Spiritual: ಹಿಂದೂಗಳಲ್ಲಿರುವ ಪವಿತ್ರ ಪುರಾಣಗಳಲ್ಲಿ ಗರುಡ ಪುರಾಣ ಕೂಡ ಒಂದು. ಒಮ್ಮೆ ಗರುಡ ಪುರಾಣದ ಕಥೆಗಳನ್ನು ಕೇಳಿದವರು, ಜೀವನದಲ್ಲೆಂದೂ ಪಾಪವನ್ನು ಮಾಡುವುದಿಲ್ಲವೆಂದು ಹೇಳುತ್ತಾರೆ. ಏಕೆಂದರೆ, ಅದರಲ್ಲಿ ಜೀವನಕ್ಕೆ ಸಂಬಂಧಿಸಿದ ಕೆಲ ಸತ್ಯಗಳನ್ನು ಮತ್ತು ಸತ್ತ ಮೇಲೆ ನಮ್ಮ ಪಾಪಗಳಿಗೆ ಯಾವ ಯಾವ ಶಿಕ್ಷೆ ಸಿಗುತ್ತದೆ ಎಂಬ ಬಗ್ಗೆ ಹೇಳಿರುತ್ತಾರೆ. ಹಾಗಾಗಿ ಗರುಡ ಪುರಾಣ ಶ್ರವಣ ಮಾಡಿದವರು, ನೀತಿವಂತರಾಗಿರುತ್ತಾರೆಂದು ಹೇಳಲಾಗುತ್ತದೆ. ಇಂದು ನಾವು ಇದೇ ಗರುಡ ಪುರಾಣ ಹೇಳಿದ ಕೆಲ ಸತ್ಯಗಳ ಬಗ್ಗೆ ತಿಳಿಯೋಣ.
ಮೊದಲನೇಯ ತಪ್ಪು ಎಂದರೆ, ಮನೆಯನ್ನು ಸ್ವಚ್ಛವಾಗಿ ಇಡದೇ ಇರುವುದು. ನಿಮ್ಮ ಮನೆಯಲ್ಲಿ ನೆಮ್ಮದಿ ಇರಬೇಕು. ಆರ್ಥಿಕ ಪರಿಸ್ಥಿತಿ ಚೆನ್ನಾಗಿ ಇರಬೇಕು ಎಂದಲ್ಲಿ, ನಿಮ್ಮ ಮನೆ ಸದಾ ಕ್ಲೀನ್ ಆಗಿರಬೇಕು. ನಿಮ್ಮ ಮನೆ ಸ್ವಚ್ಛವಾಗಿ ಇದ್ದಷ್ಟು, ಲಕ್ಷ್ಮೀ ದೇವಿಯ ಕೃಪೆ ನಿಮ್ಮ ಮೇಲಾಗುತ್ತದೆ. ಮನೆಯವರ ಮನಸ್ಸು ಶಾಂತವಾಗಿರಲು ಇದು ಸಹಕಾರಿಯಾಗಿದೆ.
ಎರಡನೇಯ ತಪ್ಪು ಎಂದರೆ, ಅನ್ನಕ್ಕೆ ಅವಮಾನ ಮಾಡುವುದು. ನಾವು ತಿನ್ನುವ ಅನ್ನಕ್ಕೆ ಎಂದಿಗೂ ಅವಮಾನ ಮಾಡಬಾರದು. ಊಟ ಮಾಡುವಾಗ, ಊಟ ರುಚಿಕರವಾಗಿಲ್ಲವೆಂದು ಬೈದುಕೊಂಡು ತಿನ್ನುವುದು. ಅನ್ನದ ಮೇಲೆ ಸಿಟ್ಟು ಮಾಡಿಕೊಂಡು ಅರ್ದಂಬರ್ಧ ತಿಂದು ಎದ್ದು ಹೋಗುವುದೆಲ್ಲ ಮಾಡಿದಾಗ, ಅನ್ನಪೂರ್ಣೆಯ ಅವಕೃಪೆಗೆ ಪಾತ್ರವಾಗಬೇಕಾಗುತ್ತದೆ. ಇದರಿಂದ ಬಡತನ ಬರುತ್ತದೆ. ಮನೆಯ ನೆಮ್ಮದಿ ಹಾಳಾಗುತ್ತದೆ.
ಮೂರನೇಯ ತಪ್ಪು ಎಂದರೆ, ಸಿಟ್ಟು ಮಾಡುವುದು. ಮಾತು ಮಾತಿಗೂ ಯಾರು ಕೋಪ ಮಾಡಿಕೊಳ್ಳುತ್ತಾರೋ, ಅವರ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಅಂಥವರನ್ನು ಯಾರೂ ಪ್ರೀತಿ ಮಾಡುವುದಿಲ್ಲ. ಅವರಿಗೆಂದೂ ನೆಮ್ಮದಿ ಇರುವುದಿಲ್ಲ.
ನಾಲ್ಕನೇಯ ತಪ್ಪು ಎಂದರೆ, ಲಂಚ ತೆಗೆದುಕೊಳ್ಳುವುದು. ಮೋಸ ಮಾಡಿ ಪಡೆದುಕೊಳ್ಳುವ ಹಣ, ಲಂಚ ತೆಗೆದುಕೊಳ್ಳುವುದು, ಕಳ್ಳತನ, ಹೀಗೆ ನಾವು ಕಷ್ಟಪಡದೇ, ಎದುರಿನವರು ದುಃಖಿಸಿ, ಬೈದು ಕೊಡುವ ಹಣವನ್ನು ಪಡೆದುಕೊಂಡರೆ, ಅದರಿಂದ ನಮಗೆಂದೂ ಒಳ್ಳೆಯದಾಗುವುದಿಲ್ಲ. ಅಂಥ ದುಡ್ಡು ನಿಮಗೆ ದಾರಿದ್ರ್ಯ ತಂದುಕೊಡುತ್ತದೆ.
ಐದನೇಯ ತಪ್ಪು ಎಂದರೆ, ಮುಸ್ಸಂಜೆ ವೇಳೆಯಲ್ಲಿ ಮಾಡಬಾರದ ಕೆಲ ಕೆಲಸಗಳನ್ನು ಮಾಡುವುದು. ಮುಸ್ಸಂಜೆ ಹೊತ್ತಲ್ಲಿ, ತಲೆ ಬಾಚಿಕೊಳ್ಳಬಾರದು. ತಲೆಗೆ ಎಣ್ಣೆ ಹಾಕಬಾರದು. ಅಳಬಾರದು. ಕೆಟ್ಟ ಮಾತುಗಳನ್ನಾಡುತ್ತ ಜಗಳವಾಡಬಾರದು. ಉಗುರು ಕತ್ತರಿಸಬಾರದು. ಕಸ ಗುಡಿಸಬಾರದು. ನಿದ್ದೆ ಮಾಡಬಾರದು. ಸಂಭೋಗ ಮಾಡಬಾರದು. ಇವಿಷ್ಟು ಕೆಲಸಗಳನ್ನು ದೀಪ ಹಚ್ಚುವ ಹೊತ್ತಿಗೆ ಮಾಡಿದರೆ, ಲಕ್ಷ್ಮೀ ದೇವಿ ನಿಮ್ಮ ಮೇಲೆ ಕೋಪಗೊಳ್ಳುತ್ತಾಳೆ. ಆಗಲೇ ದಾರಿದ್ರ್ಯ ವಕ್ಕರಿಸುತ್ತದೆ.