Recipe: ಪಾಲಕ್‌ನಿಂದ ಸಾಮಾನ್ಯವಾಗಿ ಪಲ್ಯ, ಸಾರು, ದೋಸೆ, ಪಾಲಕ್ ಪನೀರ್‌ನಂಥ ತಿನಿಸು ಮಾಡುತ್ತಾರೆ. ಆದ್ರೆ ಇಂದು ನಾವು ಸ್ಪೆಶಲ್ ಡಿಶ್ ರೆಸಿಪಿ ಬಗ್ಗೆ ಹೇಳಲಿದ್ದೇವೆ. ಅದೇ ಪಾಲಕ್ ಕೋಫ್ತಾ. ಹಾಗಾದ್ರೆ ಪಾಲಕ್ ಕೋಫ್ತಾ ಮಾಡೋದು ಹೇಗೆ..? ಅದಕ್ಕೆ ಏನೇನು ಸಾಮಗ್ರಿ ಬೇಕು ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ಒಂದು ಕಪ್ ಪಾಲಕ್ ಮತ್ತು ಕ್ಯಾಬೇಜ್, ಎರಡು ಬ್ರೆಡ್, 2 ಹಸಿಮೆಣಸಿನಕಾಯಿ, ಕೊಂಚ ಸಣ್ಣಗೆ ಕೊಚ್ಚಿದ ಕೊತ್ತೊಂಬರಿ ಸೊಪ್ಪು, 2 ಸ್ಪೂನ್ ಕಾರ್ನ್ ಫ್ಲೋರ್, ಅರ್ಧ ಕಪ್ ಪನೀರ್ ತುರಿ, ಕಾಲು ಕಪ್ ತುರಿದ ಚೀಸ್, ಕರಿಯಲು ಎಣ್ಣೆ, ಎರಡು ಒಣಮೆಣಸು, ಚಿಟಿಕೆ ಜೀರಿಗೆ, ಅರ್ಧ ಕಪ್ ಬೆಳ್ಳುಳ್ಳಿ- ಈರುಳ್ಳಿ ಪೇಸ್ಟ್, ಅರ್ಧ ಕಪ್ ಟೊಮೆಟೋ ಪ್ಯೂರಿ, ಒಂದೊಂದು ಸ್ಪೂನ್, ಖಾರದ ಪುಡಿ, ಜೀರಿಗೆ ಪುಡಿ, ಧನಿಯಾಪುಡಿ, ಗರಂ ಮಸಾಲೆ ಪುಡಿ, ಕಾಲು ಕಪ್ ಫ್ರೆಶ್ ಕ್ರೀಮ್, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಮೊದಲು ಪಾಲಕ್ ಮತ್ತು ಕ್ಯಾಬೇಜ್ ಹಸಿ ವಾಸನೆ ಹೋಗುವವರೆಗೂ ಹುರಿದುಕೊಳ್ಳಿ. ಈ ಮಿಶ್ರಣ ತಣ್ಣಗಾಗಲು ಬಿಡಿ. ಎರಡು ಬ್ರೆಡ್ ತೆಗೆದುಕೊಂಡು ಅದಕ್ಕೆ ಎರಡು ಸ್ಪೂನ್ ಹಾಲು ಹಾಕಿ, ಬ್ರೆಡ್ ಸೋಕ್ ಮಾಡಿಕೊಳ್ಳಿ.
ಈಗ ಹುರಿದುಕೊಂಡ ಮಿಶ್ರಣಕ್ಕೆ ಹಸಿಮೆಣಸಿನಕಾಯಿ, ಕೊತ್ತೊಂಬರಿ ಸೊಪ್ಪು, 2 ಸ್ಪೂನ್ ಕಾರ್ನ್ ಫ್ಲೋರ್, ಪನೀರ್ ತುರಿ, ತುರಿದ ಚೀಸ್, ಉಪ್ಪು, ಮತ್ತು ನೆನೆಸಿಟ್ಟ ಬ್ರೆಡ್ಡನ್ನು ತುಂಡು ಮಾಡಿ ಸೇರಿಸಿ. ಇದನ್ನೆಲ್ಲ ಚೆನ್ನಾಗಿ ಮಿಕ್ಸ್ ಮಾಡಿ, ಉಂಡೆ ತಯಾರಿಸಿ. ಇದನ್ನು ಕಾದ ಎಣ್ಣೆಯಲ್ಲಿ ಕರಿಯಿರಿ. ಈಗ ಕೋಫ್ತಾ ರೆಡಿ.
ಇದಕ್ಕೆ ಗ್ರೇವಿ ತಯಾರಿಸಬೇಕು. ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎಣ್ಣೆ ಹಾಕಿ, ಒಣಮೆಣಸು, ಜೀರಿಗೆ, ಈರುಳ್ಳಿ, ಬೆಳ್ಳುಳ್ಳಿ ಪೇಸ್ಟ್, ಕಾಜು ಪೇಸ್ಟ್, ಟೊಮೆಟೋ ಪ್ಯೂರಿ ಹಾಕಿ ಮಿಕ್ಸ್ ಮಾಡಿ. ಇದಕ್ಕೆ ಸ್ವಲ್ಪ ನೀರು ಹಾಕಿ, ಬಳಿಕ ಧನಿಯಾ, ಜೀರಿಗೆ ಪುಡಿ, ಖಾರದ ಪುಡಿ, ಗರಂ ಮಸಾಲೆ, ಉಪ್ಪು, ಚಿಟಿಕೆ ಸಕ್ಕರೆ ಹಾಕಿ. ಈಗ ಇದನ್ನೆಲ್ಲ ಚೆನ್ನಾಗಿ ಮಿಕ್ಸ್ ಮಾಡಿ. ಬೇಕಾದರೆ ನೀರು ಸೇರಿಸಿ, 5 ನಿಮಿಷ ಮಂದ ಉರಿಯಲ್ಲಿ ಈ ಗ್ರೇವಿಯನ್ನು ಬೇಯಿಸಿ. ಬಳಿಕ ಕೊತ್ತೊಂಬರಿ ಸೊಪ್ಪು, ಫ್ರೆಶ್ ಕ್ರೀಮ್ ಸೇರಿಸಿದರೆ ಗ್ರೇವಿ ರೆಡಿ. ಈಗ ಈ ಕರಿಗೆ ನೀವು ರೆಡಿ ಮಾಡಿದ ಕೋಫ್ತಾ ಹಾಕಿ ಸವಿಯಲು ಕೊಡಿ.