Spiritual: ಬಿಲ್ವಪತ್ರೆ ಎಂದರೆ ಶಿವನಿಗೆ ಬಹುಪ್ರಿಯವಾದ ಎಲೆಯಾಗಿದೆ. ಬಿಲ್ವಪತ್ರೆ ಹಾಕಿ, ಶಿವನಲ್ಲಿ ಪ್ರಾರ್ಥಿಸಿದರೆ, ನೀವೇನು ಬೇಡುತ್ತಿರೋ, ಶಿವ ಅದನ್ನು ನಿಮಗೆ ನೀಡುತ್ತಾನೆಂದು ಹೇಳಲಾಗುತ್ತದೆ. ಆದರೆ ಬಿಲ್ವಪತ್ರೆಯನ್ನು ಮನೆಯ ಬಳಿ ನೆಡಬಹುದಾ..? ಇದು ಒಳ್ಳೆಯದ್ದೋ..? ಕೆಟ್ಟದ್ದೋ..? ಈ ಗಿಡ ಮನೆಯ ಬಳಿ ನೆಟ್ಟರೆ ಅದರಿಂದ ಏನಾಗುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಬಿಲ್ವಪತ್ರೆ ಮರವನ್ನು ಮನೆಯ ಬಳಿ ನೆಟ್ಟರೆ ತುಂಬಾ ಒಳ್ಳೆಯದು. ಬಿಲ್ವಪತ್ರೆ ಎಂದರೆ, ಲಕ್ಷ್ಮೀಯ ಪ್ರತೀರೂಪ. ಲಕ್ಷ್ಮೀಯೇ ಬಿಲ್ವಪತ್ರೆಯಾಗಿ, ಶಿವನಿಗೆ ಅರ್ಪಿತವಾಗುತ್ತಾಳೆ. ಹಾಗಾಗಿ ಮನೆಯ ಬಳಿ ಬಿಲ್ವಪತ್ರೆ ಗಿಡವನ್ನು ನೆಟ್ಟರೆ, ಲಕ್ಷ್ಮೀಯ ಕೃಪಾಕಟಾಕ್ಷ ನಿಮ್ಮ ಮೇಲಿರುತ್ತದೆ. ಹಾಗಾಗಿ ನಿಮ್ಮ ಆರ್ಥಿಕ ಸಮಸ್ಯೆಗಳಿಗೆಲ್ಲ ಪರಿಹಾರ ಸಿಗುತ್ತದೆ.
ನಿಮ್ಮ ಮನೆಯ ಬಳಿ ಬಿಲ್ವಪತ್ರೆ ಮರವಿದ್ದಲ್ಲಿ, ನೀವು ಮಡಿಯನ್ನು ಪಾಲಿಸಬೇಕು. ಆ ಮರವನ್ನು ಸುಮ್ಮಸುಮ್ಮನೆ ಮುಟ್ಟುವಂತಿಲ್ಲ. ಆ ಮರಕ್ಕೆ ಋತುಮತಿಯಾದವರು, ಅಮೆ, ಸೂತಕ ಇದ್ದವರು ಮುಟ್ಟಬಾರದು. ಈ ರೀತಿಯಾಗಿ ಮಡಿ ಪಾಲಿಸಬೇಕು. ಆ ಮರ ಸಮೃದ್ಧವಾಗಿ ಬೆಳೆದಷ್ಟು ನಿಮ್ಮ ಮನೆಯಲ್ಲಿ ನೆಮ್ಮದಿ, ಆರ್ಥಿಕ ಸಾಮರ್ಥ್ಯ ಉತ್ತಮವಾಗಿರುತ್ತದೆ. ಏಕೆಂದರೆ, ಬಿಲ್ವಪತ್ರೆ ಇರುವ ಜಾಗ, ಪವಿತ್ರ ಜಾಗವೆಂದು ಹೇಳಲಾಗುತ್ತದೆ. ಅದೇ ಪಾವಿತ್ರ್ಯತೆಯನ್ನು ಕಾಪಾಡಿಕೊಂಡರೆ, ಬಿಲ್ವಪತ್ರೆ ಮರ ಚೆನ್ನಾಗಿ ಬೆಳೆಯುತ್ತದೆ.
ಇನ್ನು ಬಿಲ್ವಪತ್ರೆ ಮರವಿದ್ದಲ್ಲಿ, ನಕಾರಾತ್ಮಕ ಶಕ್ತಿಗಳು, ಮಾಟ ಮಂತ್ರಗಳ ಪ್ರಭಾವ ಬೀರುವುದಿಲ್ಲವೆಂದು ಹೇಳುತ್ತಾರೆ. ಅಲ್ಲದೇ, ಬಿಲ್ವಪತ್ರೆಯನ್ನು ನೆಟ್ಟು, ಚೆನ್ನಾಗಿ ಬೆಳೆಸಿದ್ದಲ್‌ಲಿ, ಅವರ ವಂಶವೂ ಅಭಿವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಅಲ್ಲದೇ, ಎಲ್ಲಿ ಬಿಲ್ವಪತ್ರೆ ಮರವಿರುತ್ತದೆಯೋ, ಅಲ್ಲಿ ವಿಷ ಜಂತುಗಳು, ಸರ್ಪಗಳು ಬರುವುದಿಲ್ಲವೆಂಬ ನಂಬಿಕೆ ಇದೆ.
ನೀವು ಬಿಲ್ವಪತ್ರೆಯನ್ನು ಸೋಮವಾರದ ದಿನ ಶಿವನಿಗೆ ಅರ್ಪಿಸಿದ್ದಲ್ಲಿ, ನಿಮ್ಮ ಸಕಲ ಪಾಪ ನಾಶವಾಗುತ್ತದೆ ಅನ್ನೋ ನಂಬಿಕೆ ಇದೆ. ಅಲ್ಲದೇ, ಪುಣ್ಯ ಪ್ರಾಪ್ತಿಯಾಗುತ್ತದೆ ಅಂತಲೂ ಹೇಳಲಾಗುತ್ತದೆ. ಮನೆಯಲ್ಲಿ ಶಾಂತಿ, ನೆಮ್ಮದಿ, ಕೆಲಸದಲ್ಲಿ ಯಶಸ್ಸು ಸಿಗಬೇಕು, ವಿವಾಹವಾಗಬೇಕು ಎಂದಲ್ಲಿ ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸಿ. ಅಮವಾಸ್ಯೆ, ಚತುರ್ಥಿ, ಅಷ್ಟಮಿ, ನವಮಿ, ಚತುರ್ದಶಿಯಂದು ಬಿಲ್ವಪತ್ರೆ ಕೀಳಬೇಡಿ.