Recipe: ಪಾಲಕ್ ಸೊಪ್ಪು ಬಳಸಿ ನೀವು ಏನೇ ಪದಾರ್ಥ ತಯಾರಿಸಿದರೂ, ಅದರ ರುಚಿ ದುಪ್ಪಟ್ಟಾಗುತ್ತದೆ. ಸೂಪ್, ಪಾಲಕ್ ರೈಸ್, ಪಾಲಕ್ ಪರಾಠಾ, ಪಾಲಕ್ ಪಲ್ಯ, ದಾಲ್ ಏನೇ ಮಾಡಿದ್ರೂ, ಸೂಪರ್ ಟೇಸ್ಟ್ ಕೊಡುತ್ತದೆ. ಅದೇ ರೀತಿ ನೀವು ಚಪಾತಿ, ರೊಟ್ಟಿಗೆ ಸೂಟ್ ಆಗುವ ಪಾಲಕ್ ಪನೀರ್ ಕೂಡ ಮನೆಯಲ್ಲೇ ತಯಾರಿಸಬಹುದು. ಹಾಗಾದ್ರೆ ಪಾಲಕ್ ಪನೀರ್ ತಯಾರಿಸೋದು ಹೇಗೆ..? ಇದಕ್ಕೆ ಏನೇನು ಸಾಮಗ್ರಿ ಬೇಕು ಅಂತಾ ತಿಳಿಯೋಣ ಬನ್ನಿ..
ಮೊದಲು 4ರಿಂದ 5 ಕಪ್ ನೀರು ಕುದಿಸಿ, ಅದಕ್ಕೆ ಒಂದು ಬೌಲ್ ಪಾಲಕ್ ಸೊಪ್ಪು(1 ಕಟ್ಟು) ಹಾಕಿ ಕುದಿಸಿ. ಬಳಿಕ ಅದನ್ನು ತಣ್ಣೀರಿಗೆ ಹಾಕಿ, ಸ್ವಚ್ಛಗೊಳಿಸಿ. ಇದನ್ನು ಒಂದು ಮಿಕ್ಸಿ ಜಾರ್ಗೆ ಹಾಕಿ, ಇದಕ್ಕೆ ಒಂದು ತುಂಡು ಹಸಿ ಶುಂಠಿ, ಎರಡು ಎಸಳು ಬೆಳ್ಳುಳ್ಳಿ, ಎರಡರಿಂದ ಮೂರು ಹಸಿಮೆಣಸು ಹಾಕಿ ರುಬ್ಬಿ ಪೇಸ್ಟ್ ಮಾಡಿಕೊಳ್ಳಿ.
ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎರಡು ಸ್ಪೂನ್ ಎಣ್ಣೆ, ಸ್ವಲ್ಪ ಬೆಣ್ಣೆ ಹಾಕಿ, ಪನೀರ್ ಹುರಿದುಕೊಳ್ಳಿ.ಅದೇ ಪ್ಯಾನ್ಗೆ ಮತ್ತಷ್ಣು ಎಣ್ಣೆ, ಬೆಣ್ಣೆ ಹಾಕಿ ಜೀರಿಗೆ, ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ, ಕಸೂರಿ ಮೇಥಿ ಹಾಕಿ ಹುರಿಯಿರಿ. ಬಳಿಕ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಹುರಿಯಿರಿ. ಬಳಿಕ ಟೊಮೆಟೋ ಹಾಕಿ ಹುರಿಯಿರಿ. ಬಳಿಕ ತಯಾರಿಸಿಕೊಂಡ ಪೇಸ್ಟ್ ಸೇರಿಸಿ. ಅವಶ್ಯಕತೆ ಇದ್ದಷ್ಟು ಉಪ್ಪು ಮತ್ತು ನೀರು ಹಾಕಿ ಕುದಿಸಿ, ಬಳಿಕ ಹುರಿದ ಪನೀರ್, ಗರಂ ಮಸಾಲೆ, ಖಾರದ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ, ಅರಿಶಿನ ಪುಡಿ, ಕ್ರೀಮ್, ಕಸೂರಿ ಮೇಥಿ ಸೇರಿಸಿ, ಕೊಂಚ ಹೊತ್ತು ಬೇಯಿಸಿದರೆ, ಪಾಲಕ್ ಪನೀರ್ ರೆಡಿ.