Health Tips: ಬಿಸಿಲು ಹೆಚ್ಚಾಗಿದ್ದಾಗ, ದೇಹದಲ್ಲಿ ಬೆವರಿನ ದುರ್ಗಂಧ ಬರುವುದು ಸಹಜ. ಹಾಗಾಗಿ ಹಲವರು ತರಹೇವಾರಿ ಪರ್ಫ್ಯೂಮ್ ಮೊರೆ ಹೋಗ್ತಾರೆ. ಆದರೆ ನೀವು ಸುಗಂಧ ದ್ರವ್ಯದ ಬದಲು, ಮನೆಯಲ್ಲಿರುವ ಇನ್ನೂ ಹಲವು ವಸ್ತುಗಳನ್ನು ಬಳಸಿ, ದೇಹದ ದುರ್ಗಂಧದಿಂದ ಮುಕ್ತಿ ಪಡೆಯಬಹುದು.
ಬೆವರಿನ ದುರ್ಗಂಧದಿಂದ ಮುಕ್ತಿ ಹೊಂದಲು, ಮೊದಲನೇಯದಾಗಿ ನೀವು ಅನುಸರಿಸಬಹುದಾದ ನಿಯಮವೆಂದರೆ, ತಣ್ಣೀರ ಸ್ನಾನ. ತಣ್ಣೀರಿನಿಂದ ಸ್ನಾನ ಮಾಡುವುದರಿಂದ, ದೇಹದ ದುರ್ಗಂಧ ಕಡಿಮೆಯಾಗುತ್ತದೆ. ತಣ್ಣೀರಿಗೆ ಗುಲಾಬಿ ದಳ, ರೋಸ್ ವಾಟರ್ ಅಥವಾ ಸುಗಂಧಭರಿತ ಎಣ್ಣೆ ಸೇರಿಸಿದರೆ ಇನ್ನೂ ಉತ್ತಮ. ನೀವು ಸ್ನಾನ ಮಾಡುವಾಗ, ಆಯುರ್ವೇದಿಕ್ ಸೋಪ್ ಬಳಸಿ. ಅದರಲ್ಲೂ ಬೇವಿನ ಸೋಪ್ ಬಳಸಿದರೆ ಇನ್ನೂ ಒಳ್ಳೆಯದು. ಬೇವಿನ ಸೋಪ್ ಬಳಕೆಯಿಂದ, ದೇಹದ ದುರ್ಗಂಧ ತೊಲಗುವುದಲ್ಲದೇ, ಗುಳ್ಳೆಗಳು, ತುರಿಕೆ ಕಡಿಮೆಯಾಗುತ್ತದೆ. ಇದು ನೀವು ಹೊರಗಿನಿಂದ ನಿಮ್ಮ ದೇಹವನ್ನು ದುರ್ಗಂಧದಿಂದ ದೂರವಿಡುವ ವಿಧಾನ.
ನೀವು ಕೆಲ ಆಹಾರ ಪದ್ಧತಿಯ ಮೂಲಕವೂ ನಿಮ್ಮ ಆರೋಗ್ಯವನ್ನು ಸರಿಯಾಗಿ ಇರಿಸಬಹುದು. ಚೆನ್ನಾಗಿ ನೀರು, ಎಳನೀರು ಕುಡಿದರೆ, ದೇಹದ ದುರ್ಗಂಧದಿಂದ ಮುಕ್ತಿ ಸಿಗುತ್ತದೆ. ಅಲ್ಲದೇ, ನಿಮ್ಮ ಆರೋಗ್ಯ ತುಂಬಾ ತುಂಬಾ ಸುಧಾರಿಸುತ್ತದೆ. ಇದನ್ನು ನೀವು ಹೇಗೆ ಕಂಡುಹಿಡಿಯಬಹುದು ಎಂದರೆ, ನಿಮ್ಮ ಮೂತ್ರದ ಬಣ್ಣದ ಮೂಲಕ ಕಂಡುಹಿಡಿಯಬಹುದು.
ನೀವು ಹೆಚ್ಚು ನೀರು ಮತ್ತು ಎಳನೀರಿನ ಸೇವನೆ ಮಾಡಿ. ಅದರಲ್ಲೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎಳನೀರಿನ ಸೇವನೆ ಮಾಡಿ. ಮತ್ತು ನಿಮ್ಮ ಮೂತ್ರದ ಬಣ್ಣವನ್ನು ಗಮನಿಸಿ. ಅದರ ಬಣ್ಣ ತಿಳಿಯಾಗಿ, ಸರಿಯಾಗಿ ಇದೆ ಎಂದರೆ, ನೀವು ಆರೋಗ್ಯವಂತರು ಎಂದರ್ಥ. ಅದೇ ನಿಮ್ಮ ಮೂತ್ರದ ಬಣ್ಣ ಗಾಢ ಹಳದಿ ಬಣ್ಣವಾಗಿದ್ದರೆ, ನಿಮ್ಮ ಆರೋಗ್ಯ ಸರಿಯಾಗಿಲ್ಲವೆಂದರ್ಥ. ಮತ್ತು ನೀವೂ ಕೂಡ ಬೆವರಿನ ಸಮಸ್ಯೆಯಿಂದ ಬಳಲುತ್ತಿದ್ದೀರಿ ಎಂದರ್ಥ.
ಅಲ್ಲದೇ, ಹಣ್ಣು, ಹಾಲು, ಮಜ್ಜಿಗೆ, ಮೊಸರು, ಡ್ರೈಫ್ರೂಟ್ಸ್ ಸೇವನೆಯನ್ನು ಸರಿಯಾಗಿ, ಮಿತವಾಗಿ ಮಾಡುವುದರಿಂದಲೂ, ನೀವು ಬೆವರಿನ ವಾಸನೆಯಿಂದ ಮುಕ್ತಿ ಪಡೆಯಬಹುದು. ಮಸಾಲೆ ಪದಾರ್ಥ, ಕರಿದ ಪದಾರ್ಥಗಳ ಸೇವನೆ ಕಂಟ್ರೋಲಿನಲ್ಲಿದ್ದರೆ, ನೀವು ದೇಹದ ದುರ್ಗಂಧದಿಂದ ಮುಕ್ತಿ ಹೊಂದುತ್ತೀರಿ.