Recipe: ಎಷ್ಟೋ ಜನರಿಗೆ ಖಾನಾವಳಿಯಲ್ಲಿ ಊಟ ಮಾಡಬೇಕು ಎನ್ನಿಸುತ್ತದೆ. ಅಲ್ಲಿ ಸಿಗುವ ಬದನೇಕಾಯಿ ಪಲ್ಯದ ರುಚಿ ನೋಡಬೇಕು ಎನ್ನಿಸುತ್ತದೆ. ಆದರೆ ಖಾನಾವಳಿಗಳ ಸಂಖ್ಯೆ ಕಡಿಮೆ ಇರುವ ಕಾರಣಕ್ಕೆ, ಮನಸ್ಸಾದಾಗ, ಖಾನಾವಳಿಗೆ ಹೋಗಿ ಊಟ ಮಾಡಲು ಸಾಧ್ಯವಿಲ್ಲ. ಹಾಗಾಗಿ ನಾವಿಂದು ಖಾನಾವಳಿ ಶೈಲಿಯ ಬದನೇಕಾಯಿ ಪಲ್ಯವನ್ನ ಮನೆಯಲ್ಲೇ ಹೇಗೆ ತಯಾರಿಸಬೇಕು ಅಂತಾ ಹೇಳಲಿದ್ದೇವೆ.
ಮೊದಲು ಕಾಲು ಕಪ್ ಶೇಂಗಾವನ್ನು ಹುರಿದುಕೊಳ್ಳಿ. ಇದು ಗರಿ ಗರಿಯಾಗುತ್ತಿದ್ದಂತೆ, 2 ಸ್ಪೂನ್ ಗುರೆಳ್ಳು ಸೇರಿಸಿ. ಕಾಲು ಭಾಗ ತುರಿದ ಒಣ ಕೊಬ್ಬರಿ ಸೇರಿಸಿ. 1 ಸ್ಪೂನ್ ಜೀರಿಗೆ, ಕೊತ್ತಂಬರಿ ಕಾಳು ಇವೆಲ್ಲವನ್ನೂ ಸೇರಿಸಿ, ಚೆನ್ನಾಗಿ ಹುರಿಯಿರಿ. ಬಳಿಕ ಇದನ್ನು ಮಿಕ್ಸಿ ಜಾರ್‌ಗೆ ಹಾಕಿ, ಇದರೊಂದಿಗೆ 6 ತುಂಡು ಬೆಳ್ಳುಳ್ಳಿ, 5 ಹಸಿಮೆಣಸಿನಕಾಯಿ, ಚಿಕ್ಕ ತುಂಡು ಶುಂಠಿ, ಒಂದು ಕಪ್ ಕೊತ್ತೊಂಬರಿ ಸೊಪ್ಪು ಸೇರಿಸಿ, ನೀರು ಸೇರಿಸದೇ, ಗ್ರೈಂಡ್ ಮಾಡಿ.
ಈಗ ಬದನೇಕಾಯಿ ತೊಳೆದು ಕತ್ತರಿಸಿ, ನೀರಿನಲ್ಲಿ ಹಾಕಿಡಿ. ಬಳಿಕ ಪ್ಯಾನ್ ಬಿಸಿ ಮಾಡಿ, ಎಣ್ಣೆ ಹಾಕಿ, ಜೀರಿಗೆ, ಸಾಸಿವೆ, ಉದ್ದಿನ ಬೇಳೆ, ಕರಿಬೇವು, ಇಂಗು, ಹಾಕಿ ಮಿಕ್ಸ್ ಮಾಡಿ. ಬಳಿಕ ಈರುಳ್ಳಿ ಹಾಕಿ, ಹುರಿಯಿರಿ. ಇದಕ್ಕೆ ಬದನೇಕಾಯಿ, ಅರಿಶಿನ, ಉಪ್ಪು, ಬೆಲ್ಲ, ಹುಣಸೆ ರಸ, ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಲಿಡ್ ಮುಚ್ಚಿ ಅರ್ಧ ಬೇಯಿಸಿ. ಬಳಿಕ ಗ್ರೈಂಡ್ ಮಾಡಿಟ್ಟ ಮಿಶ್ರಣವನ್ನು ಹಾಕಿ ಮಿಕ್ಸ್ ಮಾಡಿ, ಅಗತ್ಯವಿರುವಷ್ಟು ನೀರು ಹಾಕಿ, ಕುದಿಸಿ. ಗ್ರೇವಿಯಂತಾದಾಗ ಬದನೇಕಾಯಿ ಪಲ್ಯ ರೆಡಿ ಎಂದರ್ಥ. ಅಗತ್ಯವಿದ್ದಲ್ಲಿ ಕೊಂಚ ಗರಂ ಮಸಾಲೆ ಪುಡಿ ಸೇರಿಸಬಹುದು.