Health Tips: ಮೊಸರು ಆರೋಗ್ಯಕ್ಕೆ ಒಳ್ಳೆಯದು ಅಂತಾ ಎಲ್ಲರಿಗೂ ಗೊತ್ತು. ಆದರೆ ಮೊಸರನ್ನು ಯಾವಾಗ ತಿನ್ನಬೇಕು, ಹೇಗೆ ತಿನ್ನಬೇಕು ಅನ್ನೋ ಬಗ್ಗೆ ಮಾತ್ರ, ಹಲವರಿಗೆ ಗೊತ್ತಿಲ್ಲ. ಇಂದು ನಾವು ಮೊಸರು ಸೇವನೆ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಗಟ್ಟಿ ಮೊಸರು ಉಷ್ಣ ಹೆಚ್ಚಿಸಿದರೆ, ನೀರು ಬೆರೆಸಿದ ಮೊಸರು ದೇಹಕ್ಕೆ ತಂಪು ನೀಡುತ್ತದೆ. ಹಾಗಾಗಿ ಊಟ ಮಾಡುವಾಗ ನೀರು ಬೆರೆಸಿದ ಮೊಸರನ್ನೇ ಬಳಸಬೇಕು. ಗಟ್ಟಿ ಮೊಸರು ರುಚಿಯಾಗಿದ್ದರೂ, ಅದು ಉಷ್ಣತೆ ಹೆಚ್ಚಿಸುವ ಕಾರಣ, ಆರೋಗ್ಯಕ್ಕೆ ಅಷ್ಟು ಉತ್ತಮವಲ್ಲ. ಇನ್ನು ಮೊಸರನ್ನು ನೀವು ಸೂರ್ಯನಿರುವ ಸಮಯದಲ್ಲಿ ಮಾತ್ರ ಸೇವಿಸಬೇಕು. ಸೂರ್ಯಮುಳುಗಿದ ಬಳಿಕ ಅಂದರೆ, ಸಂಜೆ ಮತ್ತು ರಾತ್ರಿಯ ಹೊತ್ತು ಸೇವಿಸಬಾರದು. ಮೊಸರು ಸೂರ್ಯಾಸ್ತದ ಬಳಿಕ ಸ್ಲೋ ಪಾಯ್ಸನ್ ಆಗಿ ಪರಿವರ್ತನೆಯಾಗುತ್ತದೆ ಎನ್ನಲಾಗಿದೆ. ಹಾಗಾಗಿ ರಾತ್ರಿ ಮೊಸರಿನ ಸೇವನೆ ಮಾಡಬಾರದು.
ಅಲ್ಲದೇ, ಮೊಸರು ಜೀರ್ಣವಾಗಲು ತುಂಬ ಸಮಯ ತೆಗೆದುಕೊಳ್ಳುತ್ತದೆ. ನೀವು ರಾತ್ರಿ ಮೊಸರು ಸೇವಿಸಿ, ಮಲಗಿದರೆ, ಅದು ಸರಿಯಾಗಿ ಜೀರ್ಣವಾಗುವುದಿಲ್ಲ. ಮತ್ತು ಇದರಿಂದ ಜೀರ್ಣಕ್ರಿಯೆ ಸಮಸ್ಯೆ ಬರುತ್ತದೆ. ಜೀರ್ಣಕ್ರಿಯೆ ಸಮಸ್ಯೆ ಉಂಟಾದಾಗಲೇ, ಹಲವು ರೋಗಗಳು ಉದ್ಭವಿಸುತ್ತದೆ. ಹಾಗಾಗಿ ಬೆಳಿಗ್ಗೆ, ಮಧ್ಯಾಹ್ನದ ಹೊತ್ತು ಮೊಸರಿನ ಸೇವನೆ ಮಾಡಬೇಕು.
ಇನ್ನು ಮೊಸರಿನ ಸೇವನೆ ಮಾಡುವಾಗ ನೆನಪಿಟ್ಟುಕೊಳ್ಳಬೇಕಾದ ವಿಷಯವೆಂದರೆ, ಬಿಸಿ ಅನ್ನಕ್ಕೆ ಮೊಸರನ್ನ ಬಳಸಬೇಡಿ. ಯಾವುದೇ ಬಿಸಿ ಬಿಸಿ ಆಹಾರದ ಜೊತೆ ಮೊಸರಿನ ಸೇವನೆ ಮಾಡಿದ್ದಲ್ಲಿ, ಅದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಲ್ಲದೇ, ಕೆಲವರು ಮೊಸರಿನ ಪದಾರ್ಥ ಮಾಡುವಾಗ, ಮೊಸರನ್ನು ಬಿಸಿ ಮಾಡುತ್ತಾರೆ. ಇದು ತಪ್ಪು. ಇದು ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ.
ಇನ್ನು ಮಾಂಸ ಮತ್ತು ಹಣ್ಣಿನ ಜೊತೆ ಮೊಸರು ಸೇರಿಸಿ, ಸೇವಿಸಬಾರದು. ಮೊಸರಿನ ಸೇವನೆ ಮಾಡಿದರೆ, ದೇಹದಲ್ಲಿ ಕಫ, ಪಿತ್ತ ಪ್ರಮಾಣ ಹೆಚ್ಚುತ್ತದೆ. ಮತ್ತು ವಾತದ ಪ್ರಮಾಣ ತಗ್ಗುತ್ತದೆ. ದೇಹದ ತೂಕವೂ ಆರೋಗ್ಯಕರವಾಗಿ ಹೆಚ್ಚುತ್ತದೆ. ಆದ್ದರಿಂದಲೇ, ಮೊಸರನ್ನು ದಪ್ಪಗಿರುವವರು, ಕಫದ ಸಮಸ್ಯೆ ಹೊಂದಿರುವವರು ಸೇವಿಸಬಾರದು.