Monday, December 23, 2024

Latest Posts

ಈ ಹೊಸ ತಿಂಡಿಯನ್ನ ಒಮ್ಮೆ ಟ್ರೈ ಮಾಡಿದ್ರೆ, ನೀವು ಇದರ ಫ್ಯಾನ್ ಆಗ್ತೀರಾ..

- Advertisement -

ಉತ್ತರ ಭಾರತದ ತಿಂಡಿಯಾದ ದಾಬೇಲಿ ಕರ್ನಾಟಕದಲ್ಲೂ ಸಿಗುತ್ತದೆ. ಆದ್ರೆ ಇದು ಅಪರೂಪಕ್ಕೆ ಮಾರಾಟವಾಗುವ ಖಾದ್ಯ. ಆದ್ರೆ ನಿಮಗೆ ಈ ಖಾದ್ಯವನ್ನ ತಿನ್ನಬೇಕು ಅಂತಾ ಅನ್ನಿಸಿದ್ರೆ, ನೀವು ಬನ್ ತರಿಸಿ, ಇದನ್ನ ಮನೆಯಲ್ಲೇ ತಯಾರಿಸಿ ತಿನ್ನಬಹುದು. ಹಾಗಾಗಿ ಇಂದು ನಾವು ದಾಬೆಲಿಯನ್ನ ಮನೆಯಲ್ಲೇ ತಯಾರಿಸೋದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ.

ಬೇಕಾಗುವ ಸಾಮಗ್ರಿ: ಬನ್, ಬೇಯಿಸಿ ಮ್ಯಾಶ್ ಮಾಡಿದ 3 ಆಲೂಗಡ್ಡೆ, ಎರಡು ಈರುಳ್ಳಿ,  ಒಂದು ಕಪ್ ಸೇವ್, ಅರ್ಧ ಕಪ್ ದಾಳಿಂಬೆ, ಅರ್ಧ ಕಪ್ ಕಾಂಗ್ರೆಸ್ ಕಡಲೆ, ನಾಲ್ಕು ಸ್ಪೂನ್ ಕೊಬ್ಬರಿ ತುರಿ, ಕೊಂಚ ಸಣ್ಣಗೆ ಕತ್ತರಿಸಿದ ಕೊತ್ತೊಂಬರಿ ಸೊಪ್ಪು, ಬೆಲ್ಲ ಬಳಸಿ ಮಾಡಿದ ಹುಣಸೆ ಹಣ್ಣಿನ ಚಟ್ನಿ 3 ಸ್ಪೂನ್, 3 ಒಣ ಮೆಣಸು, 6 ಎಸಳು ಬೆಳ್ಳುಳ್ಳಿ, ಅರ್ಧ ಕಪ್ ಶೇಂಗಾಕಾಳು, 3 ಸ್ಪೂನ್ ನಿಂಬೆ ರಸ, 3 ಸ್ಪೂನ್ ಎಣ್ಣೆ,

ದಾಬೇಲಿ ಪುಡಿ ತಯಾರಿಸಲು: 1 ಸ್ಪೂನ್ ಎಳ್ಳು, 1 ಪಲಾವ್ ಎಲೆ, 1 ಸ್ಪೂನ್ ಕೊತ್ತೊಂಬರಿ ಕಾಳು, 5 ಲವಂಗ, ಅರ್ಧ ಸ್ಪೂನ್ ಜೀರಿಗೆ- ಸೋಂಪು- ಕಾಳುಮೆಣಸು, ಅರ್ಧ ಚಕ್ಕೆ, 3 ಒಣಮೆಣಸು, ಕಾಲು ಕಪ್ ಒಣ ಕೊಬ್ಬರಿ ತುರಿ.

ಮಾಡುವ ವಿಧಾನ: ಮೊದಲಿಗೆ ದಾಬೇಲಿ ಪುಡಿ ರೆಡಿ ಮಾಡಿಕೊಳ್ಳಿ. ಒಂದು ಪ್ಯಾನ್ ಇರಿಸಿ, ಅದಕ್ಕೆ 1 ಸ್ಪೂನ್ ಎಳ್ಳು, 1 ಪಲಾವ್ ಎಲೆ, 1 ಸ್ಪೂನ್ ಕೊತ್ತೊಂಬರಿ ಕಾಳು, 5 ಲವಂಗ, ಅರ್ಧ ಸ್ಪೂನ್ ಜೀರಿಗೆ- ಸೋಂಪು- ಕಾಳುಮೆಣಸು, ಅರ್ಧ ಚಕ್ಕೆ, 3 ಒಣಮೆಣಸು, ಕಾಲು ಕಪ್ ಒಣ ಕೊಬ್ಬರಿ ತುರಿ ಇವೆಲ್ಲವನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಇದು ತಣಿದ ಬಳಿಕ, ಇದನ್ನು ಮಿಕ್ಸಿ ಜಾರ್‌ಗೆ ಹಾಕಿ, ಚಿಟಿಕೆ ಅರಿಶಿನ ಅರ್ಧ ಚಮಚ ಚಾಟ್ ಮಸಾಲೆ, ಅರ್ಧ ಚಮಚ ಸಕ್ಕರೆ, ಚಿಟಿಕೆ ಉಪ್ಪಿನೊಂದಿಗೆ ಬ್ಲೆಂಡ್ ಮಾಡಿ, ಪುಡಿ ತಯಾರಿಸಿ.

ಈಗ ಮೆಣಸಿನಕಾಯಿ, ಬೆಳ್ಳುಳ್ಳಿ ಚಟ್ನಿ ತಯಾರಿಸಿ. ಒಂದು ಮಿಕ್ಸಿ ಜಾರ್‌ಗೆ ಮೂರು ಒಣ ಮೆಣಸು, 6 ಎಸಳು ಬೆಳ್ಳುಳ್ಳಿ, ಮೂರು ಸ್ಪೂನ್ ನಿಂಬೆರಸ, ನಾಲ್ಕು ಸ್ಪೂನ್ ಹುರಿದ ಶೇಂಗಾ, ಕೊಂಚ ನೀರು, ಉಪ್ಪು ಸೇರಿಸಿ, ಚಟ್ನಿ ತಯಾರಿಸಿಕೊಳ್ಳಿ.

ಈಗ ಗ್ಯಾಸ್ ಆನ್ ಮಾಡಿ, ಎಣ್ಣೆ ಹಾಕಿ ಕೊಂಚ ಬಿಸಿ ಮಾಡಿ. ಇದಕ್ಕೆ ಮ್ಯಾಶ್ ಮಾಡಿದ ಆಲೂಗಡ್ಡೆ, ಅರ್ಧ ಸ್ಪೂನ್ ಖಾರದಪುಡಿ, ಚಿಟಿಕೆ ಸಕ್ಕರೆ, ಉಪ್ಪು, 2 ಸ್ಪೂನ್ ಹುಣಸೆಹಣ್ಣಿನ ಚಟ್ನಿ, ಮತ್ತು 4 ಸ್ಪೂನ್ ದಾಬೇಲಿ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಸ್ವಲ್ಪ ನೀರು ಹಾಕಿ, 5 ನಿಮಿಷ ಬೇಯಿಸಿ. ಯಾವುದೇ ಕಾರಣಕ್ಕೂ ಹೆಚ್ಚು ನೀರು ಹಾಕಬೇಡಿ. ಕೊನೆಗೆ ಇದು ಬಟಾಟೆ ಬೋಂಡಾಕ್ಕೆ ಹೇಗೆ ಹದ ಬೇಕಾಗುತ್ತದೆ ಅಲಾ, ಆ ಹದಕ್ಕೆ ಇರಲಿ. ಈಗ ದಾಬೇಲಿ ಆಲೂ ಮಸಾಲಾ ರೆಡಿ..

ಈ ಮಸಾಲೆಯನ್ನು ಒಂದು ದೊಡ್ಡ ಬೌಲ್‌ಗೆ ಹಾಕಿ, ಸೆಟ್ ಮಾಡಿ. ಈಗ ಇದರ ಮೇಲೆ 4 ಸ್ಪೂನ್ ಕೊಬ್ಬರಿ ತುರಿ, ಕಾಲು ಕಪ್ ದಾಳಿಂಬೆ, ಕಾಲು ಕಪ್ ಕಾಂಗ್ರೆಸ್ ಕಡಲೆ, ಕೊತ್ತೊಂಬರಿ ಸೊಪ್ಪು, ಒಂದು ಸಣ್ಣಗೆ ಕತ್ತರಿಸಿದ ಈರುಳ್ಳಿಯನ್ನ ಈ ದಾಬೇಲಿ ಮಸಾಲಾ ಮೇಲೆ ಹರಡಿ. (ಉಳಿದ ಕಾಂಗ್ರೆಸ್ ಕಡಲೆ, ದಾಳಿಂಬೆ ಮತ್ತು ಈರುಳ್ಳಿ ಕೊನೆಗೆ ಬೇಕಾಗುತ್ತದೆ.)

ಇದಾದ ಬಳಿಕ ಬನ್ ಅರ್ಧ ಕತ್ತರಿಸಿ, ಎರಡು ಪಾರ್ಟ್ ಮಾಡಿ. ಈಗ ಇದಕ್ಕೆ ನಾವು ಆಗಲೇ ತಯಾರಿಸಿದ ಒಣಮೆಣಸು ಮತ್ತು ಬೆಳ್ಳುಳ್ಳಿ ಚಟ್ನಿಯನ್ನ ಸ್ಪ್ರೆಡ್ ಮಾಡಿ. ಇದರೊಂದಿಗೆ ಹುಣಸೆ ಚಟ್ನಿಯನ್ನು ಕೊಂಚ ಹರಡಿ. ಈಗ ಒಂದು ಸ್ಪೂನ್ ದಾಬೇಲಿ ಮಸಾಲೆ, ಕೊಂಚ ಈರುಳ್ಳಿ, ದಾಳಿಂಬೆ ಮತ್ತು ಕಾಂಗ್ರೆಸ್‌ ಕಡಲೆ ಹಾಕಿ, ಮತ್ತೆ ಅದರ ಮೇಲೆ ದಾಬೇಲಿ ಮಸಾಲೆ ಹಾಕಿ ಕವರ್ ಮಾಡಿ. ಈಗ ಇದು ಸ್ಯಾಂಡ್ ವಿಚ್‌ ರೀತಿ ಆಗುತ್ತದೆ. ಈಗ ದೇಸೆ ಕಾವಲಿಯನ್ನು ಕಾಯಿಸಿ, ಅದಕ್ಕೆ ಬೆಣ್ಣೆ ಅಥವಾ ಎಣ್ಣೆ ಹಾಕಿ ಬಿಸಿ ಮಾಡಿ, ಈ ಬನ್ನನ್ನು ಎರಡೂ ಸೈಡ್ ಬಿಸಿ ಮಾಡಿ. ಈಗ ಸೇವ್ನಿಂದ ಇದನ್ನ ಕವರ್ ಮಾಡಿದ್ರೆ, ದಾಬೇಲಿ ರೆಡಿ. ಉಳಿದ ಬನ್‌ಗಳಿಗೂ ಈ ರೀತಿ ಮಸಾಲೆ ತುಂಬಿಸಿ, ತವ್ವಾ ಫ್ರೈ ಮಾಡಿ ನಿಮ್ಮ ಮನೆ ಜನರಿಗೂ ಸವಿಯಲು ಕೊಡಿ.

- Advertisement -

Latest Posts

Don't Miss