ಹೈದರಾಬಾದ್ : ಭಾರತದಲ್ಲಿ ಸಲಿಂಗಕಾಮವನ್ನು ಕಾನೂನುಬದ್ಧಗೊಳಿಸಿ, ಸುಪ್ರೀಂಕೋರ್ಟ್ ಆದೇಶ ನೀಡಿ ಮೂರು ವರ್ಷಗಳೇ ಕಳೆದಿವೆ. ಸಾಂಪ್ರದಾಯಿಕ ದೇಶ ಭಾರತದಲ್ಲಿ ಸಲಿಂಗ ಕಾಮದ ಬಗ್ಗೆ ಮೊದಲಿನಿಂದಲೂ ವಿರೋಧವಿತ್ತು. ಆದರೆ ಅದನ್ನು ಸುಪ್ರೀಂಕೋರ್ಟ್ ಕಾನೂನು ಬದ್ಧಗೊಳಿಸಿದೆ. ಸಲಿಂಗಕಾಮ ಅಪರಾಧವಲ್ಲ ಎಂದು ಅಂದು ಕೋರ್ಟ್ ತೀರ್ಪು ನೀಡಿದ್ದರೂ, ಅದನ್ನು ಒಪ್ಪುವ ಮನಸುಗಳು ಇಲ್ಲಿ ತುಂಬ ಕಡಿಮೆ ಇವೆ. ಯಾಕೆಂದರೆ ಭಾರತದಲ್ಲಿ ಸಲಿಂಗಿಗಳ ವಿವಾಹಕ್ಕೆ ಇನ್ನೂ ಸರ್ಕಾರದ ಅಧಿಕೃತ ಮುದ್ರೆ ಸಿಕ್ಕಿಲ್ಲ. ಹಾಗಿದ್ದಾಗ್ಯೂ..ಅಲ್ಲೊಂದು-ಇಲ್ಲೊಂದು ಸಲಿಂಗಿ ಜೋಡಿ ಮದುವೆಯಾಗುತ್ತಿರುವ ಪ್ರಕರಣಗಳೂ ಕಂಡುಬರುತ್ತಿವೆ.
ಇದೀಗ ಹೈದರಾಬಾದ್ನಲ್ಲಿ ನಡೆದ ಸಲಿಂಗಿಗಳ ಮದುವೆ. ಇಬ್ಬರು ಪುರುಷರು ವಿವಾಹವಾಗಿದ್ದು, ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದಾರೆ ಅಂದಹಾಗೆ ಈ ಮದುವೆ ನಡೆದದ್ದು ಹೈದರಾಬಾದ್ನ ಹೊರವಲಯದಲ್ಲಿರುವ ಒಂದು ರೆಸಾರ್ಟ್ನಲ್ಲಿ. ಶನಿವಾರ ತೀರ ಖಾಸಗಿಯಾಗಿ ಸಮಾರಂಭ ನಡೆದಿದ್ದು, ಈಗ ಬೆಳಕಿಗೆ ಬಂದಿದೆ. ಹೀಗೆ ವಿವಾಹವಾದವರು ಸುಪ್ರಿಯೋ ಚಕ್ರಬರ್ತಿ (31) ಮತ್ತು ಅಭಯ್ ಡಾಂಗ್(34). ಇವರಿಬ್ಬರೂ ಉಂಗುರವನ್ನು ಬದಲಿಸಿಕೊಂಡಿದ್ದಾರೆ. ಇವರಲ್ಲಿ ಸುಪ್ರಿಯೋ ಚಕ್ರಬರ್ತಿ ಪಶ್ಚಿಮಬಂಗಾಳದವರಾಗಿದ್ದು, ಅಭಯ್ ಪಂಜಾಬ್ನವರು. ಹೀಗಾಗಿ ಬಂಗಾಳಿ ಮತ್ತು ಪಂಜಾಬಿ ಎರಡೂ ಸಂಪ್ರದಾಯದಲ್ಲಿ ವಿವಾಹವಾಗಿದೆ. ಸುಪ್ರಿಯೋ ಚಕ್ರಬರ್ತಿ ಕೋಲ್ಕತ್ತದ ಪ್ರಮುಖ ಹೋಟೆಲ್ ಮ್ಯಾನೇಜ್ಮೆಂಟ್ ಸಂಸ್ಥೆಯೊಂದರಲ್ಲಿ ಹಿರಿಯ ಉಪನ್ಯಾಸಕ. ಹಾಗೇ, ಅಭಯ್ ದೆಹಲಿಯ ಎಂಎನ್ಸಿ ಕಂಪನಿಯೊಂದರ ಉದ್ಯೋಗಿ. ಹೈದರಾಬಾದ್ನಲ್ಲಿ ಸೋಫಿಯಾ ಡೇವಿಡ್ ಎಂಬ ತೃತೀಯಲಿಂಗಿಯೊಬ್ಬರು ಮದುವೆ ಮಾಡಿಸಿದ್ದಾರೆ. ಇವರಿಬ್ಬರೂ ತಮ್ಮ ಕೈಗೆಲ್ಲ ಮೆಹೆಂದಿ ಹಾಕಿಕೊಂಡ ಫೋಟೋಗಳು ವೈರಲ್ ಆಗಿವೆ. ಮದುವೆಗೆ ಅತಿಥಿಯಾಗಿ ಹೋಗಿದ್ದ ಹಿರಿಯ ಪತ್ರಕರ್ತರೊಬ್ಬರು ಮಾತನಾಡಿ, ಇವತ್ತೊಂದು ವಿಶೇಷ ಮದುವೆಗೆ ಸಾಕ್ಷಿಯಾಗಿದ್ದೆ. ಈ ವಿವಾಹಕ್ಕೆ ಇಬ್ಬರೂ ಪುರುಷರ ಕುಟುಂಬದವರು, ಸ್ನೇಹಿತರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಈ ಮದುವೆ ನೋಡಿದ ಬಳಿಕ ಭಾರತ ನಿಧಾನವಾಗಿ ಬದಲಾಗುತ್ತಿದೆ ಎಂದು ನನಗೆ ಅನ್ನಿಸಿತು ಎಂದು ಹೇಳಿದ್ದಾರೆ.