Political News: ಮಾಜಿ ಶಾಸಕ ಪ್ರೀತಂಗೌಡ, ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದು, ಕಾಂಗ್ರೆಸ್ ಹಿಂದೂಗಳ ದೇವಸ್ಥಾನದ ಹುಂಡಿಗೆ ಕೈ ಹಾಕುತ್ತಿದೆ ಎಂದು ಆರೋಪಿಸಿದ್ದಾರೆ.
ಅಂದು ನಮ್ಮ ದೇವಾಲಯಗಳನ್ನು ಪದೇಪದೇ ಲೂಟಿ ಮಾಡಿ ಧ್ವಂಸಗೊಳಿಸಿದ ಮೊಹಮ್ಮದ್ ಘಜ್ನಿಯಂತೆ ಈಗ ದೇವಾಲಯಗಳ ಹುಂಡಿ ಲೂಟಿಮಾಡಲು ಕಾಂಗ್ರೆಸ್ ಹೊರಟಿದೆ. ರಾಜ್ಯದ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ವಿಧಾನ ಪರಿಷತ್‌ನಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯದತ್ತಿಗಳ ವಿಧೇಯಕವನ್ನು ಮಂಡಿಸಿ ಮುಖಭಂಗಕ್ಕೀಡಾಗಿತ್ತು. ಹಿಂದೂಗಳ ವಿರೋಧದ ನಡುವೆಯೂ ಈ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ವಿಧೇಯಕ ಮಂಡಿಸುತ್ತಿದೆ. ಕರ್ನಾಟಕ ಹೈಕೋರ್ಟ್ ಇದೊಂದು ಅಸಂವಿಧಾನಿಕ ಮತ್ತು ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಕಾಯ್ದೆಯನ್ನು ತಳ್ಳಿ ಹಾಕಿದೆ. ಸುಪ್ರೀಂ ಕೋರ್ಟ್‌ನಲ್ಲಿ ಸಹ ಈ ಕಾಯ್ದೆಗೆ ತಡೆಯಾಜ್ಞೆ ಇದೆ. ಇಷ್ಟೆಲ್ಲಾ ಇದ್ದರೂ ಸಿಎಂ ಸಿದ್ದರಾಮಯ್ಯ ದೇವಾಲಯಗಳನ್ನು ಲೂಟಿ ಮಾಡಿಯೇ ಸಿದ್ದ ಎಂದು ಈ ಕಾಯ್ದೆಯನ್ನು ಮತ್ತೊಮ್ಮೆ ಮಂಡಿಸುತ್ತಿರುವುದು ದುರಂತ ಎಂದು ಪ್ರೀತಂ ಗೌಡ ಹರಿಹಾಯ್ದಿದ್ದಾರೆ.
ಬೆಂಗಳೂರಿನ ಹೃದಯ ಭಾಗದಲ್ಲಿರುವ ಪಶುಸಂಗೋಪನೆ ಇಲಾಖೆಗೆ ಸೇರಿರುವ ಎರಡು ಎಕರೆ ಜಾಗವನ್ನು “ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ” ಎಂಬ ಕಾರಣಕ್ಕೆ ಮುಸ್ಲಿಮರಿಗೇ ಬಿಟ್ಟುಕೊಡುವ ಘನಂದಾರಿ ನಿರ್ಧಾರಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಬಂದಿದೆ ಎಂದು ಪ್ರೀತಂಗೌಡ ಕಿಡಿಕಾರಿದ್ದಾರೆ.
ಸಿಎಂ ಸಿದ್ದರಾಮಯ್ಯನವರೇ.., ನಿಮ್ಮ ಓಲೈಕೆ ರಾಜಕಾರಣಕ್ಕೊಂದು ಮಿತಿಯಿಲ್ಲವೇ? ಅದೇ ಪಶು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿದರೆ ಸುತ್ತಮುತ್ತಲಿನ ಏರಿಯಾದಲ್ಲಿ ಜಾನುವಾರುಗಳನ್ನು ಸಾಕಿರುವ ಹೈನುಗಾರರಿಗೆ, ಸಾಕುಪ್ರಾಣಿಗಳ ಮಾಲೀಕರಿಗೆ ಉಪಯೋಗವಾಗುವುದಿಲ್ಲವೇ? ಎಂದು ಪ್ರೀತಂಗೌಡ ಪ್ರಶ್ನಿಸಿದ್ದಾರೆ.
ಆಸ್ಪತ್ರೆ ಮುಚ್ಚಿಸಿ ಬೆಂಗಳೂರಿನ ಹೊರವಲಯಕ್ಕೆ ವರ್ಗಾಯಿಸಿ ಆ ಜಾಗವನ್ನು ತರಾತುರಿಯಲ್ಲಿ ಮುಸ್ಲಿಮರಿಗೆ ನೀಡುವ ಕೆಲಸ ಮಾಡಿದ್ದೇಕೆ? ಯಾವ ಕಾರಣಕ್ಕೂ ಆ ಜಾಗವನ್ನು ಪಶು ಆಸ್ಪತ್ರೆ ಹೊರತು ಬೇರೆಯದಕ್ಕೆ ಬಳಸಬಾರದು ಎಂದು ಪ್ರೀತಂ ಗೌಡ ಆಗ್ರಹಿಸಿದ್ದಾರೆ.