ನಾವು ನಮಗೆ ಗೊತ್ತಿದ್ದೊ ಗೊತ್ತಿಲ್ಲದೆಯೋ ಸುಮಾರು ತಪ್ಪುಗಳನ್ನ ಮಾಡ್ತೀವಿ. ಹಿರಿಯರು ಹೇಳುವ ಪ್ರಕಾರ, ಗೊತ್ತಿದ್ದು ಮಾಡಿದ್ರೂ, ಗೊತ್ತಿಲ್ಲದೇ ಮಾಡಿದ್ರು ತಪ್ಪು ತಪ್ಪೇ.. ಹಾಗಾದ್ರೆ ನಾವು ಯಾವ ತಪ್ಪು ಮಾಡಿದ್ರೆ, ಮುಂದಿನ ಜನ್ಮದಲ್ಲಿ ನಾಯಿಯಾಗಿ ಹುಟ್ಟುತ್ತೇವೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ತುಳಸಿದಾಸರ ಪ್ರಕಾರ, ದೊಡ್ಡ ಪುಣ್ಯ ಮಾಡಿದಾಗಲೇ ಮನುಷ್ಯ ಜನ್ಮ ಸಿಗುತ್ತದೆಯಂತೆ. ಹೀಗೆ ಮನುಷ್ಯ ಜನ್ಮ ಸಿಕ್ಕಾಗ ಆದಷ್ಟು ಉತ್ತಮ ಕೆಲಸಗಳನ್ನೇ ಮಾಡಬೇಕು. ಕೆಟ್ಟ ಕೆಲಸಗಳನ್ನು ಮಾಡಬಾರದು. ಹಾಗೆ ಮಾಡಿದ್ದಲ್ಲಿ, ಅದಕ್ಕೆ ತಕ್ಕ ಶಿಕ್ಷೆಯನ್ನೂ ಅನುಭವಿಸಬೇಕಾಗುತ್ತದೆ. ಇನ್ನು ಯಾವ ತಪ್ಪು ಮಾಡಿದ್ರೆ ಯಾವ ಶಿಕ್ಷೆಯಾಗುತ್ತದೆ ಅಂತಾ ಗರುಡ ಪುರಾಣದಲ್ಲಿ ಹೇಳಲಾಗಿದೆ.
ಆದ್ರೆ ಇಂದು ನಾವು ಮನುಷ್ಯ ಮುಂದಿನ ಜನ್ಮದಲ್ಲಿ ನಾಯಿ ಯೋನಿಯಲ್ಲಿ ಜನಿಸಲು ಕಾರಣವೇನು ಅನ್ನೋ ಬಗ್ಗೆ ಕಥೆ ಕೇಳೋಣ. ಒಮ್ಮೆ ಶ್ರೀರಾಮ ದರ್ಬಾರಿನಲ್ಲಿ ಕುಳಿತಿದ್ದ. ಆಗ ಒಂದು ನಾಯಿ ಅಳುತ್ತ ಅರಮನೆ ಬಳಿ ಬಂತಂತೆ. ಆಗ ಅಲ್ಲಿದ್ದ ಸೈನಿಕರು, ನಿನ್ನ ಸಮಸ್ಯೆ ಏನೆಂದು ನಾಯಿಯ ಬಳಿ ಕೇಳಿದರಂತೆ. ಅದನ್ನು ನಾನು ಶ್ರೀರಾಮನ ಬಳಿಯೇ ಹೋಗಿ ಹೇಳಬೇಕೆಂದು ಹೇಳಿತಂತೆ.
ಆಗ ಶ್ರೀರಾಮ ನಾಯಿಯನ್ನು ಕುರಿತು ನಿನ್ನ ಅಳುವಿಗೆ ಕಾರಣವೇನು ಎಂದು ಕೇಳಿದನಂತೆ. ಆಗ ಆ ನಾಯಿ ಓರ್ವ ಸ್ವಾಮಿಜಿ ನನಗೆ ಕೋಲಿನಿಂದ ಹೊಡೆದ, ಅವನಿಗೆ ಸರಿಯಾದ ಶಿಕ್ಷೆ ಕೊಡಿ ಎಂದು ಕೇಳಿತಂತೆ. ಆಗ ನಗರದಲ್ಲಿ ಆ ಸ್ವಾಮೀಜಿ ಎಲ್ಲಿದ್ದರೂ ಹುಡುಕಿ ತನ್ನಿ ಎಂದು ಹೇಳಲಾಯಿತು. ಅವರು ಅರಮನೆಗೆ ಬಂದ. ಆಗ ಶ್ರೀರಾಮ, ನಾಯಿಯ ಆರೋಪ ನಿಜವಾ ಎಂದು ಕೇಳಿದನಂತೆ. ಅದಕ್ಕೆ ಆ ಸ್ವಾಮೀಜಿ ಹೌದು, ನಿಜ ಎಂದು ಹೇಳಿದನಂತೆ.
ಯಾಕೆ ಹೊಡೆದೆ ಎಂದು ಕೇಳಿದಾಗ, ಅದು ನನ್ನ ಭಿಕ್ಷೆಯ ಚೀಲವನ್ನು ಮುಟ್ಟುವ ಪ್ರಯತ್ನ ಮಾಡುತ್ತಿತ್ತು ಎಂದನಂತೆ. ಆಗ ಶ್ರೀರಾಮ ನಾಯಿಯನ್ನು ಕುರಿತು, ಇವನಿಗೇನು ಶಿಕ್ಷೆ ಕೊಡಲಿ ಎಂದು ಕೇಳಿದ. ಆಗ ನಾಯಿ, ಅವನಿಗೆ ಇನ್ನಷ್ಟು ದಾನ ನೀಡಿ ಎಂದಿತು. ಆಗ ರಾಮ ಸನ್ಯಾಸಿಗೆ ದಾನ ನೀಡಿ ಕಳಿಸಿದ. ಆಗ ಅಲ್ಲಿ ನೆರೆದಿದ್ದ ಜನ, ನಾಯಿಯನ್ನು ಕುರಿತು, ಆತ ನಿನಗೆ ಹೊಡೆದ, ಆದರೂ ನೀನು ಅವನಿಗೆ ದಾನ ನೀಡಿ ಕಳಿಸು ಅಂತಾ ಹೇಳಿದ್ಯಾಕೆ ಎಂದು ಕೇಳಿದರು.
ಆಗ ಆ ನಾಯಿ. ಅವನಿಗೆ ಶಿಕ್ಷೆ ಕೊಡುವ ಬದಲು ಅವನು ಹೀಗೆ ಇರಲಿ. ಅವನು ದಾನ ಪಡೆದ ಬಳಿಕ, ಅದು ಖಾಲಿಯಾದ ಬಳಿಕ ಮತ್ತೆ ಭಿಕ್ಷೆಗೆ ಹೋಗುತ್ತಾನೆ. ಅವನು ಭಿಕ್ಷೆ ತರುವಾಗ, ನಾಯಿಗಳು ಅವನ ಹಿಂದೆ ಆಹಾರಕ್ಕಾಗಿ ಅಂಗಲಾಚುತ್ತದೆ. ದಯೆ ತೋರಿ, ಚೂರು ಅನ್ನ ಅವಕ್ಕೂ ಹಾಕಿದರೆ, ಅವನ ಪಾಪ ನಾಶವಾಗುತ್ತದೆ. ಅದನ್ನು ಬಿಟ್ಟು ಅವಕ್ಕೆ ಹಿಂಸೆ ನೀಡಿದ್ದಲ್ಲಿ ಮುಂದಿನ ಜನ್ಮದಲ್ಲಿ ಅವನಿಗೂ ಶ್ವಾನ ಜನ್ಮ ಪ್ರಾಪ್ತಿಯಾಗುತ್ತದೆ ಎನ್ನುತ್ತದೆ. ಹಾಗಾಗಿ ಯಾರಿಗಾದರೂ ಸಾಧ್ಯವಾದಲ್ಲಿ ಒಳ್ಳೆಯದು ಮಾಡಿ, ಆಗದಿದ್ದಲ್ಲಿ ಸುಮ್ಮನಿರಿ, ಆದರೆ ಅವರಿಗೆ ಹಿಂಸೆ ನೀಡಬೇಡಿ ಅನ್ನೋದಷ್ಟೇ ಇದರ ಅರ್ಥ.