ಮೊದಲ ಭಾಗದಲ್ಲಿ ನಾವು ಮಹಾಭಾರತದಲ್ಲಿ ಕೊಡಲ್ಪಟ್ಟ ಎರಡು ಶಾಪಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನೀಡಿದ್ದೇವು. ಇಂದು ನಾವು ಮಹಾಭಾರತದಲ್ಲಿ ಕೊಟ್ಟ ಇನ್ನುಳಿದ ಮೂರು ಶಾಪಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ.
ಮೂರನೇಯ ಶಾಪ ಶ್ರೀಕಷ್ಣ ಅಶ್ವತ್ಥಾಮನಿಗೆ ಕೊಟ್ಟ ಶಾಪ. ಮಹಾಭಾರತದ ಕೊನೆಯ ದಿನ ಅಶ್ವತ್ಥಾಮ, ಪಾಂಡವಪುತ್ರರರನ್ನ ಮೋಸದಿಂದ ಕೊಂದ. ಈ ವಿಷಯ ಗೊತ್ತಾಗಿ ಪಾಂಡವರು ಅಶ್ವತ್ಥಾಮನನ್ನು ಹಿಂಬಾಲಿಸಿಕೊಂಡು, ಮಹರ್ಷಿ ವೇದ ವ್ಯಾಸರ ಆಶ್ರಮ ತಲುಪಿದರು. ಪಾಂಡವರನ್ನು ಕಂಡ ಅಶ್ವತ್ಥಾಮ, ಅರ್ಜುನನ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದ. ಕೃಷ್ಣ ಹೇಳಿದ್ದಕ್ಕೆ, ಅರ್ಜುನನೂ ಅಶ್ವತ್ಥಾಮನ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದ. ಆದರೆ ವೇದ ವ್ಯಾಸರು, ಇಬ್ಬರ ಬಾಣವನ್ನೂ ತಡೆ ಹಿಡಿದರು.
ಅವರವರ ಬಾಣವನ್ನು ಅವರು ಹಿಂದೆಗೆದುಕೊಳ್ಳಬೇಕಾಗಿ ವ್ಯಾಸರು ಹೇಳಿದಾಗ, ಅರ್ಜುನ ತನ್ನ ಬಾಣವನ್ನು ಹಿಂದೆಗೆದುಕೊಂಡ. ಆದರೆ ಅಶ್ವತ್ಥಾಮನಿಗೆ ಬಾಣ ಹಿಂದಿರುಗಿ ತೆಗೆದುಕೊಳ್ಳಬೇಕಾಗಿ ಗೊತ್ತಿಲ್ಲದ ಕಾರಣ, ಅವನು ಆ ಬಾಣವನ್ನು ಅಭಿಮನ್ಯುವಿನ ಪತ್ನಿ, ಉತ್ತರೆಯ ಗರ್ಭಕ್ಕೆ ಬಿಟ್ಟ. ಈ ಕಾರಣಕ್ಕೆ ಕೃಷ್ಣ ಅಶ್ವತ್ಥಾಮನನ್ನು ಕುರಿತು, ನೀನು ಇನ್ನೂ 3 ಸಾವಿರ ವರ್ಷ ಈ ಭೂಮಿಯ ಮೇಲೆ ಅಲೆದಾಡುತ್ತಿರುತ್ತಿಯ ಎಂದು ಶಾಪ ಕೊಟ್ಟ. ಇಂದಿಗೂ ಕೂಡ ಅಶ್ವತ್ಥಾಮ ಬದುಕಿದ್ದು, ಯಾವ ಮನುಷ್ಯನ ಜೊತೆಗೂ ಅವನ ಒಡನಾಟವಿಲ್ಲವೆಂದು ಹೇಳಲಾಗುತ್ತದೆ.
ನಾಲ್ಕನೇಯ ಶಾಪ, ಮಾಂಡವ್ಯ ಋಷಿ ಯಮರಾಜನಿಗೆ ನೀಡಿದ ಶಾಪ. ಯಾರೋ ಮಾಡಿದ ತಪ್ಪಿಗೆ ಮಾಂಡವ್ಯ ಋಷಿಗೆ ರಾಜನೋರ್ವ ಶಿಕ್ಷೆ ನೀಡುತ್ತಾನೆ. ಎಷ್ಟೇ ನೇಣಿಗೇರಿಸಿದರೂ, ಮಾಂಡವ್ಯ ಋಷಿಗಳ ಜೀವ ಹೋಗಲಿಲ್ಲ. ಆಗ ರಾಜನಿಗೆ ಅವನ ತಪ್ಪಿನ ಅರಿವಾಗಿ, ಋಷಿಗಳಲ್ಲಿ ಕ್ಷಮೆ ಕೇಳಿದ. ನಂತರ ಋಷಿಗಳು ಯಮರಾಜನ ಬಳಿ ಹೋಗಿ, ಯಾವ ತಪ್ಪಿಗೆ ಇಂಥ ಶಿಕ್ಷೆ ನೀಡಿರುವೆ ಎಂದು ಕೇಳಿದರು.
ಆಗ ಯಮರಾಜ, ನೀವು 12 ವರ್ಷದವರಿದ್ದಾಗ, ಒಂದು ಚಿಟ್ಟೆಗೆ ತೊಂದರೆ ನೀಡಿದ್ದಿರಿ. ಆ ಕಾರಣಕ್ಕೆ ನಾನು ನಿಮಗೆ ಈ ಶಿಕ್ಷೆ ನೀಡಬೇಕಾಯಿತು ಎಂದು ಹೇಳಿದ. ಆಗ ಋಷಿಗಳು, 12 ವರ್ಷದ ಮಕ್ಕಳಿಗೆ ಒಳ್ಳೆಯದ್ದು, ಕೆಟ್ಟದ್ದರ ಬಗ್ಗೆ ಜ್ಞಾನವಿರುವುದಿಲ್ಲ. ನಿನ್ನ ತಪ್ಪಿಗೆ ನೀನು ಮಾನವ ಯೋನಿಯಲ್ಲಿ ಜನಿಸು ಎಂದು ಶಾಪ ಹಾಕಿದರು. ಯಮ ಮುಂದಿನ ಜನ್ಮದಲ್ಲಿ ಕುರುವಂಶದ ದಾಸಿಯ ಮಗ ವಿದುರನಾಗಿ ಜನಿಸಿದ. ಹಾಗಾಗಿಯೇ ಮಾನವ ಜನ್ಮ ಸಿಕ್ಕಾಗ ಉತ್ತಮ ಕೆಲಸಗಳನ್ನು ಮಾಡಬೇಕು, ಆಗ ಮುಂದಿನ ಜನ್ಮದಲ್ಲಿ ಒಳ್ಳೆಯ ಕುಲ ಸಿಗುತ್ತದೆ ಎಂದು ಹೇಳಲಾಗಿದೆ.
ಐದನೇಯ ಶಾಪ ಊರ್ವಶಿ ಅರ್ಜುನನಿಗೆ ಕೊಟ್ಟ ಶಾಪ. ಅರ್ಜುನ ದಿವ್ಯಾಸ್ತ್ರವನ್ನು ಹುಡುಕಿಕೊಂಡು ಸ್ವರ್ಗಲೋಕಕ್ಕೆ ಹೋದ, ಅಲ್ಲಿ ಊರ್ವಶಿಯನ್ನು ಕಂಡ. ಊರ್ವಶಿಯೂ ಅರ್ಜುನನನ್ನು ಕಂಡು ಮೋಹಿತಳಾಗಿ ವಿವಾಹವಾಗುವಂತೆ ಕೇಳಿದಳು. ಆಗ ಅರ್ಜುನ, ನಾನು ನಿಮ್ಮನ್ನು ತಾಯಿಯಂತೆ ಕಾಣುತ್ತೇನೆ, ಹಾಗಾಗಿ ವಿವಾಹವಾಗಲು ಸಾಧ್ಯವಿಲ್ಲ ಎಂದು ಹೇಳಿದ.
ಅದಕ್ಕೆ ಕೋಪಗೊಂಡ ಊರ್ವಶಿ, ನೀನು ನಪುಂಸಕನಂತೆ ಮಾತನಾಡುತ್ತಿದ್ದೀಯ. ಹಾಗಾಗಿ ನೀನು ನಪುಂಸಕನಾಗು ಎಂದು ಶಾಪ ನೀಡಿದಳು. ಆಗ ಅರ್ಜುನ ಇಂದ್ರನ ಬಳಿ ಹೋಗಿ, ನಡೆದ ವಿಷಯ ಹೇಳಿದ. ಆಗ ಇಂದ್ರ, ಈ ಶಾಪದಿಂದ ನಿನಗೆ ಒಳಿತಾಗುತ್ತದೆ. ನೀನು ವನವಾಸದ ಸಮಯದಲ್ಲಿ ಕೌರವವರಿಂದ ತಪ್ಪಿಸಿಕೊಳ್ಳಲು ಇದು ನಿನಗೆ ಸಹಾಯವಾಗುತ್ತದೆ. ವನವಾಸ, ಅಜ್ಞಾತವಾಸದ ಬಳಿಕ, ಈ ಶಾಪ ಮುಗಿಯುತ್ತದೆ ಎಂದು ಹೇಳುತ್ತಾನೆ.