Friday, December 27, 2024

Latest Posts

ಚಪಾತಿ- ರೊಟ್ಟಿ ಜೊತೆ ಬೆಸ್ಟ್ ಕಾಂಬಿನೇಷನ್ ಈ ಬದನೆ ಕರಿ..!

- Advertisement -

ಚಪಾತಿ, ರೊಟ್ಟಿ ಜೊತೆ ಡೇಲಿ ಡೇಲಿ ಮಾಡಿದ್ದೇ ಪಲ್ಯ ಮಾಡಿ ಮಾಡಿ ಬೋರ್ ಆಗಿದೆಯಾ..? ಒಂದೇ ಟೇಸ್ಟ್ ತಿಂದ ನಿಮ್ಮ ಮನೆ ಜನರಿಗೂ ಸ್ವಲ್ಪ ಚೇಂಜಸ್ ಬೇಕು ಅನ್ನಿಸಿದೆಯಾ..? ಹಾಗಾದ್ರೆ ನಾವಿವತ್ತು ನಿಮಗೆ ಬದ್ನೇಕಾಯಿ ಕರಿ ಮಾಡೋದನ್ನ ಹೇಳಿಕೊಡ್ತೀವಿ. ಇದು ಚಪಾತಿಗೆ ಸೂಪರ್ ಕಾಂಬಿನೇಷನ್ ಆಗಿದ್ದು, ತಿಂದ್ರೆ ತಿಂತಾನೇ ಇರ್ಬೇಕು ಅನ್ನುವಷ್ಟು ಟೇಸ್ಟಿಯಾಗಿರತ್ತೆ.

ಹಾಗಾದ್ರೆ ಕರಿ ಮಾಡೋಕ್ಕೆ ಏನೇನ್ ಬೇಕು ಅನ್ನೋದನ್ನ ನೋಟ್ ಮಾಡಿಕೊಳ್ಳಿ.

3 ಬದನೇಕಾಯಿ, ಒಂದು ಕಪ್ ಕೊಬ್ಬರಿ ತುರಿ, ಸ್ವಲ್ಪ ಹುಣಸೆಹಣ್ಣು, 4-5 ಎಣ್ಣೆಯಲ್ಲಿ ಹುರಿದ ಒಣ ಮೆಣಸಿನಕಾಯಿ, ಚಿಕ್ಕ ತುಂಡು ಹಸಿ ಶುಂಠಿ, 2 ಸ್ಪೂನ್ ಜೀರಿಗೆ, 2 ಸ್ಪೂನ್ ಕೊತ್ತಂಬರಿ ಕಾಳು, 2 ಸ್ಪೂನ್ ಉದ್ದಿನ ಬೇಳೆ, ಅರ್ಧ ಕಪ್ ಬೆಲ್ಲ, ಚಿಟಿಕೆ ಹೀಂಗೂ, ಚಿಟಿಕೆ ಅರಿಷಿನ, ಒಗ್ಗರಣೆಗೆ 2 ಸ್ಪೂನ್ ಎಣ್ಣೆ, ಅರ್ಧ ಸ್ಪೂನ್ ಸಾಸಿವೆ, ಅರ್ಧ ಸ್ಪೂನ್ ಜೀರಿಗೆ, ಅರ್ಧ ಸ್ಪೂನ್ ಉದ್ದಿನ ಬೆಳೆ, ಅಗತ್ಯವಿದ್ದರೆ 10ರಿಂದ15 ಶೇಂಗಾ ಬೀಜ, 5ರಿಂದ 6 ಎಸಳು ಕರಿಬೇವು, ಖಾರ ಹೆಚ್ಚಿಗೆ ಬೇಕಾದಲ್ಲಿ ಹಸಿ ಮೆಣಸು ಅಥವಾ ಖಾರದ ಪುಡಿ ಬಳಸಬಹುದು, ರುಚಿಗೆ ತಕ್ಕಷ್ಟು ಉಪ್ಪು.

ಮೊದಲು ಬದನೆಕಾಯಿಯನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ ಕತ್ತರಿಸಿ ಉಪ್ಪು ನೀರಿನಲ್ಲಿ ಹಾಕಿ, ಪಕ್ಕಕ್ಕಿರಿಸಿ. ಈಗ ಮಿಕ್ಸಿ ಜಾರ್‌ಗೆ ಕೊಬ್ಬರಿ ತುರಿ, ಹುಣಸೆಹಣ್ಣು, ಎಣ್ಣೆಯಲ್ಲಿ ಹುರಿದ ಒಣ ಮೆಣಸಿನಕಾಯಿ, ಚಿಕ್ಕ ತುಂಡು ಹಸಿ ಶುಂಠಿ ಜಜ್ಜಿ ಹಾಕಿ ಒಮ್ಮೆ ರುಬ್ಬಿ. ಈಗ ಒಂದು ಪ್ಯಾನ್‌ಗೆ ಜೀರಿಗೆ, ಕೊತ್ತಂಬರಿ ಕಾಳು, ಉದ್ದಿನ ಬೇಳೆ ಹಾಕಿ, ಕಂದು ಬಣ್ಣಕ್ಕೆ ತಿರುಗಿ ಘಮ ಬರುವಷ್ಟು ಹುರಿದು, ರುಬ್ಬಿರುವ ಮಿಶ್ರಣಕ್ಕೆ ಸೇರಿಸಿ ಮತ್ತೊಮ್ಮೆ ರುಬ್ಬಿ. ಈಗ ಕರಿಗೆ ಬೇಕಾಗಿರುವ ಮಸಾಲೆ ರೆಡಿ.

ಈಗ ಪ್ಯಾನ್‌ಗೆ ಸ್ವಲ್ಪ ಎಣ್ಣೆ ಹಾಕಿ, ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಶೇಂಗಾಬೀಜ, ಕರಿಬೇವು ಹಾಕಿ ಹುರಿಯಿರಿ. ಈಗ ಇದಕ್ಕೆ ಉಪ್ಪು ನೀರಿನಲ್ಲಿ ನೆನೆಸಿದ ಬದನೇಕಾಯಿ ಹಾಕಿ 2 ರಿಂದ 3 ನಿಮಿಷ ಹುರಿಯಿರಿ. ರುಬ್ಬಿದ ಮಸಾಲೆ ಮಿಶ್ರಣದ ಜೊತೆ ಅಗತ್ಯವಿದ್ದಷ್ಟು ನೀರು, ಅರಿಷಿಣ, ಬೆಲ್ಲ, ಹೀಂಗೂ, ಉಪ್ಪು ಹಾಕಿ ಮಂದ ಉರಿಯಲ್ಲಿ 10 ನಿಮಿಷ ಬೇಯಿಸಿದರೆ ಬದನೇಕಾಯಿ ಕರಿ ರೆಡಿ.

ಚಪಾತಿ, ರೊಟ್ಟಿ, ದೋಸೆ, ಪರೋಟ ಎಲ್ಲಾದಕ್ಕೂ ಈ ಕರಿ ಸಖತ್ ಸೂಟ್ ಆಗತ್ತೆ. ಅಲ್ಲದೇ, ಅನ್ನದ ಜೊತೆಯೂ ಕೂಡ ಕಲಿಸಿ ತಿನ್ನಬಹುದು.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

- Advertisement -

Latest Posts

Don't Miss