ಬದನೇಕಾಯಿ ಗ್ರೇವಿ ಅಂದ್ರೆ ಯಾರಿಗೆ ತಾನೇ ಇಷ್ಟವಾಗೋದಿಲ್ಲಾ ಹೇಳಿ. ಚಪಾತಿ, ರೊಟ್ಟಿ, ಅನ್ನ ಎಲ್ಲದರ ಜೊತೆ ಮ್ಯಾಚ್ ಆಗುವ ಈ ಗ್ರೇವಿ, ಸಖತ್ ಟೇಸ್ಟಿಯಾಗಿರತ್ತೆ. ಹಾಗಾದ್ರೆ ಬದನೆ ಗ್ರೇವಿ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: 8 ಬದನೇಕಾಯಿ, 5 ಸ್ಪೂನ್ ಎಣ್ಣೆ, ಅರ್ಧ ಕಪ್ ಮೊಸರು, 1 ಸ್ಪೂನ್ ಗರಂ ಮಸಾಲೆ, ಧನಿಯಾ ಪುಡಿ, ಖಾರದ ಪುಡಿ, 1 ಸ್ಪೂನ್ ಜೀರಿಗೆ, ಕೊಂಚ ಹಿಂಗು, ಅರಿಶಿನಪುಡಿ, 1 ಸಣ್ಣಗೆ ಕತ್ತರಿಸಿದ ಈರುಳ್ಳಿ, ಅರ್ಧ ಸ್ಪೂನ್ ಶುಂಠಿ- ಬೆಳ್ಳುಳ್ಳಿ ಪೇಸ್ಟ್, 2 ಟೊಮೆಟೋ ಪೇಸ್ಟ್, ಸಣ್ಣಗೆ ಕತ್ತರಿಸಿದ ಕೊತ್ತೊಂಬರಿ ಸೊಪ್ಪು, ಎರಡು ಸ್ಪೂನ್ ಶೇಂಗಾ ಪುಡಿ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಮೊದಲು ಬದನೇಕಾಯಿಯನ್ನು ಸ್ವಚ್ಛವಾಗಿ ತೊಳೆದುಕೊಂಡು, ಒಂದು ಬದನೆಯನ್ನು ಅರ್ಧವಾಗಿ 4 ಭಾಗ ಮಾಡಿ. ಒಂದು ಬದನೆಯಲ್ಲಿ ಮಸಾಲೆ ತುಂಬಿಸಲು ಸಾಧ್ಯವಾಗುವ ರೀತಿ ಅರ್ಧ ಕತ್ತರಿಸಬೇಕು. ಹೀಗೆ ಎಲ್ಲ ಬದನೆಗಳನ್ನು ತುಂಡರಿಸಿ, ಅದರಲ್ಲಿ ಸ್ವಲ್ಪ ಸ್ವಲ್ಪ ಉಪ್ಪು ಸೇರಿಸಬೇಕು.
ಈಗ ಮಸಾಲೆ ತಯಾರಿಸಿಕೊಳ್ಳಿ. ಒಂದು ಬೌಲ್ ತೆಗೆದುಕೊಂಡು, ಅದರಲ್ಲಿ ಮೊಸರು, ಗರಂ ಮಸಾಲೆ, ಧನಿಯಾ ಪುಡಿ, ಖಾರದ ಪುಡಿ ಇವಿಷ್ಟನ್ನು ಮಿಕ್ಸ್ ಮಾಡಿ ಇಡಿ.
ಈಗ ಪ್ಯಾನ್ ಬಿಸಿ ಮಾಡಿ, ಅದರಲ್ಲಿ 5 ಸ್ಪೂನ್ ಎಣ್ಣೆ ಹಾಕಿ, ಎಣ್ಣೆ ಬಿಸಿಯಾಗುತ್ತಿದ್ದಂತೆ, ಉಪ್ಪು ತುಂಬಿಸಿಟ್ಟ ಬದನೆಕಾಯಿಯನ್ನು ಪ್ಯಾನ್‌ಗೆ ಹಾಕಿ. ನಿಧಾನವಾಗಿ ಹುರಿಯಿರಿ. ಬದನೇಕಾಯಿಯ ಕಲರ್ ಚೇಂಜ್ ಆಗಿ, ಅದು ಕೊಂಚ ಮೆತ್ತಗಾದ ಬಳಿಕ, ಆ ಬೆಂದ ಬದನೇಕಾಯಿಯನ್ನು ಪ್ಲೇಟ್‌ನಲ್ಲಿರಿಸಿ.
ಅದೇ ಪ್ಯಾನ್‌ಗೆ ಕೊಂಚ ಎಣ್ಣೆ ಹಾಕಿ, ಜೀರಿಗೆ, ಹಿಂಗು, ಅರಿಶಿನ ಪುಡಿ, ಈರುಳ್ಳಿ ಹಾಕಿ ಹುರಿಯಿರಿ. ಈಗ ಇದಕ್ಕೆ ಶುಂಠಿ- ಬೆಳ್ಳುಳ್ಳಿ ಪೇಸ್ಟ್, ಟೊಮೆಟೋ ಪೇಸ್ಟ್ ಸೇರಿಸಿ, ಕೊಂಚ ಬೇಯಿಸಿ, ಬಳಿಕ ನಾವು ರೆಡಿ ಮಾಡಿಟ್ಟುಕೊಂಡ ಮೊಸರಿನ ಮಸಾಲೆಯನ್ನು ಇದಕ್ಕೆ ಸೇರಿಸಿ, ಮಂದ ಉರಿಯಲ್ಲಿ 2 ನಿಮಿಷ ಬೇಯಿಸಿ.
ಈಗ ಇದಕ್ಕೆ ಅರ್ಧ ಕಪ್ ನೀರು, ಉಪ್ಪು ಸೇರಿಸಿ. ಮೊದಲೇ ಹುರಿದಿಟ್ಟುಕೊಂಡ ಬದನೇಕಾಯಿಯನ್ನ ಕೂಡ ಸೇರಿಸಿ. ನಂತರ ಪ್ಯಾನ್ ಮುಚ್ಚಳ ಮುಚ್ಚಿ ಮಂದ ಉರಿಯಲ್ಲಿ 3 ನಿಮಿಷ ಬೇಯಿಸಿ. ಹೀಗೆ ಬೇಯುವಾಗ ಒಂದೆರಡು ಬಾರಿ ತಿರುವಬೇಕು. 3 ನಿಮಿಷ ಚೆನ್ನಾಗಿ ಬೆಂದ ಬಳಿಕ ಗ್ರೇವಿ ರೆಡಿ. ಇದಕ್ಕೆ ಮೇಲಿನಿಂದ ಹುರಿದ ಶೇಂಗಾ ಪುಡಿ ಮತ್ತು ಕೊತ್ತೊಂಬರಿ ಸೊಪ್ಪನ್ನು ಸೇರಿಸಿದರೆ ರುಚಿ ಇನ್ನೂ ಹೆಚ್ಚತ್ತೆ.




