Monday, June 16, 2025

Latest Posts

ಭಾರತದ ಬಹುಮುಖ್ಯ ರಾಜತಾಂತ್ರಿಕ ನಡೆ : ಪಾಕ್‌ ಕುಟಿಲತನ, ಭಾರತದ ದಿಟ್ಟತನ ಸಾರಲು ವಿದೇಶಗಳಿಗೆ ಸಂಸದರ ನಿಯೋಗ..!

- Advertisement -

ಆಪರೇಷನ್‌ ಸಿಂಧೂರ್‌ ವಿಶೇಷ :

ನವದೆಹಲಿ : ಭಯೋತ್ಪಾದನೆಯ ವಿರುದ್ಧ ಮಹತ್ವದ ರಾಜತಾಂತ್ರಿಕ ಅಭಿಯಾನ ಆರಂಭಿಸಿರುವ ಕೇಂದ್ರ ಸರ್ಕಾರ, ಪಾಕಿಸ್ತಾನದ ವಿರುದ್ಧ ತಮ್ಮ ನಿಲುವು ಪ್ರಸ್ತುತಪಡಿಸುವ ನಿಟ್ಟಿನಲ್ಲಿ ಮುಂದಿನ ವಾರದಿಂದ ವಿವಿಧ ದೇಶಗಳಿಗೆ ಹಲವು ಸರ್ವಪಕ್ಷ ನಿಯೋಗಗಳನ್ನು ಕಳುಹಿಸಲಿದೆ. ಈ ಮೂಲಕ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯನ್ನು ವಿಶ್ವ ವೇದಿಕೆಯಲ್ಲಿ ಬಹಿರಂಗಪಡಿಸಲಿದೆ.

ಕಳೆದ ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಪ್ರವಾಸಿಗರು ಸೇರಿದಂತೆ 26 ಜನರು ಪ್ರಾಣ ಕಳೆದುಕೊಂಡಿದ್ದರು. ಇದರ ಪ್ರತೀಕಾರವಾಗಿ ಭಾರತವು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ ಪಿಒಕೆ ದಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿ, ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿತ್ತು. ಇದೀಗ ಈ ರಾಜತಾಂತ್ರಿಕ ಅಭಿಯಾನದ ಮೂಲಕ ಪಾಕಿಸ್ತಾನದ ಭಯೋತ್ಪಾದನೆಯ ವಿರುದ್ಧದ ನಮ್ಮ ನಿಲುವನ್ನು ವಿದೇಶಗಳಲ್ಲಿ ಪ್ರಸ್ತುತಪಡಿಸುವ ಗುರಿಯನ್ನು ಹೊಂದಿದೆ.

10 ದಿನಗಳ ವಿದೇಶ ಪ್ರವಾಸ, ಸರ್ವಪಕ್ಷಗಳ ಸಂಸದರು ಭಾಗಿ..

ಆಡಳಿತ ಮತ್ತು ವಿರೋಧ ಪಕ್ಷದ ವಿವಿಧ ಪಕ್ಷಗಳ ಸಂಸದರು ಸೇರಿದಂತೆ ಹಿರಿಯ ನಾಯಕರಿಗೆ ಈ ಅಭಿಯಾನದಲ್ಲಿ ಭಾಗವಹಿಸುವಂತೆ ಸರ್ಕಾರವು ಕೋರಿದೆ. ಕೆಲವು ಪಕ್ಷಗಳು ತಮ್ಮ ಸದಸ್ಯರು ಈ ಅಭಿಯಾನದಲ್ಲಿ ಉಪಸ್ಥಿತರಿರುವಂತೆ ಅನುಮತಿ ನೀಡಿವೆ. ಕೆಲವು ಮಾಜಿ ಸಚಿವರು, ವಿವಿಧ ಪಕ್ಷಗಳ ಸಂಸದರು ಈ ನಿಯೋಗವನ್ನು ಮುನ್ನಡೆಸಲಿದ್ದಾರೆ.

ಪ್ರತಿಯೊಂದು ನಿಯೋಗದಲ್ಲಿ ಸರ್ವಪಕ್ಷಗಳ ಸದಸ್ಯರು ಇರಲಿದ್ದಾರೆ, ಇವರು ನಾಲ್ಕರಿಂದ ಐದು ದೇಶಗಳಿಗೆ ಭೇಟಿ ನೀಡುವ ಸಿದ್ಧತೆ ನಡೆದಿದೆ. ಇನ್ನೂ ಈ ನಿಯೋಗಗಳು 10 ದಿನಗಳ ಅವಧಿಯಲ್ಲಿ ವಿವಿಧ ದೇಶಗಳಿಗೆ ಭೇಟಿ ನೀಡಲಿವೆ. ಸರ್ಕಾರ ನಿಗದಿಪಡಿಸಿದಂತೆ ಸಂಸದರು ಪ್ರವಾಸದ ವೇಳಾಪಟ್ಟಿ ಅನುಸರಿಸಲಿದ್ದಾರೆ. ಸಂಸದರು ಹೊರಡುವ ಮೊದಲು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಲಿದೆ. ಬಿಜೆಪಿ, ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಎನ್‌ಸಿಪಿ ಎಸ್‌ಪಿ, ಜೆಡಿಯು, ಬಿಜೆಡಿ, ಶಿವಸೇನೆ ಯುಬಿಟಿ, ಸಿಪಿಐ ಎಂ ಮತ್ತು ಇತರ ಕೆಲವು ಪಕ್ಷಗಳ ಸಂಸದರು ನಿಯೋಗದ ಭಾಗವಾಗಲಿದ್ದಾರೆ.

ನಿಯೋಗದಲ್ಲಿ ಯಾರ್ಯಾರು ಇರಲಿದ್ದಾರೆ..?

ಅಲ್ಲದೆ ವಿವಿಧ ಪಕ್ಷಗಳ ಸಂಸತ್ ಸದಸ್ಯರು, ಪ್ರಮುಖ ರಾಜಕೀಯ ವ್ಯಕ್ತಿಗಳು ಮತ್ತು ಗಣ್ಯ ರಾಜತಾಂತ್ರಿಕರನ್ನು ಒಳಗೊಂಡಿರುವ ಈ ನಿಯೋಗದಲ್ಲಿ ಸಂಸದರಾದ ಕಾಂಗ್ರೆಸ್‌ನ ಶಶಿ ತರೂರ್, ಬಿಜೆಪಿಯ ರವಿಶಂಕರ್ ಪ್ರಸಾದ್, ಜೆಡಿಯುನ ಸಂಜಯ್ ಕುಮಾರ್ ಝಾ, ಬಿಜೆಪಿಯ ಬೈಜಯಂತ್ ಪಾಂಡಾ, ಡಿಎಂಕೆಯ ಕನಿಮೋಳಿ ಕರುಣಾನಿಧಿ, ಎನ್‌ಸಿಪಿಯ ಸುಪ್ರಿಯಾ ಸುಳೆ, ಶಿವಸೇನೆಯ ಶ್ರೀಕಾಂತ್ ಏಕನಾಥ್ ಶಿಂಧೆ ಇದ್ದಾರೆ. ಸುಮಾರು 40 ಸದಸ್ಯರನ್ನು ಒಳಗೊಂಡಿರುವ ನಿಯೋಗವನ್ನು ಏಳು ಗುಂಪುಗಳಾಗಿ ರಚಿಸಲಾಗುತ್ತದೆ. ಈ ತಂಡಗಳು ವಿಶ್ವದ ವಿವಿಧ ದೇಶಗಳಿಗೆ ತೆರಳಿ ಭಯೋತ್ಪಾದನೆಯ ವಿರುದ್ಧ ದೇಶದ ಶೂನ್ಯ ಸಹಿಷ್ಣುತೆಯನ್ನು ತಿಳಿಸಲಿವೆ. ಈ ಏಳು ನಿಯೋಗಗಳಲ್ಲಿರುವ ಇತರ ಸದಸ್ಯರ ಹೆಸರುಗಳನ್ನು ಇನ್ನೂ ಘೋಷಿಸಲಾಗಿಲ್ಲ. ಪ್ರತಿ ನಿಯೋಗವು ಏಳರಿಂದ ಎಂಟು ಸದಸ್ಯರನ್ನು ಒಳಗೊಂಡಿದ್ದು, ನಾಲ್ಕರಿಂದ ಐದು ದೇಶಗಳಿಗೆ ಭೇಟಿ ನೀಡಲಿದೆ.

ರಾಜಕೀಯ ಭಿನ್ನಾಭಿಪ್ರಾಯ ಮೀರಿದ ರಾಷ್ಟ್ರೀಯ ಏಕತೆ..

ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದಿಂದ ಹುಟ್ಟಿಕೊಂಡಿರುವ ಗಡಿಯಾಚೆಗಿನ ಭಯೋತ್ಪಾದನೆಯ ಬಗ್ಗೆ ಭಾರತದ ನಿಲುವನ್ನು ಮಂಡಿಸಲು ಇದೇ ಮೊದಲ ಬಾರಿಗೆ ಕೇಂದ್ರವು ಹಲವು ಪಕ್ಷಗಳ ಸಂಸದರನ್ನು ನಿಯೋಜಿಸಿದೆ.

ಈ ಕುರಿತು ಶನಿವಾರ ಪ್ರತಿಕ್ರಿಯಿಸಿರುವ ನಿಯೋಗದ ಪ್ರವಾಸ ಯೋಜನೆಯನ್ನು ಮುನ್ನಡೆಸುತ್ತಿರುವ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಅತ್ಯಂತ ಮುಖ್ಯವಾದ ಕ್ಷಣದಲ್ಲಿ ಭಾರತ ಒಗ್ಗಟ್ಟಾಗಿದೆ. ಏಳು ಸರ್ವಪಕ್ಷ ನಿಯೋಗಗಳು ಶೀಘ್ರದಲ್ಲೇ ಪ್ರಮುಖ ಪಾಲುದಾರ ರಾಷ್ಟ್ರಗಳಿಗೆ ಭೇಟಿ ನೀಡಲಿವೆ. ಭಯೋತ್ಪಾದನೆಗೆ ನಮ್ಮ ಶೂನ್ಯ ಸಹಿಷ್ಣುತೆಯ ಸಂದೇಶವನ್ನು ಹೊತ್ತುಕೊಂಡು ತೆರಳಲಿದೆ. ಅಲ್ಲದೆ ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆಯ ಬಗ್ಗೆಯೂ ವಿದೇಶಗಳಿಗೆ ಮಾಹಿತಿ ನೀಡಲಿದೆ. ರಾಜಕೀಯ, ಭಿನ್ನಾಭಿಪ್ರಾಯಗಳನ್ನು ಮೀರಿ ರಾಷ್ಟ್ರೀಯ ಏಕತೆಯ ಪ್ರಬಲ ಪ್ರತಿಬಿಂಬವಾಗಿ ಈ ನಿಯೋಗ ಜಾಗತಿಕ ಮಟ್ಟದಲ್ಲಿ ಭಾರತದ ನಿಲುವನ್ನು ಬಲವಾಗಿ ಪ್ರತಿಪಾದಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಪಾಕ್‌ ಕೊಳಕನ್ನು ಜಗತ್ತಿಗೆ ತೋರಿಸಬೇಕು..

ಪ್ರಮುಖವಾಗಿ ಪಾಕಿಸ್ತಾನದ ಭಯೋತ್ಪಾದನೆಯ ವಿರುದ್ಧ ತನ್ನದೇ ಆದ ರೀತಿಯಲ್ಲಿ ಹೋರಾಟ ನಡೆಸುತ್ತಿರುವ ಭಾರತೀಯ ಸೇನೆ ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ಏರ್‌ಸ್ಟ್ರೈಕ್‌ ನಡೆಸಿ ಧ್ವಂಸ ಮಾಡಿತ್ತು. ಈ ಮೂಲಕ ಪಾಕ್‌ನ ಉಗ್ರ ಪ್ರೇಮಕ್ಕೆ ದೊಡ್ಡ ಏಟು ನೀಡಿತ್ತು. ಆದರೆ ಹೀಗೆ ಭಯೋತ್ಪಾದನೆಯನ್ನೇ ತನ್ನ ರಕ್ತದಲ್ಲಿ ಬೆಳೆಸಿಕೊಂಡಿರುವ ಪಾಕಿಸ್ತಾನದ ಮಗ್ಗಲು ಮುರಿಯುವ ಕೆಲಸ ಮಾಡಿತ್ತು. ಆದರೆ ರಣಹೇಡಿ ದೇಶವನ್ನು ನಂಬಲೇಬಾರದು ಅದರ ಒಳಗಿನ ಕೊಳಕನ್ನು ಇಡೀ ಜಗತ್ತಿಗೆ ಎತ್ತಿ ತೋರಿಸಬೇಕು. ಪಾಕಿಸ್ತಾನದ ವಿಚಾರದಲ್ಲಿ ಜಗತ್ತಿನ ದೇಶಗಳು ಕಠಿಣ ನಿಲುವನ್ನು ತಾಳಬೇಕು ಎಂದು ಒತ್ತಾಯಿಸಲು ಸರ್ಕಾರ ಮುಂದಾಗಿದೆ. ಹೀಗಾಗಿ ಸಂಸದರ ನಿಯೋಗದ ಮೂಲಕ ಆ ರಾಜತಾಂತ್ರಿಕ ನಡೆಯನ್ನು ಅನುಸರಿಸಲು ಭಾರತ ಹೆಜ್ಜೆ ಇಡುತ್ತಿದೆ.

- Advertisement -

Latest Posts

Don't Miss