ಪನೀರ್ ರೆಸಿಪಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ವೆಜಿಟೇರಿಯನ್‌ಗಳಿಗೆ ಇದು ತುಂಬಾನೇ ಇಷ್ಟವಾಗುವಂಥ ರೆಸಿಪಿ. ಪನೀರ್ ಟಿಕ್ಕಾ, ಪನೀರ್ ಬಟರ್ ಮಸಾಲಾ, ಮನೀರ್ ಮಂಚೂರಿ, ಪನೀರ್ ಪೆಪ್ಪರ್ ಇತ್ಯಾದಿ ರಸಿಪಿಗಳನ್ನ ಮೆಚ್ಚಿ ತಿನ್ನುವವರಿದ್ದಾರೆ. ಇಂಥ ಪನೀರ್ ಪ್ರಿಯರಿಗಾಗಿ ಇಂದು ನಾವು ಮಟರ್ ಪನೀರ್ ರೆಸಿಪಿಯನ್ನ ತಂದಿದ್ದೇವೆ. ಈ ರೆಸಿಪಿ ಮಾಡಲು ಬೇಕಾಗುವ ಸಾಮಗ್ರಿಗಳೇನು..? ಇದನ್ನ ಮಾಡೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ಒಂದು ಕಪ್ ಪನೀರ್, ಒಂದು ಕಪ್ ಹಸಿರು ಬಟಾಣಿ, ಎರಡು ಸ್ಪೂನ್ ತುಪ್ಪ, ಒಂದು ಸ್ಪೂನ್ ಜೀರಿಗೆ, ಎರಡು ಈರುಳ್ಳಿ, ಒಂದು ಹಸಿ ಮೆಣಸು, ಎರಡು ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರ್ಧ ಸ್ಪೂನ್ ಅರಿಶಿನ, ಒಂದು ಸ್ಪೂನ್ ಖಾರದ ಪುಡಿ, ಎರಡು ಸ್ಪೂನ್ ಧನಿಯಾ ಪುಡಿ, ಒಂದು ಸ್ಪೂನ್ ಗರಂ ಮಸಾಲೆ ಪುಡಿ, ಒಂದು ಸ್ಪೂನ್ ಕಸೂರಿ ಮೇಥಿ, ಒಂದುವರೆ ಕಪ್ ಟೋಮೆಟೋ ಪ್ಯೂರಿ, ಅಗತ್ಯಕ್ಕೆ ತಕ್ಕಷ್ಟು ಉಪ್ಪು ಮತ್ತು ನೀರು.
ಮೊದಲು ಒಂದು ಪ್ಯಾನ್‌ನಲ್ಲಿ ಎಣ್ಣೆ ಅಥವಾ ಬೆಣ್ಣೆ ಹಾಕಿ, ಪನೀರ್‌ನ್ನ ಹುರಿದುಕೊಳ್ಳಿ. ಇದನ್ನು ಪಕ್ಕಕ್ಕಿರಿಸಿ. ನಂತರ ಪ್ಯಾನ್ ಬಿಸಿ ಮಾಡಿ, ಅದಕ್ಕೆ ತುಪ್ಪ, ಜೀರಿಗೆ ಮತ್ತು ಈರುಳ್ಳಿ ಹಾಕಿ, ಹುರಿದುಕೊಳ್ಳಿ. ಅದು ಕೊಂಚ ಕೆಂಪು ಬಣ್ಣಕ್ಕೆ ತಿರುಗಿದ ಮೇಲೆ, ಅದಕ್ಕೆ ಹಸಿಮೆಣಸಿನಕಾಯಿ, ಶುಂಠಿ- ಬೆಳ್ಳುಳ್ಳಿ ಪೇಸ್ಟ್ ಹಾಕಿ ಬಾಡಿಸಿ. ಈಗ ಅರಿಶಿನ ಪುಡಿ, ಮೆಣಸಿನ ಪುಡಿ, ಧನಿಯಾ ಪುಡಿ, ಗರಂ ಮಸಾಲೆ ಪುಡಿ, ಒಂದು ಸ್ಪೂನ್ ಕಸೂರಿ ಮೇಥಿ ಹಾಕಿ ಚೆನ್ನಾಗಿ ಹುರಿಯಿರಿ. ಇದು ಚೆನ್ನಾಗಿ ಹುರಿದ ಬಳಿಕವಷ್ಟೇ ನೀವು ಇದಕ್ಕೆ ಟೋಮೆಟೋ ಪ್ಯೂರಿ ಸೇರಿಸಿ. ಈಗ ಇದನ್ನೂ ಚೆನ್ನಾಗಿ ಹುರಿದುಕೊಳ್ಳಿ. ಇದನ್ನು ಮಂದ ಉರಿಯಲ್ಲಿ ಬೇಯಿಸಿ. ಕೊಂಚ ಹೊತ್ತಿನ ಬಳಿಕ, ಇದಕ್ಕೆ ಉಪ್ಪು ಮತ್ತು ಅರ್ಧ ಲೋಟ ನೀರು ಹಾಕಿ. ಈ ಗ್ರೇವಿ ಜಾಸ್ತಿ ಮಂದವಾಗಿಯೂ ಇರದೇ, ಜಾಸ್ತಿ ತೆಳುವಾಗಿಯೂ ಇರದೇ, ಹದವಾಗಿರಲಿ. ಈಗ ಇದನ್ನ 5 ನಿಮಿಷ ಮಂದ ಉರಿಯಲ್ಲಿ ಬೇಯಿಸಿ. ಈಗ ಮಟರ್ ಪನೀರ್‌ಗೆ ಬೇಕಾದ ಗ್ರೇವಿ ರೆಡಿ.
ಈ ಗ್ರೇವಿಗೆ ನೆನೆಸಿ ಬೇಯಿಸಿದ ಬಟಾಣಿ ಸೇರಿಸಿ. ನೀವು ಹಸಿ ಬಟಾಣಿ ಸೇರಿಸುವುದಿದ್ದರೆ, ಅದನ್ನ ಹಾಗೇ ಸೇರಿಸಿ. ಜೊತೆಗೆ ಹುರಿದು ಬದಿಗಿರಿಸಿದ ಪನೀರನ್ನೂ ಸೇರಿಸಿ. 5 ನಿಮಿಷ ಮಂದ ಉರಿಯಲ್ಲಿ ಕುದಿಸಿ. ಈಗ ಮಟರ್ ಪನೀರ್ ರೆಡಿ.