ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ಸೋನಿಯಾ ಗಾಂಧಿ ಅಥವಾ ಶರದ್ ಪವಾರ್ ಪ್ರಧಾನ ಮಂತ್ರಿಯಾಗಬಹುದಿತ್ತು ಅಂತ ಕೇಂದ್ರ ಸಚಿವ ರಾಮದಾಸ್ ಅಠಾವಳೆ ಹೇಳಿದ್ದಾರೆ.
ಮಧ್ಯಪ್ರದೇಶದ ಇಂಡೋರ್ ನಲ್ಲಿ ಮಾತನಾಡಿದ ಸಚಿವ ಅಠಾವಳೆ, ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅಮೆರಿಕದ ಉಪಾಧ್ಯಕ್ಷರಾಗುತ್ತಾರೆ ಎಂದಾದ್ರೆ, 2004ರಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಚುನಾವಣೆಯ ನಂತರ ಭಾರತದ ಪ್ರಧಾನಮಂತ್ರಿಯಾಗಬಹುದಿತ್ತು ಅಂತ ಹೇಳಿದ್ರು. ಅಲ್ಲದೆ ತಾವೇ ಸೋನಿಯಾ ಬಳಿ ಈ ಬಗ್ಗೆ ಪ್ರಸ್ತಾಪವಿಟ್ಟಿದ್ದಾಗಿಯೂ ಅವರು ಹೇಳಿದ್ರು.
ಇನ್ನು ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅಮೆರಿಕಾ ಉಪಾಧ್ಯಕ್ಷೆಯಾಗಿದ್ದಾರೆ. ಇದೇ ರೀತಿ ಸೋನಿಯಾ ವಿದೇಶಿಗರೆನ್ನೋದು ನಿಜ, ಆದ್ರೆ ಅವರು ದೇಶದ ಪ್ರಜೆ, ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪತ್ನಿ ಮತ್ತು ಲೋಕಸಭಾ ಸಂಸದೆಯೂ ಆಗಿದ್ರು. ಹೀಗಾಗಿ ಸೋನಿಯಾ ಗಾಂಧಿ ದೇಶದ ಪ್ರಧಾನ ಮಂತ್ರಿಯಾಗಬಹುದಿತ್ತು. ಇಲ್ಲವಾದಲ್ಲಿ ಆ ಸ್ಥಾನಕ್ಕೆ ಮನಮೋಹನ್ ಸಿಂಗ್ ಬದಲು ಎನ್ ಸಿಪಿ ಮುಖ್ಯಸ್ಥ, ಹಿರಿಯ ನಾಯಕ ಶರದ್ ಪವಾರ್ ಅವರಿಗಾದ್ರೂ ಅವಕಾಶ ನೀಡಿದ್ದರೆ ಕಾಂಗ್ರೆಸ್ ಇಂದು ಈ ಪರಿಸ್ಥಿತಿಗೆ ಬರುತ್ತಿರಲಿಲ್ಲ ಅಂತ ಅಠಾವಳೆ ಟೀಕಿಸಿದ್ದಾರೆ.