ನೀವು ನುಗ್ಗೆಕಾಯಿಯ ಸಾರು, ಸಾಂಬಾರ್ ಮಾಡಿ ತಿಂದಿರಬಹುದು. ಆದ್ರೆ ನುಗ್ಗೇಕಾಯಿಯಿಂದ ಬೇಳೆ ಸಾರನ್ನ ಕೂಡ ಮಾಡ್ತಾರೆ. ಹಾಗಾದ್ರೆ ಈ ನುಗ್ಗೇಕಾಯಿ ಬೇಳೆಸಾರಿಗೆ ಏನೇನು ಸಾಮಗ್ರಿ ಬೇಕು..? ಇದನ್ನ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: 2 ನುಗ್ಗೇಕಾಯಿ, ಅರ್ಧ ಕಪ್ ತೊಗರಿ ಬೇಳೆ, ಎರಡು ಹಸಿ ಮೆಣಸು, ಕೊಂಚ ಅರಿಶಿನ, ಸಾಸಿವೆ, ಹಿಂಗು, 4 ಎಸಳು ಸಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ, ನಾಲ್ಕು ಸ್ಪೂನ್ ಎಣ್ಣೆ, ಅರ್ಧ ಸ್ಪೂನ್ ಖಾರದ ಪುಡಿ, ಒಂದು ಸ್ಪೂನ್ ಧನಿಯಾ ಪುಡಿ, 2 ಸಣ್ಣಗೆ ಹೆಚ್ಚಿದ ಟೊಮೆಟೋ, ಕೊತ್ತೊಂಬರಿ ಸೊಪ್ಪು, ಬೆಲ್ಲ, ಅಗತ್ಯಕ್ಕೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಮೊದಲು ಸ್ವಚ್ಛವಾಗಿ ತೊಳೆದ ಬೇಳೆ, ಅರಿಶಿನ, ಕೊಂಚ ಎಣ್ಣೆ ಮತ್ತು ನೀರು ಹಾಕಿ ಬೇಳೆ ಬೇಯಿಸಿಕೊಳ್ಳಿ. ಬೇಳೆ ಚೆನ್ನಾಗಿ ಬೆಂದ ಬಳಿಕ, ಪ್ಯಾನ್ ಇಟ್ಟು ಅದಕ್ಕೆ ಎಣ್ಣೆ ಹಾಕಿ, ಸಾಸಿವೆ ಹುರಿದು, ಬೆಳ್ಳುಳ್ಳಿ, ಮತ್ತು ಹಿಂಗು ಹಾಕಿ ಹುರಿಯಿರಿ. ಇದಕ್ಕೆ ಹಸಿಮೆಣಸಿನಕಾಯಿ, ಟೊಮೆಟೋ, ಧನಿಯಾ ಪುಡಿ, ಖಾರದ ಪುಡಿ ಹಾಕಿ, ಚೆನ್ನಾಗಿ ಹುರಿಯಿರಿ. ಇದು ಸರಿಯಾಗಿ ಬೆಂದ ಬಳಿಕ, ಇದಕ್ಕೆ ನುಗ್ಗೇಕಾಯಿ, ಉಪ್ಪು, ನೀರು ಹಾಕಿ ಮುಚ್ಚಳ ಮುಚ್ಚಿ ಬೇಯಿಸಿ. ಇದು ಸರಿಯಾಗಿ ಬೆಂದ ಬಳಿಕ ಇದಕ್ಕೆ ಆಗಲೇ ಬೇಯಿಸಿಟ್ಟುಕೊಂಡ ಬೇಳೆ ಸೇರಿಸಿ. ಈಗ ಬೆಲ್ಲ ಹಾಕಿ ಕೊಂಚ ಬೇಯಿಸಿ, ಕೊತ್ತೊಂಬರಿ ಸೊಪ್ಪು ಹಾಕಿ ಸರ್ವ್ ಮಾಡಿ.