ಲವಂಗವನ್ನು ನೀವು ಸಿಹಿ ತಿಂಡಿ, ಗ್ರೇವಿ, ಪಲಾವ್ ಮಾಡುವಾಗೆಲ್ಲ ಬಳಸಿರುತ್ತೀರಿ. ಕೆಲವರು ಕೆಮ್ಮು ಬಂದಾಗ ಲವಂಗವನ್ನು ಸೇವಿಸುತ್ತಾರೆ. ಆದ್ರೆ ಲವಂಗದ ನೀರಿನ ಬಗ್ಗೆ ಹಲವರಿಗೆ ಗೊತ್ತಿಲ್ಲ. ಹಾಗಾಗಿ ನಾವಿಂದು ಲವಂಗದ ನೀರನ್ನು ಮಾಡುವುದು ಹೇಗೆ ಮತ್ತು ಅದನ್ನು ಸೇವಿಸುವುದರಿಂದ ಆಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ..
ಮೊದಲನೇಯದ್ದು ಟ್ಯಾಂಗಿ ಕ್ಲೋ ವಾಟರ್. ಅದಕ್ಕಾಗಿ ನಿಮಗೆ ಒಂದು ಸಣ್ಣಗೆ ಕತ್ತರಿಸಿದ ಕಿತ್ತಳೆ ಹಣ್ಣು ಬೇಕು. 2 ಚಕ್ಕೆ, 50 ಗ್ರಾಂ ಲವಂಗ ಮತ್ತು ಒಂದು ಕಪ್ ನೀರು. ಮೊದಲು ಗ್ಯಾಸ್ ಆನ್ ಮಾಡಿ, ನೀರು ಬಿಸಿ ಮಾಡಲು ಇಡಿ. ಇದು ಕುದಿ ಬಂದ ಬಳಿಕ ಇದಕ್ಕೆ ಕಿತ್ತಳೆ, ಲವಂಗ, ಚಕ್ಕೆ ಹಾಕಿ ಚೆನ್ನಾಗಿ ಕುದಿಸಿ. 10 ನಿಮಿಷ ಕುದಿಸಿದ ಬಳಿಕ. ಆರಿಸಿ, ಸೋಸಿ. ಇದನ್ನ ಯಾವಾಗ ಕುಡಿಯಬೇಕು ಅಂದ್ರೆ ವಾರಕ್ಕೆ 1 ಅಥವಾ 2 ಬಾರಿ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಇದನ್ನು ಕುಡಿಯುವುದರಿಂದ ನಿಮ್ಮ ದೇಹದಲ್ಲಿ ರಕ್ತ ಸಂಚಾರ ಉತ್ತಮವಾಗಿರುತ್ತದೆ. ಜೀರ್ಣಕ್ರಿಯೆಯೂ ಸರಿಯಾಗಿ ಇರುತ್ತದೆ.
ಎರಡನೇಯದ್ದು ಕ್ಲೋ ಕೂಲರ್. 50 ಗ್ರಾಂ ಲವಂಗ, 2 ಸ್ಪೂನ್ ಜೀರಿಗೆ. 1 ಸ್ಪೂನ್ ಚೀಯಾ ಸೀಡ್ಸ್, 1 ಸ್ಪೂನ್ ಜೇನುತುಪ್ಪ ಮತ್ತು 1 ಕಪ್ ನೀರು. ರಾತ್ರಿ ಮಲಗುವ ಮುನ್ನ ಜೀರಿಗೆ ಮತ್ತು ಲವಂಗವನ್ನ 1 ಕಪ್ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಈ ನೀರನ್ನು ಸೋಸಿ, ಈ ನೀರಿಗೆ ಬೆಳಿಗ್ಗೆ ನೆನೆಸಿಟ್ಟ ಚೀಯಾ ಸೀಡ್ಸ್, ಜೇನುತುಪ್ಪ ಸೇರಿಸಿ ಕುಡಿಯಿರಿ. ಇದು ಕೂಡ ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ಆದರೆ ಇವೆರಡೂ ಪೇಯ ಕುಡಿಯುವ ಮುನ್ನ ನಿಮ್ಮ ದೇಹದಲ್ಲಿ ಉಷ್ಣತೆ ಇಲ್ಲ, ನಿಮ್ಮ ಮೂಗಿನಿಂದ ರಕ್ತ ಸೋರುವುದಿಲ್ಲವೆಂದಾದಲ್ಲಿ ಮಾತ್ರ ನೀವು ಈ ನೀರನ್ನು ಕುಡಿಯಬೇಕು. ನಿಮಗೆ ದೇಹದಲ್ಲಿ ಉಷ್ಣತೆ ಇದ್ದು ನೀವು ಮಲಮೂತ್ರ ಮಾಡುವಾಗ ಅಥವಾ ನಿಮ್ಮ ಮೂಗಿನಿಂದ ರಕ್ತ ಸೋರುವ ಸಮಸ್ಯೆ ಇದ್ದರೆ, ಈ ನೀರನ್ನು ನೀವು ಕುಡಿಯುವ ಹಾಗಿಲ್ಲ.

