Spiritual: ಮಂಗಳೂರಿನಲ್ಲಿರುವ ಪ್ರಸಿದ್ಧ ದೇವಸ್ಥಾನಗಳಲ್ಲಿ ಕುದ್ರೋಳಿ ಗೋಕರ್ಣನಾಥೇಶ್ವರನ ದೇವಸ್ಥಾನ ಕೂಡ ಒಂದು. ಈ ದೇವಸ್ಥಾನ ಇತ್ತೀಚೆಗೆ ನಿರ್ಮಾಣವಾಗಿದ್ದರೂ ಕೂಡ, ತನ್ನ ವೈಭವಗಳಿಂದ ಎಲ್ಲ ಗಮನ ಸೆಳೆದು ಪ್ರಸಿದ್ಧವಾಗಿದೆ. ಈ ದೇವಸ್ಥಾನದ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ..
ಮಂಗಳೂರು ಪಟ್ಟಣದ ಮಧ್ಯಭಾಗದಲ್ಲೇ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನವಿದೆ. ಇಲ್ಲಿ ಶಿವನ ಪೂಜೆಗೆ ಮೊದಲ ಪ್ರಾಶಸ್ತ್ಯ. ಜೊತೆಗೆ ಬೇರೆ ಬೇರೆ ದೇವರುಗಳ ಚಿಕ್ಕ ಚಿಕ್ಕ ಗುಡಿಯೂ ಇದೆ. ಇಲ್ಲಿನ ಶಿಲ್ಪಕಲೆ ಉತ್ತಮವಾಗಿದ್ದು, ಕಲ್ಯಾಣಿಯ ಸುತ್ತಲೂ ನಿರ್ಮಿಸಿರುವ ಶಿವನ ಮೂರ್ತಿ ಗಮನ ಸೆಳೆಯುತ್ತದೆ. 1912ರಲ್ಲಿ ಈ ದೇವಸ್ಥಾನ ನಿರ್ಮಾಣವಾಗಿದ್ದರೂ ಕೂಡ, ಇದೀಗ ಇರುವ ದೇವಸ್ಥಾನ 1991ರಲ್ಲಿ ನಿರ್ಮಾಣವಾಗಿದ್ದು, ಇತ್ತೀಚೆಗೆ ಅದನ್ನು ಅಭಿವೃದ್ಧಿಗೊಳಿಸಲಾಗಿದೆ.
ಶ್ರೀನಾರಾಯಣ ಗುರುಗಳ ಮಾರ್ಗದರ್ಶನದಿಂದ ಈ ದೇವಸ್ಥಾನ ನಿರ್ಮಾಣವಾಯಿತು. ಇವರೇ ಈ ದೇವಸ್ಥಾನದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿದರು. ಸಾಯಿಬಾಬಾ, ಹನುಮಂತ, ಗಣಪತಿ, ಶ್ರೀಕೃಷ್ಣ, ಶಿವ ಪಾರ್ವತಿ ಎಲ್ಲರ ಮೂರ್ತಿಯೂ ಇಲ್ಲಿದ್ದು, ನೋಡಲು ಸುಂದರವಾಗಿದೆ. ಇಲ್ಲಿ ಪ್ರತೀವರ್ಷ ಮಹಾಶಿವರಾತ್ರಿ ಮತ್ತು ನವರಾತ್ರಿಯನ್ನು ವಿಜೃಂಭಣೆಯಿಂದ ಮಾಡಲಾಗುತ್ತದೆ.
ನವರಾತ್ರಿಗೆ ಒಂಭತ್ತು ಶಕ್ತಿದೇವತೆಗಳ ಪ್ರತಿಷ್ಠಾಪನೆ ಮಾಡಿ, ಪೂಜಿಸಲಾಗುತ್ತದೆ. ಈ ವೇಳೆ ಪ್ರತಿದಿನ ಸಾವಿರಾರು ಜನ ದೇವಿಯರ ದರ್ಶನಕ್ಕೆ ಬರುತ್ತಾರೆ. ಈ ಕಾರಣಕ್ಕೆ ಇಡೀ ಮಂಗಳೂರು ಸಿಟಿಯನ್ನು, ಲೈಟಿನಿಂದ ಅಲಂಕಾರ ಮಾಡಲಾಗುತ್ತದೆ. ಅಲ್ಲದೇ, ಮಹಾಶಿವರಾತ್ರಿಯನ್ನು ಕೂಡ ಸಂಭ್ರಮದಿಂದ ಆಚರಿಸಲಾಗುತ್ತದೆ.




