುವ ಆಲ್ ಇಂಡಿಯಾ ಮುಸ್ಲಿಂ ಜಮಾತ್‌ನ ಮೌಲಾನಾ ಶಹಾಬುದ್ದೀನ್ ರಾಜ್ವಿ, ಮುಸ್ಲಿಂ ವ್ಯಕ್ತಿಯಾಗಿ ರಾಮ ಮಂದಿರದ ಪ್ರಚಾರಕ್ಕೆ ತಯಾರಿಸಿದ ರಾಮ ಮಂದಿರ ಆವೃತ್ತಿಯ ವಾಚ್ ಧರಿಸಿದ್ದು ತಪ್ಪು ಎಂದಿದ್ದಾರೆ.
ಸಲ್ಲು ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್. ಅವರು ಕೇವಲ ಇಂಡಿಯಾ ಮಾತ್ರವಲ್ಲ, ವಿದೇಶಿಗರಿಗೂ ಜನಪ್ರಿಯ. ಅವರಿಗೆ ಕೋಟ್ಯಾಂತರ ಫ್ಯಾನ್ಸ್ ಇದ್ದಾರೆ. ಹಾಗಾಗಿ ಇಂತಹ ಇಸ್ಲಾಂ ವಿರೋಧಿ ಚಟುವಟಿಕೆಯಿಂದ ಸಲ್ಲು ದೂರ ಇರಬೇಕು ಎಂದು ಮೌಲಾನಾ ಶಹಾಬುದ್ದೀನ್ ರಾಜ್ವಿ ಆಗ್ರಹಿಸಿದ್ದಾರೆ. ಸಲ್ಮಾನ್ ಖಾನ್ ಇರಲಿ, ಬೇರೆ ಯಾವುದೇ ಮುಸ್ಲಿಂ ವ್ಯಕ್ತಿಯಾಗಿರಲಿ ರಾಮಮಂದಿರ ಅಥವಾ ಬೇರೆ ಇತರೆ ಮುಸ್ಲಿಮೇತರ ವಿಚಾರ ವಿಷಯಗಳನ್ನು ಪ್ರಚಾರ ಮಾಡುತ್ತಿದ್ದರೆ ಅದನ್ನು ಇಸ್ಲಾಂನಲ್ಲಿ ಕಾನೂನು ಬಾಹಿರ ಮತ್ತು ಹರಾಮ್ ಎಂದು ಪರಿಗಣಿಸಲಾಗುತ್ತೆ ಎಂದಿದ್ದಾರೆ. ಶರಿಯತ್ ತತ್ವಗಳನ್ನು ಸಲ್ಮಾನ್ ಖಾನ್ ಚಾಚು ತಪ್ಪದೇ ಅನುಸರಿಸಬೇಕೆಂದು ಕಿಡಿ ಕಾರಿದ್ದಾರೆ.
ಮೌಲಾನಾ ಶಹಾಬುದ್ದೀನ್ ರಾಜ್ವಿ ಅವರ ಈ ಮಾತುಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಕೆಲವರು ಮೌಲಾನಾ ಅವರ ಮಾತುಗಳನ್ನು ಸಮರ್ಥಿಸಿಕೊಂಡರೆ ಇನ್ನು ಕೆಲವರು ವಿರೋಧಿಸುತ್ತಿದ್ದಾರೆ. ಎಲ್ಲ ವಿಚಾರದಲ್ಲಿಯೂ ಧರ್ಮವನ್ನು ಎಳೆದು ತರುವುದು ತಪ್ಪು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಅಂದಹಾಗೆ, ಸಲ್ಮಾನ್ ಖಾನ್ ಧರಿಸಿದ್ದ ರಾಮ ಜನ್ಮಭೂಮಿಯ ವಾಚ್‌ನ ಬೆಲೆ 36 ಲಕ್ಷ. ರಾಮಮಂದಿರದ ವಿನ್ಯಾಸ ಒಳಗೊಂಡಿರುವ ಈ ವಾಚ್‌ನಲ್ಲಿ ಶ್ರೀರಾಮ ಮತ್ತು ಹನುಮಂತನ ಚಿತ್ರವಿದೆ. ಅದೇನೆ ಇರಲಿ, ಈಗ ರಂಜಾನ್ ಹಬ್ಬ. ಇನ್ನು, ಸಲ್ಲು ಅಭಿನಯದ ಸಿಕಂದರ್ ಮಾರ್ಚ್ 30ಕ್ಕೆ ರಿಲೀಸ್ ಆಗುತ್ತಿದೆ. ಸಲ್ಲು ಸಿನಿಮಾ ನೋಡೋಕೆ ಒಂದು ವರ್ಗ ಕಾದಿದೆ. ಈ ಮಧ್ಯೆ ಈ ವಾಚ್ ತಕರಾರಿನ ಮಾತುಗಳು ಕೇಳಿಬರುತ್ತಿವೆ. ಅದೇನೆ ಇರಲಿ, ಇಂತಹ ಟೀಕೆಗಳು ಸಲ್ಲುಗೆ ಹೊಸದೇನಲ್ಲ. ಸಲ್ಲು ಎಂದಿಗೂ ಜಾತಿ, ಧರ್ಮದ ಬಗ್ಗೆ ಮಾತಾಡಿದವರಲ್ಲ. ತಾವಾಯಿತು, ತಮ್ಮ ಸಿನಿಮಾ ಆಯಿತು ಅಂದುಕೊಂಡಿದ್ದವರು. ಇಂತಹ ಆಕ್ಷೇಪಣೆಗಳು ಬಂದರೂ ಕಿವಿಗೊಡದೆ ತಮ್ಮ ಪಾಡಿಗೆ ತಾವಿದ್ದಾರೆ ಸಲ್ಲು. ಈ ವಿಷಯದಲ್ಲೂ ಅದನ್ನೇ ಫಾಲೊ ಮಾಡ್ತಾ ಇದ್ದಾರೆ.