Hubli News: ಹುಬ್ಬಳ್ಳಿ: ಶಿಗ್ಗಾಂವಿ ಕ್ಷೇತ್ರದ ಜನರ ತೀರ್ಪನ್ನು ನಾನು ತಲೆಬಾಗಿ ಒಪ್ಪಿಕೊಳ್ಳುತ್ತೇನೆ. ಜನಾಶೀರ್ವಾದ ಸ್ವೀಕಾರ ಮಾಡುತ್ತೇನೆ. ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್ ಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಶಿಗ್ಗಾಂವ ಫಲಿತಾಂಶದ ಕುರಿತು ಮಾತನಾಡಿದ ಅವರು, ಅಲ್ಲಿಯ ಜನರ ಸ್ಪಂದನೆ ನೋಡಿದ್ರೆ ನಮಗೆ ಭರವಸೆ ಇತ್ತು. ಆದರೆ ವಿಪರೀತ ಹಣದ ಹೊಳೆ ಹರಿಸಿ ಕಾಂಗ್ರೆಸ್ ಗೆಲುವು ಸಾಧಿಸಿದ್ದಾರೆ. ಸರ್ಕಾರ ಅವರದ್ದೇ ಇದೆ, ಆಡಳಿತ ಪಕ್ಷದ ಶಾಸಕರು ಜನ ಆಯ್ಕೆ ಮಾಡಿದ್ದಾರೆ. ನಾವು ಶಿಗ್ಗಾವಿ, ಸವಣೂರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇವೆ. ಅಭಿವೃದ್ಧಿ ಪರ್ವ ಹಾಗೆಯೇ ಮುಂದುವರೆಯಲಿ ಅಂತ ಆಶಿಸುತ್ತೇನೆ. ಕ್ಷೇತ್ರದ ಜನರಿಗೆ ಒಳ್ಳೆದಾಗಲಿ ಅಂತ ಬಯಸುತ್ತೇನೆ ಎಂದರು.
10 ಜನ ಸಚಿವರು, 40ಕ್ಕಿಂತ ಹೆಚ್ಚು ಶಾಸಕರು ಬಂದಿದ್ದರು. ಸರ್ಕಾರದ ಯಂತ್ರ, ಹಣದಿಂದ ಅವರು ಗೆದ್ದಿದ್ದಾರೆ. ಮಹಾರಾಷ್ಟ್ರದಲ್ಲಿ ನಿರೀಕ್ಷೆಯಂತೆ ಮೆಜಾರಿಟಿ ಗೆಲ್ತಾ ಇದ್ದೇವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವ, ಮೂರು ಪಕ್ಷದ ಒಗ್ಗಟ್ಟಿನಿಂದ ಕಳೆದ ಮೂರು ವರ್ಷದ ಸರ್ಕಾರದ ಅಭಿವೃದ್ಧಿ ಮೇಲೆ ಜಯ ಸಿಕ್ಕಿದೆ. ಲೋಕಸಭಾ ಚುನಾವಣೆ ನಂತರ ಜನ ನರೇಂದ್ರ ಮೋದಿಯವರ ಪರ ನಿಂತಿರೋದು ಗೊತ್ತಾಗ್ತಿದೆ. ವಿರೋಧ ಪಕ್ಷದ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಸೀಟು ಹೆಚ್ಚಿಸಿ ಬೀಗ್ತಾ ಇದ್ರು. ಅವರಿಗೆ ಅವರ ಸ್ಥಾನವನ್ನು ಮಹಾರಾಷ್ಟ್ರ ಜನ ತೋರಿಸಿದ್ದಾರೆ ಎಂದು ಅವರು ಹೇಳಿದರು.
ಶಿಗ್ಗಾವಿಯಲ್ಲಿ ಎಂಪಿ ಚುನಾವಣೆ ನಂತರ ನಾವು ಚನ್ನಾಗಿ ಕೆಲಸ ಮಾಡಿದ್ವಿ ಆದರೆ ಇಡೀ ಸರ್ಕಾರನೇ ಬಂತು. ಸಾಮಾನ್ಯವಾಗಿ ಉಪಚುನಾವಣೆಯಲ್ಲಿ ಸರ್ಕಾರಕ್ಕೆ ಅಡ್ವಾಂಟೇಜ್ ಇರುತ್ತದೆ. ನಾವು ಕೂಡ ಒಂದು ಕಾಲದಲ್ಲಿ 17 ಬೈ ಎಲೆಕ್ಷನ್ ನಲ್ಲಿ 13 ಕ್ಷೇತ್ರ ಗೆದ್ದಿದ್ದೇವು. ಸರ್ಕಾರದ ಪರ್ಫಾರ್ಮೆನ್ಸ್ ಮೇಲೆ ಮತ ಅಂತೇನಿಲ್ಲ. ನಾವು ಅಷ್ಟು ಗೆದ್ದು ಅದಾದ ಮೇಲೆ ಸರ್ಕಾರ ಕಳೆದುಕೊಂಡಿದ್ವಿ. ಹೀಗಾಗಿ ಕಾಂಗ್ರೆಸ್ ಸರ್ಕಾರ ಒಂದೂವರೆ ವರ್ಷದ ಆಡಳಿತಕ್ಕೆ ಸರ್ಟಿಫಿಕೇಟ್ ಅಂತ ತಿಳಿದುಕೊಳ್ಳೊ ಅವಶ್ಯಕತೆ ಇಲ್ಲ ಎಂದ ಬೊಮ್ಮಾಯಿ ಟೀಕೆ ಮಾಡಿದರು.