Sunday, June 22, 2025

Latest Posts

ಹೊಟೇಲ್ ಸ್ಟೈಲ್ ಪಾಲಕ್ ಪನೀರ್ ಈಗ ಮನೆಯಲ್ಲೇ ತಯಾರಿಸಿ..

- Advertisement -

ಪಾಲಕ್‌ನಿಂದ ಮಾಡುವ ಖಾದ್ಯ ಎಷ್ಟು ರುಚಿಕರವೋ, ಅಷ್ಟೇ ಆರೋಗ್ಯಕರ. ಇನ್ನು ಪಾಲಕ್‌ ಜೊತೆ ಹಾಲಿನ ಪೌಷ್ಠಿಕಾಂಶಗಳಿಂದ ಭರಪೂರವಾಗಿರುವ ಪನೀರ್ ಸೇರಿದ್ರೆ, ಇನ್ನೂ ಟೇಸ್ಟಿ ಮತ್ತು ಹೆಲ್ದಿಯಾಗಿರತ್ತೆ. ಹಾಗಾಗಿ ನಾವಿಂದು ಪಾಲಕ್ ಪನೀರ್ ಮಾಡೋದು ಹೇಗೆ..? ಇದಕ್ಕೆ ಬೇಕಾಗಿರುವ ಸಾಮಗ್ರಿಗಳೇನು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಬೇಕಾಗುವ ಸಾಮಗ್ರಿ: ಒಂದು ಕಪ್ ಪಾಲಕ್, ಅರ್ಧ ಕಪ್ ಪನೀರ್, ಎರಡು ಹಸಿಮೆಣಸು, ಚಿಕ್ಕ ತುಂಡು ಹಸಿ ಶುಂಠಿ, ಎರಡು ಉದ್ದುದ್ದ ಕತ್ತರಿಸಿದ ನೀರುಳ್ಳಿ, ಒಂದು ಟೊಮೆಟೋ, ಅರ್ಧ ಸ್ಪೂನ್ ಜೀರಿಗೆ, ಅರ್ಧ ಸ್ಪೂನ್ ಧನಿಯಾ ಪುಡಿ, ಅರ್ಧ ಸ್ಪೂನ್ ಗರಂ ಮಸಾಲೆ ಪುಡಿ, ಚಿಟಿಕೆ ಅರಿಶಿನ, ಅರ್ಧ ಸ್ಪೂನ್ ಖಾರದ ಪುಡಿ, ಕಾಲು ಕಪ್ ಫ್ರೆಶ್ ಕ್ರೀಮ್‌ ಅಥವಾ ಮೊಸರು, ಅರ್ಧ ಸ್ಪೂನ್ ಹುರಿದು ಪುಡಿ ಮಾಡಿದ ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲು ಗ್ಯಾಸ್ ಆನ್ ಮಾಡಿ, ಬಾಣಲೆಗೆ ಎರಡು ಸ್ಪೂನ್ ಎಣ್ಣೆ ಹಾಕಿ, ಅದಕ್ಕೆ ಜೀರಿಗೆ, ಹಸಿ ಮೆಣಸು, ಹಸಿ ಶುಂಠಿ ಹಾಕಿ ಹುರಿಯಿರಿ,  ಇದಾದ ಬಳಿಕ, ಬೆಳ್ಳುಳ್ಳು, ಈರುಳ್ಳಿ ಹಾಕಿ ಹುರಿಯಿರಿ. ನಂತರ ಟೊಮೆಟೋ ಹಾಕಿ ಚೆನ್ನಾಗಿ ಹುರಿದು, ಈ ಮಿಶ್ರಣ ಆರಲು ಬಿಡಿ. ಇದು ಆರುವ ವೇಳೆ, ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದು, ನೀರು ಕುದಿಸಿ, ಅದಕ್ಕೆ ಪಾಲಕ್ ಹಾಕಿ, 10 ನಿಮಿಷ ಕುದಿಸಿ. ಇದನ್ನು ಕೂಡ ಆರಲು ಬಿಡಿ.

ಈ ಎರಡೂ ಮಿಶ್ರಣ ಚೆನ್ನಾಗಿ ಆರಿದ ಬಳಿಕ, ಮೊದಲು ಪಾಲಕ್ ಸೊಪ್ಪನ್ನು ಮಿಕ್ಸಿ ಜಾರ್‌ಗೆ ಹಾಕಿ, ಚೆನ್ನಾಗಿ ಗ್ರೈಂಡ್ ಮಾಡಿ. ನಂತರ ಈರುಳ್ಳಿ, ಟೊಮೆಟೋ ಮಿಶ್ರಣವನ್ನು ಮಿಕ್ಸಿ ಜಾರ್‌ಗೆ ಹಾಕಿ, ಗ್ರೈಂಡ್ ಮಾಡಿ. ಈಗ ಗ್ಯಾಸ್ ಆನ್ ಮಾಡಿ, ಪ್ಯಾನ್ ಇರಿಸಿ, ಎರಡು ಸ್ಪೂನ್ ಎಣ್ಣೆ ಹಾಕಿ. ಇದಕ್ಕೆ ಖಾರದ ಪುಡಿ, ಅರಿಶಿನ ಪುಡಿ, ಜೀರಿಗೆ ಪುಡಿ, ಧನಿಯಾ ಪುಡಿ ಹಾಕಿ ಬಾಡಿಸಿ. ನಂತರ ಪಾಲಕ್ ಪೇಸ್ಟ್ ಹಾಕಿ, 5 ನಿಮಿಷ ಕುದಿಸಿ. ಈಗ ಇದಕ್ಕೆ ಉಪ್ಪು, ಗರಂ ಮಸಾಲೆ ಪುಡಿ ಹಾಕಿ ಮಿಕ್ಸ್ ಮಾಡಿ. ನಂತರ ಈರುಳ್ಳಿ, ಟೋಮೆಟೋ ಪೇಸ್ಟ್, ಪನೀರ್, ಕ್ರೀಮ್ ಹಾಕಿ, ಮತ್ತೆ 5 ನಿಮಿಷ ಬೇಯಿಸಿ. ಈಗ  ಪಾಲಕ್ ಪನೀರ್ ರೆಡಿ.

- Advertisement -

Latest Posts

Don't Miss