Deepavali Special: ನವೆಂಬರ್ ತಿಂಗಳಲ್ಲಿ ಬರುವ ಹಿಂದೂಗಳ ಪ್ರಮುಖ ಹಬ್ಬವಾದ ದೀಪಾವಳಿ ಹಬ್ಬ ಸಮೀಪಿಸಿದೆ. 5 ದಿನಗಳ ಕಾಲ ಆಚರಿಸುವ ಈ ಹಬ್ಬದಲ್ಲಿ, ಬಲಿಪಾಡ್ಯಮಿ ಕೂಡ ಆಚರಿಸಲಾಗುತ್ತದೆ. ಭಾರತದಲ್ಲಿ ಒಂದೊಂದು ಕಡೆ, ಒಂದೊಂದು ರೀತಿಯಾಗಿ ಬಲಿಪಾಡ್ಯಮಿ ಆಚರಿಸಲಾಗುತ್ತದೆ. ಕೆಲವರು ರಂಗೋಲಿ ಬಿಡಿಸಿ, ಅಲ್ಲಿ ಬಲೀಂದ್‌ರನ ಪೂಜೆ ಮಾಡುತ್ತಾರೆ. ಇನ್ನು ಕೆಲವರು ಕಂಬ ನೆಟ್ಟು ಬಲೀಂದ್ರನನ್ನು ಪೂಜಿಸುತ್ತಾರೆ. ಮತ್ತೆ ಕೆಲವರು ಸೆಗಣಿಯಿಂದ ಮೂರ್ತಿ ಮಾಡಿ, ಬಲೀಂದ್ರನ ಪೂಜೆ ಮಾಡುತ್ತಾರೆ. ಹಾಗಾದ್ರೆ ಬಲಿಪಾಡ್ಯಮಿ ಆಚರಣೆಯ ಹಿಂದಿನ ಮಹತ್ವವೇನು ಅಂತಾ ತಿಳಿಯೋಣ ಬನ್ನಿ..
ವಿರೋಚನನ ಮಗ ಮಹಾಬಲಿ. ಪ್ರಹ್ಲಾದನ ಮೊಮ್ಮಗನಾದ ಬಲಿಯನ್ನು ಕಂಡರೆ ಅಜ್ಜನಿಗೆ ಬಹುಪ್ರೀತಿ. ಅಜ್ಜನಿಂದ ಶಸ್ತ್ರ, ಶಾಸ್ತ್ರ ಅಭ್ಯಾಸಗಳನ್ನು ಕಲಿತ ಮಹಾಬಲಿ, ಅತ್ಯುತ್ತಮ ರಾಜನಾಗಿದ್ದ. ಅಲ್ಲದೇ, ಪ್ರಹ್ಲಾದನಂತೆ, ಬಲಿ ಕೂಡ ವಿಷ್ಣು ಭಕ್ತನಾಗಿದ್ದ. ದೇವರಲ್ಲಿ ಅಪಾರ ಭಕ್ತಿ ಹೊಂದಿದ್ದ. ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ, ಅಮರತ್ವವನ್ನು ಪಡೆದ.
ಮುಂದೊಂದು ದಿನ ಪ್ರಹ್ಲಾದ ತನ್ನ ಮೊಮ್ಮಗನಿಗೆ ರಾಜ್ಯಭಾರ ವಹಿಸಿ, ಪಟ್ಟಾಭಿಷೇಕ ಮಾಡಿದ. ಅವನ ಪಟ್ಟಾಭಿಷೇಕದ ಕಾರ್ಯಕ್ರಮಕ್ಕೆ ಗಂಧರ್ವರು, ಯಕ್ಷರು ಎಲ್ಲರೂ ಬಂದರು. ಆದರೆ ದೇವತೆಗಳು ಮಾತ್ರ ಬರಲಿಲ್ಲ. ಏಕೆಂದರೆ ಇಂದ್ರನಿಗೆ ಬಲಿಯನ್ನು ಕಂಡರೆ ಆಗುತ್ತಿರಲಿಲ್ಲ. ಅವನ ಬಳಿ ಇಂದ್ರಲೋಕ ಬಿಟ್ಟು ಉಳಿದೆಲ್ಲವೂ ಇತ್ತು. ಬಲಿ ತನಗೆ ಸರಿಸಮನಾಗಿದ್ದಾನೆಂಬ ಕಾರಣಕ್ಕೆ, ಬಲಿಯನ್ನು ಕಂಡರೆ ಇಂದ್ರನಿಗೆ ಅಸೂಯೆ ಇತ್ತು. ಇಂದ್ರ ದೇವತೆಗಳ ದೊರೆಯಾದರೆ, ಬಲಿ ದಾನವರ ದೊರೆಯಾದ.
ಮುಂದೊಂದು ದಿನ ಮಹಾಬಲಿ ತನ್ನ ಪರಾಕ್ರಮದಿಂದ , ಇಡೀ ಲೋಕವನ್ನೇ ತನ್ನ ವಶಕ್ಕೆ ಪಡೆದ. ಹಾಗಾಗಿ ಅವನನ್ನು ಬಲಿ ಚಕ್ರವರ್ತಿ ಎಂದು ಕರೆಯಲಾಯಿತು. ಆದರೆ ಬಲಿ ದೈತ್ಯರಂತೆ, ದುಷ್ಟಬುದ್ಧಿ ತೋರಲಿಲ್ಲ. ಬದಲಾಗಿ, ಧರ್ಮವನ್ನು ಪಾಲಿಸಿದ. ಬಡ ಬಗ್ಗರಿಗೆ ಸಹಾಯ ಮಾಡುತ್ತಿದ್ದ. ಭೂಲೋಕವನ್ನು ಸ್ವರ್ಗಲೋಕ ಮಾಡುತ್ತೇನೆಂದು ಹೊರಟ.
ಆದರೆ ಬಲಿ ಎಷ್ಟೇ ಪರಾಕ್ರಮಿಯಾಗಿದ್ದರೂ, ಅವನು ದೈತ್ಯ. ರಾಕ್ಷಸ. ಅವನನ್ನು ಹೀಗೆ ಬಿಟ್ಟರೆ, ದೇವತೆಗಳನ್ನು ಜಯಿಸಿ, ಸ್ವರ್ಗವನ್ನೂ ಪಡೆಯುತ್ತಾನೆಂಬುದರ ಬಗ್ಗೆ ಇಂದ್ರನಿಗೆ ಚಿಂತೆಯಾಯಿತು. ಅವನ ಚಿಂತೆಯಂತೆ, ಬಲಿ ದೇವಲೋಕದ ಮೇಲೆ ದಾಳಿ ಮಾಡಿ, ಎಲ್ಲ ದೇವತೆಗಳನ್ನು ಓಡಿಸಿ, ದೇವಲೋಕವನ್ನು ವಶಪಡಿಸಿಕೊಂಡು, ತ್ರಿಲೋಕದ ಅಧಿಪತಿಯಾದ. ಕೊನೆಗೆ ಇಂದ್ರ ಶ್ರೀವಿಷ್ಣುವಿನಲ್ಲಿ ಹೋಗಿ, ಈ ಸಮಸ್ಯೆಗೆ ಪರಿಹಾರ ಕೊಡಿ ಎಂದು ಕೇಳಿದ.
ಇವೆಲ್ಲವೂ ನಿನ್ನ ಬಳಿಯೇ ಇರಬೇಕೆಂದರೆ, ನೀನು 100 ಅಶವಮೇಧ ಯಾಗಗಳನ್ನು ಮಾಡು ಎಂದು ಗುರು ಶುಕ್ರಾಚಾರ್ಯರು ಬಲಿಗೆ ತಿಳಿಸಿದರು. ಅದರಂತೆ, ಬಲಿ 100 ಅಶ್ವಮೇಧ ಯಾಗ ಮಾಡಿ, ಕೊನೆಗೆ ಬ್ರಾಹ್ಮಣರಿಗೆ ದಾನ ನೀಡಬೇಕೆಂದುಕೊಂಡ.
ಇದನ್ನು ಮೊದಲೇ ಅರಿತಿದ್ದ ಶ್ರೀವಿಷ್ಣು ವಾಮನನ ವೇಷದಲ್ಲಿ ಬಂದು, ತನ್ನ ಮೂರು ಹೆಜ್ಜೆಗೆ ಸಮವಾದ ಜಾಗ ದಾನ ಬೇಕೆಂದು ಕೇಳಿದ. ಅದಕ್ಕೆ ನಕ್ಕ ಬಲಿ, ಸರಿ ಅಷ್ಟೇ ಅಲ್ಲವೇ, ತೆಗೆದುಕೋ ಎಂದ. ವಾಮನ ಬೃಹದಾಕಾರವಾಗಿ ಬೆಳೆದು, ಸ್ವರ್ಗ ಲೋಕ, ಭೂ ಲೋಕ ಮತ್ತು ಪಾತಾಳ ಲೋಕಕ್ಕೆ ಹೆಜ್ಜೆ ಇಟ್ಟು, ಮೂರು ಲೋಕವನ್ನು ತನ್ನ ಅಧೀನಕ್ಕೆ ತೆಗೆದುಕೊಂಡ. ವಿಷ್ಣುವಿಗೆ ಭೂದಾನ ಮಾಡಿದ ದಿನವಾಗಿ, ಬಲಿ ಪಾಡ್ಯಮಿ ಆಚರಿಸಲಾಗುತ್ತದೆ.
ನಿಮ್ಮ ಅಂಗೈ ನೋಡಿ, ದಿನ ಶುರು ಮಾಡಬೇಕು ಅಂತಾ ಹೇಳುವುದು ಯಾಕೆ ಗೊತ್ತಾ..?
ಶ್ರೀಮಂತಿಕೆ ಇದ್ದಾಗಲೂ ಇಂಥ ತಪ್ಪುಗಳನ್ನು ಮಾಡಲೇಬೇಡಿ ಎನ್ನುತ್ತಾರೆ ಚಾಣಕ್ಯ..
ಶ್ರೇಷ್ಠರು ಮತ್ತು ಶ್ರೇಷ್ಠರಲ್ಲದವರು ಯಾರು..? ಗರುಡ ಪುರಾಣದಲ್ಲಿ ಹೀಗೆ ಹೇಳಿದ್ದಾರೆ ನೋಡಿ..

