Monday, June 16, 2025

Latest Posts

Movie News: ವಿವಾದಕ್ಕೆ ಕಮಲ್ ಹಾಸನ್ ಲೆಕ್ಚರ್? ಫಿಲ್ಮ್ ಚೇಂಬರ್​ಗೆ ಬರೆದಿರೋ ಲೆಟರ್​ನಲ್ಲಿ ಏನಿದೆ..?

- Advertisement -

Movie News: ಕನ್ನಡ ಭಾಷೆಯ ಬಗ್ಗೆ ತಮಿಳು ನಟ ಕಮಲ್ ಹಾಸನ್ ನೀಡಿರುವ ಹೇಳಿಕೆಯ ವಿವಾದ ಇನ್ನು ತಣ್ಣಗಾಗಿಲ್ಲ. ಕಮಲ್ ನಟನೆಯ ಥಗ್ ಲೈಫ್ ಚಲನಚಿತ್ರದ ಬ್ಯಾನ್​ಗೆ ರಾಜ್ಯದಲ್ಲಿ ಕನ್ನಡಪರ ಸಂಘಟನೆಗಳು ಮುಂದಾಗಿವೆ. ಈ ಕೂಡಲೇ ಕನ್ನಡಿಗರ ಕ್ಷಮೆಯಾಚಿಸುವಂತೆ ಚಲನಚಿತ್ರ ವಾಣಿಜ್ಯ ಮಂಡಳಿ ಈಗಾಗಲೇ ಸೂಚನೆ ನೀಡಿದೆ. ಈ ನಡುವೆ ನಾನು ಕ್ಷಮೆ ಕೇಳುವುದಿಲ್ಲ ಎಂದು ಕಮಲ್ ವಿತಂಡವಾದ ಮುಂದುವರೆಸಿರುವುದು ವಿವಾದದ ಸ್ವರೂಪ ಇನ್ನಷ್ಟು ಕಾವು ಪಡೆದುಕೊಳ್ಳಲು ಕಾರಣವಾಗಿದೆ. ಈ ಎಲ್ಲ ಬೆಳವಣಿಗೆಗಳ ನಡುವೆಯೇ ತಮಿಳ್ ಹಾಸನ್ ವಾಣಿಜ್ಯ ಮಂಡಳಿಗೆ ಪತ್ರ ಬರೆದು ಕ್ಷಮೆ ಕೇಳುವ ಬದಲು ಲೆಕ್ಚರ್ ಮಾಡಿರುವುದು ಕನ್ನಡಿಗರ ಆಕ್ರೋಶ ಹೆಚ್ಚಾಗುವಂತೆ ಮಾಡಿದೆ.

ಇತ್ತೀಚೆಗೆ ಕಮಲ್ ಹಾಸನ್ ಅವರಿಗೆ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ನರಸಿಂಹಲು ಪತ್ರ ಬರೆದಿದ್ದು, ನಿಮ್ಮ ಹೇಳಿಕೆಯಿಂದ ಕನ್ನಡಿಗರ ಮನಸ್ಸಿಗೆ ನೋವಾಗಿದೆ. ನೀವು ಕ್ಷಮೆ ಕೇಳಬೇಕು ಎಂದು ಕೇಳಿದ್ದರು. ಕರ್ನಾಟಕದಲ್ಲಿ ‘ಥಗ್ ಲೈಫ್’ ಸಿನಿಮಾ ಬಿಡುಗಡೆಗೆ ಅಡ್ಡಿ ಆಗುವ ಬಗ್ಗೆ ತಿಳಿಸಿದ್ದರು. ಇದೀಗ ಅದಕ್ಕೆ ಕಮಲ್ ಪ್ರತಿಕ್ರಿಯಿಸಿ ವಾಣಿಜ್ಯ ಮಂಡಳಿ ಅಧ್ಯಕ್ಷರಿಗೆ ಸುದೀರ್ಘ ಪತ್ರ ಬರೆದು ಕ್ಷಮೆಯ ಬಗ್ಗೆ ಸೊಲ್ಲೇ ಎತ್ತದೆ ಮೊಂಡುತನ ತೋರಿದ್ದಾರೆ.

ಪ್ರೀತಿಯಿಂದ ಹೇಳಲಾದ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ..

30/05/2025 ರಂದು ಬರೆದ ನಿಮ್ಮ ಪತ್ರ ತಲುಪಿದೆ. ಕರ್ನಾಟಕದ ಜನರ ಮೇಲಿನ ಆಳವಾದ ಗೌರವದಿಂದ, ನಾನು ಪ್ರಾಮಾಣಿಕವಾಗಿ ಈ ವಿಚಾರವನ್ನು ಹೇಳುತ್ತಿದ್ದೇನೆ ಎಂದು ಕಮಲ್ ಹಾಸನ್ ಪತ್ರ ಆರಂಭಿಸಿದ್ದಾರೆ. “ಥಗ್ ಲೈಫ್ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ದಂತಕಥೆ ಡಾ. ರಾಜ್‌ಕುಮಾರ್ ಅವರ ಕುಟುಂಬದ ಬಗ್ಗೆ, ವಿಶೇಷವಾಗಿ ಶಿವ ರಾಜ್‌ಕುಮಾರ್ ಅವರ ಬಗ್ಗೆ ನಿಜವಾದ ಪ್ರೀತಿಯಿಂದ ಹೇಳಲಾದ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಅದನ್ನು ಬೇರೆ ರೀತಿ ಭಾವಿಸಿರುವುದು ನನಗೆ ನೋವುಂಟು ಮಾಡಿದೆ. ನಾವೆಲ್ಲರೂ ಒಂದೇ ಮತ್ತು ಒಂದೇ ಕುಟುಂಬದವರು ಎನ್ನುವುದು ನನ್ನ ಮಾತಾಗಿತ್ತು. ಕನ್ನಡವನ್ನು ಯಾವುದೇ ರೀತಿಯಲ್ಲಿ ಕಮ್ಮಿ ಎನ್ನುವುದು ನನ್ನ ಉದ್ದೇಶವಲ್ಲ” ಎಂದು ಕಮಲ್ ಹೇಳಿದ್ದಾರೆ.

ಕನ್ನಡವು ನಾನು ಬಹಳ ಹಿಂದಿನಿಂದಲೂ ಮೆಚ್ಚುವ ಹೆಮ್ಮೆಯ ಸಾಹಿತ್ಯ, ಸಾಂಸ್ಕೃತಿಕ ಸಂಪ್ರದಾಯ ಹೊಂದಿದೆ

ಕನ್ನಡ ಭಾಷೆಯ ಶ್ರೀಮಂತ ಪರಂಪರೆಯ ಬಗ್ಗೆ ಯಾವುದೇ ವಿವಾದ ಅಥವಾ ಚರ್ಚೆ ಇಲ್ಲ. ತಮಿಳಿನಂತೆಯೇ, ಕನ್ನಡವು ನಾನು ಬಹಳ ಹಿಂದಿನಿಂದಲೂ ಮೆಚ್ಚುವ ಹೆಮ್ಮೆಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಪ್ರದಾಯವನ್ನು ಹೊಂದಿದೆ. ನನ್ನ ವೃತ್ತಿ ಜೀವನದುದ್ದಕ್ಕೂ, ಕನ್ನಡ ಮಾತನಾಡುವ ಸಮುದಾಯವು ನನಗೆ ನೀಡಿದ ಗೌರವ ಮತ್ತು ಪ್ರೀತಿಯನ್ನು ನಾನು ಮರೆಯುವುದಿಲ್ಲ. ಭಾಷೆಯ ಮೇಲಿನ ನನ್ನ ಪ್ರೀತಿ ನಿಜವಾದದ್ದು ಮತ್ತು ಕನ್ನಡಿಗರು ತಮ್ಮ ಮಾತೃಭಾಷೆಯ ಬಗ್ಗೆ ಹೊಂದಿರುವ ಪ್ರೀತಿಗೆ ನನಗೆ ಅಪಾರ ಗೌರವವಿದೆ ಎಂದು ನಾನು ಇದನ್ನು ಸ್ಪಷ್ಟ ಆತ್ಮಸಾಕ್ಷಿ ಮತ್ತು ದೃಢನಿಶ್ಚಯದಿಂದ ಹೇಳುತ್ತೇನೆ ಎಂದಿದ್ದಾರೆ.

ಯಾವುದೇ ಒಂದು ಭಾಷೆಯ ಪ್ರಾಬಲ್ಯವನ್ನು ವಿರೋಧಿಸುತ್ತೇನೆ..

ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಈ ನೆಲದ ಎಲ್ಲಾ ಭಾಷೆಗಳೊಂದಿಗಿನ ನನ್ನ ಬಾಂಧವ್ಯವು ಶಾಶ್ವತ. ನಾನು ಯಾವಾಗಲೂ ಎಲ್ಲಾ ಭಾರತೀಯ ಭಾಷೆಗಳ ಸಮಾನ ಘನತೆಯ ಪರವಾಗಿ ನಿಲ್ಲುತ್ತೇನೆ ಮತ್ತು ಒಂದು ಭಾಷೆಯ ಪ್ರಾಬಲ್ಯವನ್ನು ವಿರೋಧಿಸುತ್ತೇನೆ, ಏಕೆಂದರೆ ಅಂತಹ ಅಸಮತೋಲನವು ಭಾರತದ ಒಕ್ಕೂಟದ ಭಾಷಾ ರಚನೆಯನ್ನು ಹಾಳು ಮಾಡುತ್ತದೆ. ನನ್ನ ಹಿರಿಯರು ನನಗೆ ಕಲಿಸಿದ ಈ ಪ್ರೀತಿ ಮತ್ತು ಬಾಂಧವ್ಯವನ್ನೇ ನಾನು ಹಂಚಿಕೊಳ್ಳಲು ಬಯಸಿದ್ದೆ ಎಂದು ಸಮಜಾಯಿಸಿ ನೀಡಿದ್ದಾರೆ.

ನನ್ನಿಂದ ಶಿವಣ್ಣ ಮುಜುಗರ ಅನುಭವಿಸಬೇಕಾಗಿ ಬಂತು..

ಈ ಪ್ರೀತಿ ಮತ್ತು ಬಾಂಧವ್ಯದಿಂದಲೇ ಶಿವಣ್ಣ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಹಾಜರಾಗಿದ್ದರು. ಇದರಿಂದಾಗಿ ಶಿವಣ್ಣ ಇಷ್ಟೊಂದು ಮುಜುಗರ ಅನುಭವಿಸಬೇಕಾಯಿತು ಎಂದು ನನಗೆ ನಿಜವಾಗಿಯೂ ವಿಷಾದವಿದೆ. ನಾನು ಎಂದಿಗೂ ಸಾರ್ವಜನಿಕ ಅಶಾಂತಿ ಮತ್ತು ದ್ವೇಷಕ್ಕೆ ಯಾವುದೇ ಅವಕಾಶ ನೀಡಿಲ್ಲ ಮತ್ತು ಎಂದಿಗೂ ಬಯಸುವುದಿಲ್ಲ ಎಂದು ಕಮಲ್ ಹಾಸನ್ ಪತ್ರದಲ್ಲಿ ತಿಳಿಸಿದ್ದಾರೆ. ಆದರೆ ತಮ್ಮ ಹೇಳಿಕೆ ವಾಪಸ್ ಪಡೆಯುವುದು ಅಥವಾ ಕ್ಷಮೆ ಕೇಳುವ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ. ಈಗಾಗಲೇ ಕಮಲ್ ಹೈಕೋರ್ಟ್ ಮೆಟ್ಟೆಲೇರಿದ್ದಾರೆ. ಅಲ್ಲಿ ಕೂಡ ಹಿನ್ನಡೆಯಾಗಿದ್ದು, ಇಷ್ಟೊಂದು ದೀರ್ಘವಾದ ಪತ್ರ ಬರೆದರೂ ಕೂಡ ಕ್ಷಮೆಯ ಬಗ್ಗೆ ಯಾವುದೇ ಉಲ್ಲೇಖಿಸದಿರುವುದು ಹೋರಾಟಗಾರರನ್ನು ಹಾಗೂ ಕನ್ನಡಿಗರನ್ನು ಇನ್ನಷ್ಟು ಕೆರಳುವಂತೆ ಮಾಡಿದೆ.

- Advertisement -

Latest Posts

Don't Miss