Sunday, September 8, 2024

Latest Posts

ಕೇರಳ ಸ್ಟೈಲ್ ತೆಂಗಿನಕಾಯಿ ಚಿತ್ರಾನ್ನ ರೆಸಿಪಿ..

- Advertisement -

ನೀವು ನಾರ್ಮಲ್ ಚಿತ್ರಾನ್ನನಾ ಸುಮಾರು ಸಲ ತಿಂದಿರ್ತೀರಿ. ಆದ್ರೆ ಕೇರಳ ಸ್ಟೈಲ್ ತೆಂಗಿನಕಾಯಿ ಚಿತ್ರಾನ್ನನಾ ಕೆಲವೇ ಕೆಲವರು ತಿಂದಿರ್ತಾರೆ. ಹಾಗಾಗಿ ಇಂದು ನಾವು ಕೇರಳ ಸ್ಟೈಲ್ ಚಿತ್ರಾನ್ನ ರೆಸಿಪಿಯನ್ನ ತಿಳಿಸಲಿದ್ದೇವೆ. ಹಾಗಾದ್ರೆ ತೆಂಗಿನಕಾಯಿ ಚಿತ್ರಾನ್ನ ಮಾಡೋಕ್ಕೆ ಏನೇನು ಸಾಮಗ್ರಿ ಬೇಕು..? ಇದನ್ನ ಮಾಡೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಒಂದು ದೊಡ್ಡ ಕಪ್ ತೆಂಗಿನ ತುರಿ, ಒಂದು ಸ್ಪೂನ್ ಜೀರಿಗೆ, ಅರ್ಧ ಸ್ಪೂನ್ ಕೊತ್ತೊಂಬರಿ ಕಾಳು, ಎರಡು ಒಣ ಮೆಣಸು, ಚಿಕ್ಕ ತುಂಡು ಹುಣಸೆ ಹಣ್ಣು, ಅರ್ಧ ಕಪ್ ಶೇಂಗಾ ಕಾಳು, ನಾಲ್ಕು ಸ್ಪೂನ್ ಎಣ್ಣೆ, ಸಾಸಿವೆ ಕಾಳು, ಕರಿಬೇವಿನ ಸೊಪ್ಪು, ಒಂದು ಸ್ಪೂನ್ ಉದ್ದಿನ ಬೇಳೆ, ಒಂದು ಸ್ಪೂನ್ ಕಡಲೆ ಬೇಳೆ, ಎರಡು ಬೌಲ್ ಅನ್ನ, ಅರ್ಧ ಸ್ಪೂನ್ ಅರಿಷಿನ, ಚಿಕ್ಕ ತುಂಡು ಬೆಲ್ಲ ಅಥವಾ ಸ್ವಲ್ಪ ಸಕ್ಕರೆ, ರುಚಿಗೆ ತಕ್ಕಷ್ಟು ಉಪ್ಪು. ಇವಿಷ್ಟು ತೆಂಗಿನಕಾಯಿ ಚಿತ್ರಾನ್ನ ಮಾಡಲು ಬೇಕಾಗುವ ಸಾಮಗ್ರಿ.

ಚಿತ್ರಾನ್ನ ಮಾಡುವ ಮೊದಲು ತೆಂಗಿನಕಾಯಿ ಮಸಾಲೆ ಮಾಡಿಕೊಳ್ಳಬೇಕು. ಮಿಕ್ಸಿ ಜಾರ್‌ಗೆ ಕೊಬ್ಬರಿತುರಿ, ಒಣಮೆಣಸಿನಕಾಯಿ, ಹುಣಸೆಹಣ್ಣು, ಬೆಲ್ಲ, ಜೀರಿಗೆ, ಕೊತ್ತಂಬರಿ ಕಾಳು, ಕೊಂಚ ಕರೀಬೇವು, ಉಪ್ಪು, ಹಾಕಿ, ಮಸಾಲೆ ತಯಾರಿಸಿಟ್ಟುಕೊಳ್ಳಿ. ಈಗ ಗ್ಯಾಸ್ ಆನ್‌ ಮಾಡಿ, ಒಂದು ಪ್ಯಾನ್ ಇಟ್ಟು. ಅದಕ್ಕೆ ಎಣ್ಣೆ ಹಾಕಿ ಕೊಂಚ ಬಿಸಿ ಮಾಡಿ. ಎಣ್ಣೆ ಬಿಸಿಯಾದ ಬಳಿಕ ಅದಕ್ಕೆ ಸಾಸಿವೆ ಹಾಕಿ ಚಟಪಟ ಸದ್ದು ಬಂದ ಬಳಿಕ, ಉದ್ದಿನ ಬೇಳೆ, ಕಡಲೆ ಬೇಳೆ, ಕರಿಬೇವಿನ ಸೊಪ್ಪು, ಶೇಂಗಾ ಕಾಳು, ಅರಿಷಿನ ಹಾಕಿ ಹುರಿದುಕೊಳ್ಳಿ. ಇದಾದ ಬಳಿಕ ರೆಡಿ ಮಾಡಿಟ್ಟುಕೊಂಡ ಕೊಬ್ಬರಿ ಮಸಾಲೆ ಹಾಕಿ, ಹಸಿ ಪರಿಮಳ ಹೋಗುವ ತನಕ ಹುರಿಯಿರಿ.

ಈಗ ಈ ಮಿಶ್ರಣಕ್ಕೆ ಅನ್ನ ಸೇರಿಸಿ ಮಿಕ್ಸ್ ಮಾಡಿ, ಎರಡು ನಿಮಿಷ ಬಿಟ್ಟು ಗ್ಯಾಸ್ ಆಫ್ ಮಾಡಿದ್ರೆ, ಕೇರಳ ಸ್ಟೈಲ್ ತೆಂಗಿನಕಾಯಿ ಚಿತ್ರಾನ್ನ ರೆಡಿ. ಇದಕ್ಕೆ ನೀವು ಒಣ ಮೆಣಸಿನ ಬದಲು, ಹಸಿ ಮೆಣಸಿನಕಾಯಿ, ಅಥವಾ ಖಾರದ ಪುಡಿ ಬಳಸಬಹುದು. ಬೆಲ್ಲದ ಬದಲು ಸಕ್ಕರೆ ಬಳಸಬಹುದು. ಕೊನೆಗೆ ಬೇಕಾದ್ದಲ್ಲಿ ನಿಂಬೆಹಣ್ಣು ಹಿಂಡಿ, ಕೊತ್ತಂಬರಿ ಸೊಪ್ಪಿನ್ನು ಕೂಡ ಸೇರಿಸಿಕೊಳ್ಳಬಹುದು.

- Advertisement -

Latest Posts

Don't Miss