Spiritual: ಚಾಣಕ್ಯರು ಜೀವನ ನಡೆಸುವ ಕ್ರಮ, ಹಣ ಉಳಿಸುವ ಕ್ರಮ, ಜೀವನ ಸಂಗಾತಿಯನ್ನು ಆರಿಸುವ ಕ್ರಮ. ಹೀಗೆ ಹಲವು ವಿಷಯಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅಂತೆಯೇ, ಶ್ರೀಮಂತರಾಗಬೇಕು ಅಂದ್ರೆ, ನಾವು ಯಾವ ಕೆಲಸವನ್ನು ಮಾಡಬಾರದು. ಯಾವ ಕೆಲಸವನ್ನು ಮಾಡಬೇಕು. ಯಾವ ನಿಯಮವನ್ನು ಅನುಸರಿಸಬೇಕು ಎಂದು ಕೂಡ ಹೇಳಿದ್ದಾರೆ. ಹಾಗಾದ್ರೆ ಚಾಣಕ್ಯರ ಪ್ರಕಾರ, ಯಾವ ಅಭ್ಯಾಸವಿದ್ದವರು ಶ್ರೀಮಂತರಾಗುತ್ತಾರೆಂದು ತಿಳಿಯೋಣ ಬನ್ನಿ..
ಒಳ್ಳೆಯ ಮಾರ್ಗದಿಂದ ಹಣ ಪಡೆದು, ಒಳ್ಳೆಯ ಕಾರ್ಯಕ್ಕೆ ಹಣವನ್ನು ವ್ಯಯಿಸಿ. ಚಾಣಕ್ಯರು ಕರ್ಮದಲ್ಲಿ ನಂಬಿಕೆ ಇಟ್ಟವರು. ಹಾಗಾಗಿ ನಾವು ಏನು ಮಾಡುತ್ತೇವೋ, ಅದನ್ನೇ ಪಡೆಯುತ್ತೇವೆ ಎಂದಿದ್ದಾರೆ ಕೌಟಿಲ್ಯರು. ನಾವು ಒಳ್ಳೆಯ ಮಾರ್ಗದಿಂದ ಹಣ ಗಳಿಸಿ, ಅದನ್ನು ದಾನ ಧರ್ಮ, ಪೂಜಾ ಕಾರ್ಯ, ಸಹಾಯ ಅಥವಾ ಯಾವುದೇ ಉತ್ತಮ ಕಾರ್ಯಗಳಿಗೆ ಬಳಸಿದರೆ, ನಮ್ಮಲ್ಲಿರುವ ಹಣ ಹೆಚ್ಚಾಗುತ್ತದೆ. ಏಕೆಂದರೆ, ಈ ಕಾರ್ಯಗಳಲ್ಲಿ ಸಕಾರಾತ್ಮಕ ಯೋಚನೆ ಇರುತ್ತದೆ. ಇದರಿಂದ ಸಕಾರಾತ್ಮಕತೆ ಹೆಚ್ಚಾಗುತ್ತದೆ.
ಎರಡನೇಯದಾಗಿ ನಾವು ಕಠಿಣ ಪರಿಶ್ರಮದಿಂದ ದುಡಿದಾಗಲಷ್ಟೇ, ಆ ಹಣದಿಂದ ನಮ್ಮ ಅಭಿವೃದ್ಧಿಯಾಗುತ್ತದೆ. ಪರಿಶ್ರಮವಿಲ್ಲದೇ, ಕುಳಿತಲ್ಲೇ ಬರುವ ದುಡ್ಡು, ಸದಾ ಬೇರೆಯವರ ಪಾಲಾಗುತ್ತದೆ. ಅಥವಾ ಅನಾರೋಗ್ಯಕ್ಕೀಡಾಗಿ, ಆಸ್ಪತ್ರೆ ಪಾಲಾಗುತ್ತದೆ. ಉದಾಹರಣೆಗೆ, ಕೆಲವು ಮಧ್ಯವರ್ತಿಗಳು ಏನೂ ಕೆಲಸ ಮಾಡದೇ, ಕೂತಲೇ ಹಣ ಪಡೆಯುತ್ತಾರೆ. ಅಂಥ ಹಣ ಪರಿಶ್ರಮವಿರದೇ ಬರುತ್ತದೆ. ಅಂಥ ದುಡ್ಡಿನಿಂದ ಅಭಿವೃದ್ಧಿಯೂ ಆಗುವುದಿಲ್ಲ.
ಮೂರನೇಯದಾಗಿ ಶ್ರೀಮಂತರಾಗಲು ಕಠಿಣ ಪರಿಶ್ರಮದ ಜೊತೆ ಬುದ್ಧಿವಂತಿಕೆಯೂ ಬೇಕು. ಇವೆರಡೂ ಕೂಡಿದಾಗ, ಮನುಷ್ಯ ಬೇಗ ಶ್ರೀಮಂತನಾಗುತ್ತಾನೆ. ಜೊತೆಗೆ ಶ್ರೀಮಂತನಾಗುತ್ತಿದ್ದೇನೆ ಎಂಬ ಅಹಂ ಬಿಡಬೇಕು. ಯಾವಾಗ ಮನುಷ್ಯನಿಗೆ ಅಹಂಕಾರ ಬರುತ್ತದೆಯೋ, ಆವಾಗ ಅವನ ಅಧಪತನ ಶುರು ಎಂದರ್ಥ. ಈ ರೀತಿಯಾಗಿ ನಿಯತ್ತಿನಿಂದ, ಕಠಿಣ ಪರಿಶ್ರಮ, ಬುದ್ಧಿವಂತಿಕೆ, ಅಹಂ ಇಲ್ಲದೇ, ಶ್ರೀಮಂತರಾದರೆ, ಸಮಾಜದಲ್ಲಿ ಗೌರವ, ಸುಖ, ಶಾಂತಿ, ನೆಮ್ಮದಿ ನಿಮ್ಮದಾಗುತ್ತದೆ.