ಮಹಾಭಾರತ ಯುದ್ಧದ ಬಳಿಕ, ಪಾಂಡವರು 36 ವರ್ಷಗಳವರೆಗೆ ಹಸ್ತಿನಾಪುರದಲ್ಲಿ ಆಡಳಿತ ನಡೆಸಿದರು. ನಂತರ ದ್ರೌಪದಿಯೊಂದಿಗೆ ಸೇರಿ, ಸ್ವರ್ಗಕ್ಕೆ ತೆರಳುತ್ತಿದ್ದರು. ಹಾಗಾದರೆ ಎಲ್ಲರೂ ಸ್ವರ್ಗಕ್ಕೆ ಹೋದರೇ..? ಅವರೆಲ್ಲ ಸ್ವರ್ಗಕ್ಕೆ ಹೋಗಬೇಕಾದರೆ, ಏನಾಯಿತು..? ಎಲ್ಲರಿಗೂ ಸ್ವರ್ಗ ಸಿಕ್ಕಿತೇ..? ಇತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..
ಪಾಂಡವರು, ದ್ರೌಪದಿಯೊಂದಿಗೆ ಸೇರಿ ಸ್ವರ್ಗಕ್ಕೆ ಹೋಗುವಾಗ, ಅವರೊಂದಿಗೆ ನಾಯಿಯೊಂದು ಹೋಗುತ್ತದೆ. ಹಾಗೆ ಹೋಗುವಾಗ, ದ್ರೌಪದಿ ಸಾವನ್ನಪ್ಪುತ್ತಾಳೆ. ಆಗ ಭೀಮ ಯುಧಿಷ್ಠಿರನಿಗೆ ಕೇಳುತ್ತಾನೆ, ದ್ರೌಪದಿ ಏಕೆ ಸತ್ತಳು..? ಆಕೆ ಏಕೆ ನಮ್ಮೊಂದಿಗೆ ಸ್ವರ್ಗಕ್ಕೆ ಬರಲಾಗಲಿಲ್ಲವೆಂದು. ಆಗ ಯುಧಿಷ್ಠಿರ, ಆಕೆಗೆ ನಾವೆಲ್ಲರೂ ಪತಿಯಾಗಿದ್ದೆವು. ಆದರೆ ಆಕೆ ಅರ್ಜುನನನ್ನು ಮಾತ್ರ ಹೆಚ್ಚು ಪ್ರೀತಿಸುತ್ತಿದ್ದಳು. ಅಲ್ಲದೇ ಆಕೆಗೆ 5 ಪತಿಯರಿದ್ದರೆಂಬ ಅಹಂ ಇತ್ತು. ಹಾಗಾಗಿ ಆಕೆ ಸ್ವರ್ಗಕ್ಕೆ ಬರಲಾಗಲಿಲ್ಲ ಎನ್ನುತ್ತಾನೆ.
ನಂತರ ಎಲ್ಲರೂ ಮುನ್ನಡೆಯುತ್ತಾರೆ. ಹಾಗೆ ಹೋಗುವಾಗ, ಸಹದೇವ ಸಾವನ್ನಪ್ಪುತ್ತಾನೆ. ಆಗ ಭೀಮ ಸಹದೇವನೇಕೆ ಸತ್ತನೆಂದು ಕೇಳುತ್ತಾನೆ. ಆಗ ಯುಧಿಷ್ಠಿರ, ಅವನಿಗೆ ತಾನೇ ದೊಡ್ಡ ವಿದ್ವಾಂಸನೆಂಬ ಅಹಂ ಇತ್ತು ಹಾಗಾಗಿ ಅವನು ಸ್ವರ್ಗಕ್ಕೆ ಬರಲಾಗಲಿಲ್ಲವೆಂದು ಹೇಳುತ್ತಾನೆ.
ಪುನಃ ಮುನ್ನಡೆಯುತ್ತಾರೆ. ಆಗ ನಕುಲ ಸಾವನ್ನಪ್ಪುತ್ತಾನೆ. ಭೀಮ ಮತ್ತೆ ನಕುಲನೇಕೆ ಸತ್ತನೆಂದು ಕೇಳುತ್ತಾನೆ. ಆಗ ಯುಧಿಷ್ಠಿರ, ನಕುಲನಿಗೆ ತನ್ನ ಸೌಂದರ್ಯದ ಬಗ್ಗೆ ಅತೀ ಅಭಿಮಾನವಿತ್ತು. ಈ ಕಾರಣಕ್ಕೆ ಆತ ನಮ್ಮೊಂದಿಗೆ ಸ್ವರ್ಗ ಲೋಕಕ್ಕೆ ಬರಲಾಗಲಿಲ್ಲ ಎನ್ನುತ್ತಾನೆ. ನಡಿಗೆ ಮುಂದುವರಿಯುತ್ತದೆ.
ನಾಲ್ಕನೇಯದಾಗಿ ಅರ್ಜುನ ಸಾವನ್ನಪ್ಪುತ್ತಾನೆ. ಭೀಮ ಅರ್ಜುನನ ಸಾವಿಗೆ ಕಾರಣ ಕೇಳುತ್ತಾನೆ. ಆಗ ಯುಧಿಷ್ಠಿರ, ಅರ್ಜುನನಿಗೆ ತಾನು ಪ್ರಪಂಚದಲ್ಲೇ ಅತ್ಯುತ್ತಮ ಧನುರ್ಧಾರಿ ಅನ್ನೋ ಅಹಂ ಇತ್ತು. ಈ ಕಾರಣಕ್ಕೆ ಅರ್ಜುನ ನಮ್ಮೊಂದಿಗೆ ಸ್ವರ್ಗಕ್ಕೆ ಬರಲಾಗಲಿಲ್ಲ ಎನ್ನುತ್ತಾನೆ.
ಐದನೇಯದಾಗಿ ಭೀಮ ಸಾವನ್ನಪ್ಪುತ್ತಾನೆ. ಆದರೆ ಸಾವಿಗೂ ಮುನ್ನ ತನ್ನ ಸಾವಿಗೇನು ಕಾರಣ ಎಂದು ಕೇಳುತ್ತಾನೆ. ಆಗ ಯುಧಿಷ್ಠಿರ, ನೀನು ಅಗತ್ಯಕ್ಕಿಂತ ಹೆಚ್ಚು ತಿನ್ನುತ್ತಿದ್ದೆ. ಮತ್ತು ಶಕ್ತಿ ಪ್ರದರ್ಶನದ ಸಮಯದಲ್ಲಿ ಅಗತ್ಯಕ್ಕಿಂತ ಹೆಚ್ಚು ಶಕ್ತಿ ಪ್ರದರ್ಶಿಸುತ್ತಿದ್ದೆ. ಈ ಕಾರಣಕ್ಕೆ ನಮ್ಮೊಂದಿಗೆ ನೀನೂ ಸ್ವರ್ಗಕ್ಕೆ ಬರಲಾಗಲಿಲ್ಲ ಎನ್ನುತ್ತಾನೆ.
ಯುಧಿಷ್ಠಿರನ ಜೊತೆ ಇದ್ದ ನಾಯಿ, ಸ್ವರ್ಗ ಲೋಕಕ್ಕೆ ಹೋಗುತ್ತದಾ..? ಯುಧಿಷ್ಠಿರ ಸ್ವರ್ಗಲೋಕದಲ್ಲಿ ಯಾರನ್ನು ಕಾಣುತ್ತಾನೆ..? ನಂತರ ಏನಾಗುತ್ತದೆ..? ಇತ್ಯಾದಿ ವಿಷಯಗಳ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ.