Chamaraja Nagara: ಬಿಜೆಪಿಯವರೇ ಮಹಿಳಾ ಮೀಸಲಾತಿ ವಿರೋಧಿಗಳು: ಸಿಎಂ ಸಿದ್ದರಾಮಯ್ಯ

Political News: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಾಧ್ಯಮದ ಜೊತೆ ಮಾತನಾಡಿದ್ದು, ಬಿಜೆಪಿಯವರೇ ಮಹಿಳಾ ಮೀಸಲಾತಿ ವಿರೋಧಿಗಳು ಎಂದು ಟೀಕಿಸಿದ್ದಾರೆ.

ಈ ಬಗ್ಗೆ ಮಾತು ಮುಂದುವರಿಸಿದ ಅವರು, ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಸಂವಿಧಾನಕ್ಕೆ 73, 74 ನೇ ತಿದ್ದುಪಡಿಗಳನ್ನು ತಂದು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ, ಹಿಂದುಳಿದವರಿಗೆ ಮೀಸಲಾತಿ ತಂದಿದ್ದು ಕಾಂಗ್ರೆಸ್ ಪಕ್ಷದ ಸರ್ಕಾರ. ಅದನ್ನು ರಾಜ್ಯ ಸಭೆಯಲ್ಲಿ ಕೆಡವಿದವರು ಎನ್.ಡಿ. ಎ. ಈಗ ರಾಜಕೀಯಕ್ಕಾಗಿ ಕ್ಷೇತ್ರ ಮರುವಿಂಗಡಣೆಗೆ ಸೇರಿಸಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದ್ದಾರೆ. ನಮ್ಮದು ಕ್ಷೇತ್ರ ಮರು ವಿಂಗಡಣೆಗೆ ವಿರೋಧವೇ ಹೊರತು ಮಹಿಳಾ ಮೀಸಲಾತಿಗೆ ಅಲ್ಲ ಎಂದು ಸಿಎಂ ಮತ್ತೆ ಸ್ಪಷ್ಟನೆ ನೀಡಿದ್ದಾರೆ.

ಶಾಸಕ ಹ್ಯಾರೀಸ್ ಅವರ ಪುತ್ರ ನಲಪಾಡ್ ಅವರ ಮನೆ ಮೇಲೆ ಇಡಿ ದಾಳಿ ಮಾಡಿದೆ. ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳು ಕಾಂಗ್ರೆಸ್ ನವರನ್ನು ಗುರಿಯಾಗಿಸಿ ದಾಳಿ ಮಾಡುತ್ತಿದ್ದು, ಬಿಜೆಪಿಯವರ ಮೇಲೆ ದಾಳಿ ಆಗುತ್ತಿಲ್ಲ ಎಂದು ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಇನ್ನು ದಾವಣಗೆರೆಯಲ್ಲಿ ಅಲ್ಪ ಸಂಖ್ಯಾತರಿಗೆ ಟಿಕೇಟ್ ಸಿಗಲಿಲ್ಲ ಎಂಬ ಕೋಪವಿದ್ದು, ಈ ಬಾರಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲೋದು ಡೌಟ್ ಎಂಬ ಅನುಮಾನದ ಬಗ್ಗೆ ಉತ್ತರಿಸಿದ ಸಿಎಂ, ಅಲ್ಪಸಂಖ್ಯಾತರನ್ನು ನಮ್ಮ ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ ಎನ್ನುವುದು ತಪ್ಪು. ದಾವಣಗೆರೆಯ ಟಿಕೆಟ್ ವಿಚಾರದಲ್ಲಿ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳುವಾಗ ಅಲ್ಪಸಂಖ್ಯಾತ ಸಮುದಾಯದ ನಾಯಕರು ಉಪಸ್ಥಿತರಿದ್ದರು. ಅವರೆದುರೇ ಯಾರಿಗೆ ಟಿಕೆಟ್ ಕೊಡಬೇಕು ಎನ್ನುವ ತೀರ್ಮಾನವಾಗಿತ್ತು, ನಂತರ ಅವರು ವಿರೋಧ ಮಾಡಿದ್ದಾರೆ. ದಾವಣಗೆರೆ ಮತ್ತು ಬಾಗಲಕೋಟೆ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎನ್ನುವ ವಿಶ್ವಾಸ ನನಗಿದೆ ಎಂದಿದ್ದಾರೆ.

ಇನ್ನು ಚಾಮರಾಜನಗರಕ್ಕೆ ಬರುವ ರಾಜಕೀಯ ಗಣ್ಯರು ಚುನಾವಣೆಯಲ್ಲಿ ಸೋಲುತ್ತಾರೆ, ಇದೊಂದು ಶಾಪಗ್ರಸ್ತ ಕ್ಷೇತ್ರ ಅನ್ನೋ ಗಾಳಿ ಮಾತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ, ಚಾಮರಾಜನಗರಕ್ಕೆ ಬಂದರೆ ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ ಎನ್ನುವುದು ಒಂದು ಮೌಢ್ಯ. ಇಂತಹ ಮೂಢನಂಬಿಕೆಗಳಲ್ಲಿ ನನಗೆ ನಂಬಿಕೆಯಿಲ್ಲ. ಹಾಗಾಗಿ ಚಾಮರಾಜನಗರಕ್ಕೆ ಸಾಕಷ್ಟು ಬಾರಿ ಭೇಟಿ ನೀಡುತ್ತಿದ್ದೇನೆ. ಇಲ್ಲಿಗೆ ಬಂದರೆ ಕುರ್ಚಿ ಗಟ್ಟಿಯಾಗುತ್ತದೆ ಎಂದು ಪ್ರಾಸಂಗಿಕವಾಗಿ ಹೇಳಿದ್ದೆ ಅಷ್ಟೆ ಎಂದಿದ್ದಾರೆ.

About The Author