ಇಂಗ್ಲೆಂಡ್: ವಿಶ್ವಕಪ್ ನಲ್ಲಿ ಕೊಹ್ಲಿ ಪಡೆ, ಉತ್ತಮ ಪ್ರದರ್ಶನ ನೀಡುತ್ತಿದೆ. ಆಡಿರುವ 7 ಪಂದ್ಯಗಳಲ್ಲಿ, ಒಂದು ಸೋಲು ಅನುಭವಿಸಿರುವ ಭಾರತ, ಸೆಮಿಫೈನಲ್ ಹೊಸ್ತಿಲಲ್ಲಿದೆ. ಈ ನಡುವೆ ತಂಡದ ಆಟಗಾರರಿಗೆ ಗಾಯದ ಸಮಸ್ಯೆ ಮಾತ್ರ ಮೇಲಿಂದ ಮೇಲೆ ಎದುರಾಗುತ್ತಿದೆ.
ಈಗಾಗಲೇ ಸ್ಫೋಟಕ ಬ್ಯಾಟ್ಸ್ ಮನ್ ಶಿಖರ್ ಧವನ್ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಈ ನಡುವೆ ಗಾಯಕ್ಕೆ ತುತ್ತಾಗಿದ್ದ ವೇಗಿ ಭುವನೇಶ್ವರ್ ಕುಮಾರ್, ಕಳೆದ ಮೂರು ಪಂದ್ಯಗಳಲ್ಲಿ ಕಣಕ್ಕಿಳಿದಿಲ್ಲ. ಇದರ ಜೊತೆಗೆ ಟೀಮ್ ಇಂಡಿಯಾಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಆಲ್ ರೌಂಡರ್ ವಿಜಯ್ ಶಂಕರ್ ಗಾಯಗೊಂಡಿದ್ದು, ಟೂರ್ನಿಯಿಂದಲೇ ಹೊರ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. ಟೂರ್ನಿಯಲ್ಲಿ 3 ಪಂದ್ಯಗಳನ್ನಾಡಿರುವ ಶಂಕರ್, 29ರ ಸರಾಸರಿಯಲ್ಲಿ 58 ರನ್ ಕಲೆ ಹಾಕಿದ್ದಾರೆ.
ಶಂಕರ್ ಬದಲಿಗೆ ಮಯಾಂಕ್ ಗೆ ಸ್ಥಾನ..?
ಶಿಖರ್ ಧವನ್ ಬದಲಿಗೆ ಯಂಗ್ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್, ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಸದ್ಯ ವಿಜಯ್ ಶಂಕರ್ ತವರಿಗೆ ಮರಳಿದಲ್ಲಿ, ಬದಲಿ ಆಟಗಾರನಾಗಿ ಕನ್ನಡಿಗ ಮಯಾಂಕ್ ಅಗರ್ ವಾಲ್ ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ. ಧವನ್ ಅನುಪಸ್ಥಿತಿಯಲ್ಲಿ ಇನಿಂಗ್ಸ್ ಆರಂಭಿಸುತ್ತಿರುವ ಕೆ. ಎಲ್. ರಾಹುಲ್, ಹೊಸ ಚೆಂಡು ಎದುರಿಸುವಲ್ಲಿ ಪರದಾಡುತ್ತಿದ್ದಾರೆ. ಇಂಗ್ಲೆಂಡ್ ಎದುರು 9 ಎಸೆತ ಎದುರಿಸಿದ ರಾಹುಲ್, ಡಕ್ ಔಟ್ ಆಗಿ ನಿರಾಸೆ ಮೂಡಿಸಿದ್ರು. ಹೀಗಾಗಿ ದೇಸಿ ರನ್ ಮಷಿನ್, ಮಯಾಂಕ್ ಗೆ ಅವಕಾಶ ನೀಡುವ ಬಗ್ಗೆ ಚರ್ಚೆ ನಡೆದಿದೆ. ಒಂದು ವೇಳೆ ಮಯಾಂಕ್ ತಂಡ ಸೇರಿದಲ್ಲಿ ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸುವ ಜವಾಬ್ದಾರಿ ಹೆಗಲೇರಲಿದೆ. ಅಷ್ಟೇ ಅಲ್ಲದೇ ರಾಹುಲ್, 4ನೇ ಕ್ರಮಾಂಕದಲ್ಲಿ ಕಣಕ್ಕಿಳಿಯೋ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಗೆಲ್ಲಲೇಬೇಕಿತ್ತು..! ಮಿಸ್ ಮಾಡದೇ ಈ ವಿಡಿಯೋ ನೋಡಿ