Spiritual: ಸಮುದ್ರ ಮಂಥನದಲ್ಲಿ ಲಕ್ಷ್ಮೀ ಉದ್ಭವಿಸಿ, ಶ್ರೀವಿಷ್ಣುವಿನ ಪತ್ನಿಯಾದಳು ಅನ್ನೋದು ಎಲ್ಲರಿಗೂ ಗೊತ್ತು. ಆದರೆ, ಲಕ್ಷ್ಮೀ ಯಾವ ಕಾರಣಕ್ಕೆ, ಹೇಗೆ ಸಮುದ್ರ ಮಂಥನದ ಸಮಯದಲ್ಲಿ ಉದ್ಭವಿಸಿದಳು ಅನ್ನೋದು ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ..
ಒಮ್ಮೆ ದೂರ್ವಾಸ ಮುನಿಗಳು ಶಿವನನ್ನು ಭೇಟಿಯಾಗಿ, ಹಿಂದಿರುಗುತ್ತಿದ್ದರು. ಈ ವೇಳೆ ಶಿವ ಅವರಿಗೆ ಹಾರವೊಂದನ್ನು ಉಡುಗೊರೆಯಾಗಿ ನೀಡಿದ. ಬಳಿಕ ಮುನಿಗಳು ಹೊರಡುವಾಗ, ಮಾರ್ಗ ಮಧ್ಯ ಅವರಿಗೆ ಇಂದ್ರ ಭೇಟಿಯಾದ. ದೂರ್ವಾಸರನ್ನು ಕಂಡು ಇಂದ್ರ, ವಿನಮೃತೆಯಿಂದ ನಮಸ್ಕರಿಸಿದ. ದೇವೇಂದ್ರ ತನಗೆ ನೀಡಿದ ಗೌರವದಿಂದ ಪ್ರಸನ್ನರಾದ ದೂರ್ವಾಸರು, ಶಿವ ತಮಗೆ ನೀಡಿದ ಹಾರವನ್ನು, ಇಂದ್ರನಿಗೆ ನೀಡಿದರು.
ಆದರೆ ಸೊಕ್ಕಿನಿಂದ ಇದ್ದ ಇಂದ್ರ, ಆ ಹಾರವನ್ನು ತನ್ನ ಆನೆ ಐರಾವತಕ್ಕೆ ಹಾಕಿದ. ಇದು ಐರಾವತದ ಕೊರಳಿಗೆ ಬಿದ್ದ ತಕ್ಷಣ, ಇನ್ನಷ್ಟು ಶಕ್ತಿಯುತವಾದ ಆನೆ, ಆ ಹಾರ ಮತ್ತು ಇಂದ್ರ ಇಬ್ಬರನ್ನು ತ್ಯಜಿಸಿ, ಕಾಡಿಗೆ ಹೊರಟುಹೋಯಿತು. ಇನ್ನು ತಾನು ನೀಡಿದ ಉಡುಗೊರೆಯನ್ನು ಸೊಕ್ಕಿನಿಂದ ತನ್ನ ಆನೆಗೆ ಹಾಕಿದ ಇಂದ್ರನ ವಿರುದ್ಧ, ದೂರ್ವಾಸರಿಗೂ ಕೋಪ ಬಂತು. ಹಾಗಾಗಿ ಅವರು ನಿನ್ನ ಬಳಿ ಇರುವ ಐಶ್ವರ್ಯವೆಲ್ಲ ಮಾಯವಾಗಲಿ ಎಂದು ಶಾಪ ನೀಡಿದರು.
ಆ ತಕ್ಷಣ, ಇಂದ್ರನ ಇಂದ್ರಲೋಕದಲ್ಲಿದ್ದ ಐಶ್ವರ್ಯ ಮಾಯವಾಯಿತು. ಸ್ವರ್ಗಲೋಕದ ಅಧಿಪತಿಯಾಗಿದ್ದ ಇಂದ್ರ, ನಿರ್ಗತಿಕನಾಗಿಬಿಟ್ಟ. ರಾಕ್ಷಸರೆಲ್ಲ ಸ್ವರ್ಗದ ಮೇಲೆ ದಾಳಿ ಮಾಡಿ, ಸ್ವರ್ಗ ಲೋಕವನ್ನು ತಮ್ಮ ವಶಕ್ಕೆ ಮಾಡಿಕೊಂಡರು. ಆಗ ದೇವತೆಗಳೆಲ್ಲ ಬ್ರಹ್ಮನ ಬಳಿ ಪರಿಹಾರ ಕೇಳಲು ಹೋದರು. ಬ್ರಹ್ಮ, ನೀವೆಲ್ಲ ವಿಷ್ಣುವಿನ ಬಳಿ ಪರಿಹಾರ ಕೇಳಿ ಎಂದು ಸಲಹೆ ನೀಡಿದರು.
ಆಗ ಎಲ್ಲ ದೇವತೆಗಳು ವಿಷ್ಣುವಿನ ಬಳಿ ಹೋಗಿ, ದಾನವರೆಲ್ಲ ಬಂದು, ಸ್ವರ್ಗಲೋಕದ ಮೇಲೆ ದಾಳಿ ಮಾಡಿದ್ದಾರೆ. ನಮ್ಮನ್ನು ನೀವೇ ಕಾಪಾಡಬೇಕು ಎಂದು ಕೇಳಿಕೊಂಡರು. ಆಗ ವಿಷ್ಣು, ಈಗ ದಾನವರಿಗೆ ಉತ್ತಮ ಕಾಲವಿದೆ. ಹಾಗಾಗಿ ನೀವು ಯುದ್ಧ ಮಾಡಿ, ಅವರಿಂದ ಸ್ವರ್ಗಲೋಕ ವಶಪಡಿಸಿಕೊಳ್ಳಲು ಸಾಧ್ಯವಿಲ್ಲ. ನೀವು ರಾಕ್ಷಸರ ಜೊತೆ ಸಂಧಾನ ಮಾಡಿ. ಕ್ಷೀರಸಾಗರದಲ್ಲಿ ಅಮೃತ ಸೇರಿ, ಹಲವು ವಸ್ತುಗಳಿದೆ. ಅವನ್ನೆಲ್ಲ ಹೊರತರಬೇಕು.
ಆ ಅಮೃತವನ್ನು ನೀವು ಸೇವಿಸಿದರೆ, ನಿಮಗೆ ಸಾವೇ ಬರುವುದಿಲ್ಲ. ನೀವು ಅಮರರಾಗುವಿರಿ. ಆ ಅಮೃತ ಸಿಕ್ಕರೆ ನಿಮಗೂ ಕೊಡುತ್ತೇವೆಂದು ಹೇಳಿ, ನೀವು ರಾಕ್ಷಸರೊಂದಿಗೆ ಸಂಧಾನ ಮಾಡಿ. ಉಳಿದದ್ದನ್ನು ನಾನು ನೋಡಿಕೊಳ್ಳುತ್ತೇನೆ ಎನ್ನುತ್ತಾರೆ. ಆಗ ದೇವತೆಗಳೆಲ್ಲ ಸೇರಿ, ದಾನವರ ಬಳಿ ಹೋಗಿ, ಸಂಧಾನ ಮಾಡಿಕೊಳ್ಳುತ್ತಾರೆ. ನಂತರ ಏನಾಗುತ್ತದೆ..? ಲಕ್ಷ್ಮೀ ಹೇಗೆ ಜನಿಸುತ್ತಾಳೆ..? ಇಂದ್ರ ಮತ್ತೆ ಶ್ರೀಮಂತನಾಗುತ್ತೀನೆಯೇ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.