Health: ಮನುಷ್ಯನ ಆರೋಗ್ಯ ಏರುಪೇರಾಗಲು ಕಾರಣ, ದೇಹದಲ್ಲಿ ವಾತ, ಪಿತ್ತ, ಮತ್ತು ಕಫದ ಪ್ರಮಾಣ ಏರುಪೇರಾಗುವುದು. ಕಫ ಹೆಚ್ಚಾದಾಗ ಒಂದು ಆರೋಗ್ಯ ಸಮಸ್ಯೆ, ಪಿತ್ತ ಹೆಚ್ಚಾದಾಗ ಇನ್ನೊಂದು ಆರೋಗ್ಯ ಸಮಸ್ಯೆ, ವಾತ ಹೆಚ್ಚಾದಾಗ ಮತ್ತೊಂದು ಆರೋಗ್ಯ ಸಮಸ್ಯೆ, ಹೀಗೆ ಒಂದೊಂದರ ಪ್ರಮಾಣ ಏರುಪೇರಾದಾಗ ಆರೋಗ್ಯ ಹಾಳಾಗುತ್ತದೆ. ಹಾಗಾದರೆ ಪಿತ್ತದೋಷ ಹೆಚ್ಚಾಗಲು ಯಾವ ಆಹಾರ ಸೇವನೆ ಕಾರಣ ಅಂತಾ ತಿಳಿಯೋಣ ಬನ್ನಿ..
ಪಿತ್ತದೋಷವೆಂದರೆ, ದೇಹದಲ್ಲಿ ಉಷ್ಣತೆ ಹೆಚ್ಚಾಗುವುದು. ಹೀಗಾದಾಗ, ಪಾದಗಳು ಉರಿಯುತ್ತದೆ. ತುಟಿ ಒಣಗುತ್ತದೆ. ದೇಹದಲ್ಲಿ ಕೆಂಪಾದ ಗುಳ್ಳೆಗಳಾಗುತ್ತದೆ. ಹಸಿವಾಗುವುದು ಕಡಿಮೆಯಾಗುತ್ತದೆ. ಮಲ ವಿಸರ್ಜನೆ ವೇಳೆ ರಕ್ತಸ್ರಾವವೂ ಆಗಬಹುದು. ಹಾಗಾದರೆ ಪಿತ್ತದೋಷ ಹೆಚ್ಚಿಸುವ ಆಹಾರಗಳು ಯಾವುದು ಅಂದರೆ, ಉಷ್ಣ ಪದಾರ್ಥ, ಖಾರಾ ಪದಾರ್ಥ, ಹುಳಿ ಪದಾರ್ಥ.
ಮೊದಲನೇಯದಾಗಿ ಉಷ್ಣ ಪದಾರ್ಥ. ಚಕ್ಕೆ, ಲವಂಗ, ಎಳ್ಳು, ಕಾಳುಮೆಣಸು, ಹಿಂಗು, ಖಾರದ ಪುಡಿ, ಕಿವಿ ಹಣ್ಣು, ಅನಾನಸ್, ಪಪ್ಪಾಯಿ, ಒಣಹಣ್ಣುಗಳು, ಇವುಗಳನ್ನ ಅಗತ್ಯಕ್ಕಿಂತ ಹೆಚ್ಚು ತಿನ್ನುವುದರಿಂದ ಪಿತ್ತದೋಷ ಕಾಡುತ್ತದೆ.
ಎರಡನೇಯದಾಗಿ ಖಾರಾ ಪದಾರ್ಥ. ಮಸಾಲೆಯುಕ್ತ ಪದಾರ್ಥ, ಹಸಿಮೆಣಸು, ಒಣಮೆಣಸು, ಗರಂ ಮಸಾಲೆ ಬಳಸಿ ಮಾಡಿದ ಪದಾರ್ಥ. ಇವೆಲ್ಲವೂ ಪಿತ್ತದೋಷ ಹೆಚ್ಚು ಮಾಡುವ ಆಹಾರವಾಗಿದೆ.
ಮೂರನೇಯದಾಗಿ ಹುಳಿ ಪದಾರ್ಥ. ಹುಣಸೆಹಣ್ಣು, ಮಾವಿನಕಾಯಿ, ನೆಲ್ಲಿಕಾಯಿ, ಹುಳಿಮೊಸರು ಹುಳಿ ಮಜ್ಜಿಗೆ ಇವುಗಳನ್ನು ಮಿತಿಮೀರಿ ತಿಂದರೆ, ಪಿತ್ತ ಹೆಚ್ಚಾಗುತ್ತದೆ.