ಕಷ್ಟ ಹೇಳಿ ಕೇಳಿ ಬರುವುದಿಲ್ಲ. ಯಾಕಂದ್ರೆ ಸಮಯ ಒಂದೇ ಇರುವುದಿಲ್ಲ. ಅಚಾನಕ್ಕಾಗಿ ಹೇಗೆ ಲಕ್ ಖುಲಾಯಿಸುತ್ತದೆಯೋ, ಅದೇ ರೀತಿ, ಸಡನ್ ಆಗಿ ಕಷ್ಟವೂ ಬರುತ್ತದೆ. ಎಷ್ಟೇ ಶ್ರೀಮಂತನಾಗಿದ್ದರೂ, ಎಷ್ಟೇ ಶಕ್ತಿಶಾಲಿ ವ್ಯಕ್ತಿ ಇದ್ದರೂ, ಪ್ರತಿಯೊಬ್ಬರಿಗೂ ಕಷ್ಟ ಬಂದೇ ಬರುತ್ತದೆ. ಹಾಗಾಗಿ ಕಷ್ಟ ಬಂದಾಗ ಯಾವ ಮಾತನ್ನು ನೆನಪಿಡಬೇಕು ಅನ್ನೋದನ್ನ ಕಥೆಯ ಮೂಲಕ ಕೇಳೋಣ ಬನ್ನಿ..
ಒಂದೂರಲ್ಲಿ ಓರ್ವ ಶ್ರೀಮಂತ ಉದ್ಯಮಿ ಇದ್ದ. ಅವನು ಪರೋಪಕಾರಿಯೂ ಆಗಿದ್ದ. ಕಷ್ಟದಲ್ಲಿರುವವರಿಗೆ ತನ್ನ ಕೈಲಾದಷ್ಟು ಸಹಾಯ ಮಾಡುತ್ತಿದ್ದ. ಅಲ್ಲದೇ, ದೇವರಲ್ಲಿಯೂ ಭಕ್ತಿ ಮಾಡುತ್ತಿದ್ದ. ಪ್ರವಚನ ಕೇಳುತ್ತಿದ್ದ. ಒಮ್ಮೆ ಉದ್ಯಮಿಯ ಮನೆಗೆ ಓರ್ವ ಫಕೀರ ಬಂದ. ನಾನು ಇದೊಂದು ರಾತ್ರಿ ಇಲ್ಲಿ ಉಳಿದುಕೊಳ್ಳಬಹುದಾ ಎಂದು ಕೇಳಿದ. ಅದಕ್ಕೆ ಉದ್ಯಮಿ ಒಪ್ಪಿಗೆ ಸೂಚಿಸಿದ. ಅಲ್ಲದೇ ಫಕೀರನಿಗೆ ಭೂರಿ ಭೋಜನ ಕೊಟ್ಟು, ನಿದ್ದೆ ಮಾಡಲು ಮೆತ್ತಗಿನ ಹಾಸಿಗೆಯ ವ್ಯವಸ್ಥೆ ಮಾಡಿಕೊಟ್ಟ.
ನಿಮ್ಮ ಜೀವನದ ಕಠಿಣ ಸಮಯದಲ್ಲಿ ಈ ಕಥೆಯನ್ನ ಸ್ಮರಿಸಿ..
ಫಕೀರನಿಗೆ ಉದ್ಯಮಿಯ ಕಾಳಜಿ ನೋಡಿ ಭಾರೀ ಖುಷಿಯಾಯಿತು. ಆಗ ಅವನು ಉದ್ಯಮಿಗೆ ಹಾರೈಸಿದ. ನೀನು ಇನ್ನೂ ಶ್ರೀಮಂತನಾಗು. ನಿನಗೆ ಜೀವನದ ಎಲ್ಲ ಸುಖಗಳೂ ಸಿಗಲಿ ಎಂದು ಹೇಳಿದ. ಅದಕ್ಕೆ ಉದ್ಯಮಿ ನಗುತ್ತ, ನನ್ನ ಜೀವನದಲ್ಲಿ ಏನು ನಡೆಯಬೇಕೋ ಅದೇ ನಡೆಯುತ್ತದೆ. ನಾನು ಹೇಗಿರಬೇಕೋ, ಹಾಗೆ ಇರುತ್ತೇನೆ ಎಂದು ಹೇಳುತ್ತಾರೆ. ಫಕೀರನಿಗೆ ಉದ್ಯಮಿಯ ಮಾತು ಅರ್ಥವಾಗಲಿಲ್ಲ. ಹಾಗಾಗಿ ಫಕೀರ ಸುಮ್ಮನೆ ಹೊರಡುತ್ತಾನೆ.
ಹತ್ತು ವರ್ಷದ ನಂತರ ಫಕೀರ ಮತ್ತದೇ ನಗರಕ್ಕೆ ಬರುತ್ತಾನೆ. ಆಗ ಆ ಉದ್ಯಮಿಯ ಸ್ಥಿತಿ ಬದಲಾಗಿರುತ್ತದೆ. ಅವನು ತನ್ನೆಲ್ಲ ಶ್ರೀಮಂತಿಕೆ ಕಳೆದುಕೊಂಡು, ಇನ್ನೊಬ್ಬರ ಮನೆಯಲ್ಲಿ ಜೀತದಾಳಾಗಿ ದುಡಿಯುತ್ತಿರುತ್ತಾನೆ. ಅವನಿರುವ ಗುಡಿಸಿಲಿಗೆ, ಫಕೀರ ಹೋದಾಗ, ಅವನಿಗೆ ತಿನ್ನಲು ಒಣಗಿದ ರೊಟ್ಟಿ ಮತ್ತು ಮಲಗಲು ತನ್ನ ಬಳೀ ಇದ್ದ ಒಂದೇ ಒಂದು ಹರಕಲು ಚಾಪೆ ಕೊಡುತ್ತಾನೆ. ಫಕೀರ, ಉದ್ಯಮಿ ಈ ಪರಿಸ್ಥಿತಿಗೆ ಬರಲು ಕಾರಣವೇನು ಎಂದು ಕೇಳುತ್ತಾನೆ.
ಆಗ ಆ ಉದ್ಯಮಿ, ನನ್ನ ವ್ಯಾಪಾರದಲ್ಲಿ ನಷ್ಟವಾಯಿತು. ಅದಕ್ಕೆ ನಾನು ಬಡವನಾದೆ ಎಂದು ನಗು ನಗುತ್ತಲೇ ಮಾತನಾಡುತ್ತಾನೆ. ಫಕೀರನಿಗೆ ಇದನ್ನು ಕಂಡು ಆಶ್ಚರ್ಯವಾಗುತ್ತದೆ. ಇವನು ಶ್ರೀಮಂತಿಕೆಯಲ್ಲೂ ನಗುತ್ತಿದ್ದ. ಬಡತನದಲ್ಲೂ ನಗುತ್ತಿದ್ದಾನೆಂದು ಆಶ್ಚರ್ಯಪಟ್ಟ ಫಕೀರ ಆ ಗುಡಿಸಲಲ್ಲೇ ನಿದ್ದೆ ಮಾಡುತ್ತಾನೆ.
ಎಲ್ಲರೊಂದಿಗಿದ್ದು ಏಕಾಂಗಿಯಾಗಿ ಇರೋದನ್ನ ಕಲಿಯಿರಿ..
ಈ ಘಟನೆ ನಡೆದು ಸುಮಾರು ವರ್ಷಗಳ ಬಳಿಕ ಫಕೀರ ಮತ್ತದೇ ನಗರಕ್ಕೆ ಬರುತ್ತಾನೆ. ಆಗ ಆ ಉದ್ಯಮಿ ದೊಡ್ಡ ಜಮೀನ್ದಾರನಾಗಿರುತ್ತಾನೆ. ಯಾಕಂದ್ರೆ ಅವನು ಕೆಲಸ ಮಾಡುತ್ತಿದ್ದ ಜಮೀನ್ದಾರನಿಗೆ ಸಂತಾನವಿರಲಿಲ್ಲ. ಉದ್ಯಮಿಯ ಗುಣ ಉತ್ತಮವಿರುವುದನ್ನ ನೋಡಿ, ತನ್ನೆಲ್ಲ ಆಸ್ತಿಯನ್ನು ಅವನು ಇವನ ಹೆಸರಿಗೆ ಬರೆದನಂತೆ. ಹಾಗಾಗಿ ಉದ್ಯಮಿ ಈಗ ಮತ್ತೆ ಶ್ರೀಮಮಂತನಾಗಿದ್ದ.
ಅದನ್ನ ನೋಡಿದ ಫಕೀರ ಖುಷಿಯಾಗುತ್ತಾನೆ. ನೀನು ಮತ್ತೆ ಶ್ರೀಮಂತನಾಗಿದ್ದು ಕಂಡು ನನಗೆ ತುಂಬಾ ಖುಷಿಯಾಯಿತು ಎಂದು ಹೇಳುತ್ತಾನೆ. ಅದಕ್ಕೆ ಶ್ರೀಮಂತ ಹೇಳುತ್ತಾನೆ. ನಾನು ಮೊದಲು ಬಡವನಿದ್ದೆ, ಉದ್ಯಮ ಮಾಡಿ ಶ್ರೀಮಂತನಾದೆ. ನಷ್ಟ ಅನುಭವಿಸಿದ ಬಡವನಾದೆ. ಜಮೀನ್ದಾರರ ಕೃಪೆಯಿಂದ ಮತ್ತೆ ಶ್ರೀಮಂತನಾಗಿದ್ದೇನೆ. ಈ ವೇಳೆ ನಾನು ಕಲಿತ ಪಾಠವೇನೆಂದರೆ, ನಾವು ಸಾಯುವವರೆಗೂ ನಮ್ಮ ಮನಸ್ಸು, ನಮ್ಮ ಭಾವನೆ ಮತ್ತು ನಮ್ಮ ಆತ್ಮವಷ್ಟೇ ಸರಿಯಾಗಿ ಇರುತ್ತದೆ. ಉಳಿದಿದ್ದೆಲ್ಲವೂ ನಮ್ಮದಾಗಿರುವುದಿಲ್ಲ. ಅದು ಯಾವಾಗ ಬೇಕಾದ್ರೂ ಬದಲಾಗಬಹುದು. ಹಾಗಾಗಿ ಕಷ್ಟ ಬಂದಾಗ, ನಾವು ಅನುಭವಿಸಲು ರೆಡಿಯಾಗಿರಬೇಕು. ಮತ್ತು ಸುಖ ಬಂದಾಗ ಅನುಭವಿಸಿಬಿಡಬೇಕು. ಎರಡೂ ಸಮಯದಲ್ಲೂ ಬೇಸರ ಪಡದೇ, ನೆಮ್ಮದಿ ಕಂಡುಕೊಳ್ಳಬೇಕು ಎನ್ನುತ್ತಾನೆ ಉದ್ಯಮಿ.