ಗಾಂಧಾರಿಯ ಮೊದಲ ಪತಿ ಯಾರು..? ಈ ವಿಷಯ ಧೃತರಾಷ್ಟ್ರನಿಗೆ ಗೊತ್ತಾದಾಗ ಅವನೇನು ಮಾಡಿದ..?

ನೂರು ಮಕ್ಕಳ ತಂದೆ, ಕುರುವಂಶದ ರಾಜ ಧೃತರಾಷ್ಟ್ರ ಅಂದ್ರೆ ಮಹಾಭಾರತದಲ್ಲಿ ಬರುವ ಪ್ರಮುಖ ಪಾತ್ರ. ಹುಟ್ಟು ಕುರುಡನಾದರೂ ಶೌರ್ಯದಿಂದ ಮೆರೆದಿದ್ದ ಧೃತರಾಷ್ಟ್ರ, ಪತ್ನಿಯ ಮೊದಲ ಪತಿಯ ಬಗ್ಗೆ, ಮೊದಲ ಮದುವೆಯ ಬಗ್ಗೆ ಕೇಳಿ ಕ್ರೋಧಿತನಾಗಿದ್ದ. ಈ ಕಾರಣಕ್ಕೆ ಗಾಂಧಾರಿಯ ತಂದೆ ಮತ್ತು ಆ ಮನೆಯ ಪುರುಷರನ್ನು ಜೈಲಿಗೆ ಹಾಕಿ, ಚೂರು ಚೂರು ಆಹಾರ ನೀಡಿ, ಬಲಹೀನವಾಗಿ ಸಾಯುವಂತೆ ಮಾಡಿದ್ದ. ಹೀಗೆ ಮಾಡಿದಾಗಲೂ ಜೀವಂತ ಉಳಿದವನೆಂದರೆ ಶಕುನಿ. ಹಾಗಾದ್ರೆ ಗಾಂಧಾರಿಯ ಮೊದಲ ಪತಿ ಯಾರು..? ಮೊದಲ ಮದುವೆ ಆದದ್ದಾದರೂ ಯಾಕೆ..? ಈ ಎಲ್ಲ ವಿಚಾರಗಳ ಬಗ್ಗೆ ಮಾಹಿತಿಯನ್ನ ತಿಳಿಯೋಣ ಬನ್ನಿ..

ಗಾಂಧಾರಿಯ ಜಾತಕದಲ್ಲಿ ದೋಷವಿದ್ದ ಕಾರಣ, ಗಾಂಧಾರಿಯ ಪತಿ ಸಾವನ್ನಪ್ಪುತ್ತಾನೆ. ಗಾಂಧಾರಿ ವಿಧವೆಯಾಗುತ್ತಾಳೆ. ಎರಡನೇ ಮದುವೆಯಾದರೆ, ಅವಳ ಜೀವನ ಉತ್ತಮವಾಗಿರುತ್ತದೆ ಎಂದು ಬರೆಯಲಾಗಿತ್ತು. ಈ ಕಾರಣಕ್ಕೆ ಹೆದರಿದ್ದ ಗಾಂಧಾರ ರಾಜ, ಮಗಳ ಮದುವೆಯ ಬಗ್ಗೆ ಚಿಂತೆಗೀಡಾಗಿದ್ದ. ಆಗ ಓರ್ವ ಸಂತ, ಈಕೆಯ ಮದುವೆಯನ್ನು ಒಂದು ಆಡಿನೊಂದಿಗೆ ಮಾಡಿಸಿ ಎಂದು ಸಲಹೆ ನೀಡಿದರು.

ಹಾಗಾಗಿ ಗಾಂಧಾರ ರಾಜ, ಗಾಂಧಾರಿಯ ಮದುವೆಯನ್ನು ಆಡಿನೊಂದಿಗೆ ಮಾಡಿಸಿ, ಬಲಿ ನೀಡಿದ. ಆದರೆ ಗಾಂಧಾರಿಯ ಜೊತೆ ಧೃತರಾಷ್ಟ್ರನ ಮದುವೆ ಮಾಡುವ ವೇಳೆ, ಈ ವಿಷಯವನ್ನು ಮುಚ್ಚಿಡಲಾಗಿತ್ತು. ವಿವಾಹದ ನಂತರ ಧೃತರಾಷ್ಟ್ರನಿಗೆ ಈ ವಿಷಯ ಗೊತ್ತಾಗಿ, ಸಿಟ್ಟು ಬಂತು. ಆಗ ಧೃತರಾಷ್ಟ್ರ ಗಾಂಧಾರಿಯ ಪರಿವಾರದಲ್ಲಿರುವ ಪುರುಷರನ್ನು ಬಂಧಿಸಿ, ಕಾರಾಗೃಹಕ್ಕಟ್ಟಿದ.

ಪ್ರತಿದಿನ ಎಲ್ಲರಿಗೂ ಬರೀ ಒಂದೊಂದೇ ಅಗಳು ಅನ್ನ ನೀಡಿದ. ಹೀಗಾಗಿ ಗಾಂಧಾರಿಯ ಪರಿವಾರದ ಪುರುಷರೆಲ್ಲ ಅನಾರೋಗ್ಯದಿಂದ ನರಳಾಗಿ ಸಾವನ್ನಪ್ಪಿದರು. ಕೊನೆಗೆ ಗಾಂಧಾರಿಯ ಅಣ್ಣ ಶಕುನಿಯೊಬ್ಬನೇ ಉಳಿದ. ಶಕುನಿಯ ತಂದೆ ಸಾಯುವುದಕ್ಕೂ ಮುನ್ನ, ಶಕುನಿಗೆ ಒಂದು ಮಾತನ್ನು ಹೇಳಿದ್ದ. ನಾನು ಸತ್ತ ಬಳಿಕ, ನೀನು ನನ್ನ ಮೂಳೆಯನ್ನು ಮುರಿದು ಅದರಿಂದ ದಾಳ ತಯಾರಿಸು. ಆ ದಾಳದಿಂದ ಪಾಂಡವರು ಮತ್ತು ಕೌರವರ ಮಧ್ಯೆ ಪಗಡೆ ಆಟ ನಡೆಯುವಂತೆ ಮಾಡು. ಮತ್ತು ಅದರಿಂದಲೇ ಕುರುವಂಶದ ನಾಶ ಮಾಡು ಎಂದು ಹೇಳಿದ್ದ.

ಹಾಗಾಗಿ ಶಕುನಿ, ದುರ್ಯೋಧನನ ಕರುಣೆ ಗಿಟ್ಟಿಸಿಕೊಂಡು, ದುರ್ಯೋಧನನಿಗೆ ಮೋಸದ ಉಪಾಯಗಳನ್ನು ಹೇಳುತ್ತ, ದಾರಿ ತಪ್ಪಿಸಿ, ಕುರುವಂಶದ ನಾಶಕ್ಕೆ ಕಾರಣನಾದ.

About The Author