Political News: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಅಲ್ಪಸಂಖ್ಯಾತರ ತುಷ್ಟೀಕರಣ ಎಂಬ ಬಿಜೆಪಿ ಆರೋಪದ ನಡುವೆ, ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಅಲ್ಲದೆ ವಿಧೇಯಕವನ್ನು ಇದೇ ಅಧಿವೇಶನದಲ್ಲಿ ಜಾರಿಗೆ ತರಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಇದಕ್ಕೂ ಮೊದಲು ಹಿಂದುಳಿದ ಸಮುದಾಯ ಸೇರಿದಂತೆ ಇತರರಿಗಿದ್ದ ಮೀಸಲಾತಿಯನ್ನು ಇದೀಗ ರಾಜ್ಯ ಸರ್ಕಾರ ಮುಸ್ಲಿಂ ಸಮುದಾಯಕ್ಕೂ ವಿಸ್ತರಣೆ ಮಾಡಿದೆ. ಅಲ್ಲದೆ 1 ಕೋಟಿ ರೂಪಾಯಿಗಳಷ್ಟು ಗುತ್ತಿಗೆ ಕಾಮಗಾರಿಯಲ್ಲಿ ಮುಸ್ಲಿಂ ಮುಸ್ಲಿಮರ ಪ್ರವರ್ಗ 2-ಬಿ ಅಡಿ ಆ ಸಮುದಾಯಕ್ಕೆ ಶೇಕಡಾ 4ರಷ್ಟು ಮೀಸಲಾತಿಯನ್ನು ಕಲ್ಪಿಸುವ ಅಂಶ ನೂತನ ವಿಧೇಯಕದಲ್ಲಿ ಅಡಕವಾಗಿದೆ. ಇನ್ನೂ ಪರಿಶಿಷ್ಟ ಜಾತಿ ಹಾಗೂ ಪಂಗಡ ಸಮುದಾಯಗಳ ಗುತ್ತಿಗೆದಾರರಿಗೆ ಕಾಮಗಾರಿಗಳಲ್ಲಿ ಈ ಮೊದಲಿದ್ದ 1 ಕೋಟಿ ರೂಪಾಯಿಗಳ ಮಿತಿಯನ್ನು 2 ಕೋಟಿ ರೂಪಾಯಿಗಳಿಗೆ ಏರಿಕೆ ಮಾಡಲು ಈ ಅಧಿವೇಶನದಲ್ಲಿ ಸರ್ಕಾರ ಮುಂದಾಗಿದೆ.
ಇನ್ನೂ ಪ್ರಸ್ತುತ ನಡೆಯುತ್ತಿರುವ ಬಜೆಟ್ ಅಧಿವೇಶನವು ಮುಂದಿನ ವಾರದಲ್ಲಿ ಕೊನೆಯಾಗಲಿದೆ. ಅಲ್ಲದೆ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಈ ಎಲ್ಲ ವಿಧೇಯಕಗಳಿಗೆ ಶಾಸನ ಸಭೆಯ ಸಮ್ಮತಿಯು ಅಗತ್ಯವಾಗಿದೆ. ಉಭಯ ಸದನಗಳಲ್ಲಿ ಒಪ್ಪಿಗೆ ಪಡೆದ ಬಳಿಕವೇ ಈ ಘೋಷಣೆಗಳು ಅನುಷ್ಠಾನವಾಗಲಿವೆ.
ಮುಸ್ಲಿಂ ಮೀಸಲಾತಿ ಟೀಕಿಸಿದ್ದ ಬಿಜೆಪಿ..
ಅಂದಹಾಗೆ ಸರ್ಕಾರಿ ಕಾಮಗಾರಿಗಳಲ್ಲಿ 2 ಕೋಟಿ ರೂ.ವರೆಗಿನ ಗುತ್ತಿಗೆ ಮತ್ತು 1 ಕೋಟಿ ರೂ.ವರೆಗಿನ ಖರೀದಿಯಲ್ಲಿ ಮುಸ್ಲಿಂ ಮೀಸಲಾತಿ ಕಲ್ಪಿಸುವುದಾಗಿ ರಾಜ್ಯ ಸರ್ಕಾರ ಬಜೆಟ್ ನಲ್ಲಿ ಘೋಷಿಸಿದೆ. ಸಿದ್ದರಾಮಯ್ಯ ಸರ್ಕಾರದ ಹಿಂದೂ ವಿರೋಧಿ ನೀತಿಗೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ ? ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ಸಿದ್ದರಾಮಯ್ಯ ಅವರೇ,, ಬಜೆಟ್ ನಲ್ಲಿ ಎಸ್ಸಿ,ಎಸ್ಟಿ,ಒಬಿಸಿ ಸಮುದಾಯಗಳಿಗೆ ನೀವು ಕೊಟ್ಟಿರುವುದು ಕೇವಲ ಚಿಪ್ಪು ಮಾತ್ರ!! ದೇಶದ ಯಾವುದೇ ರಾಜ್ಯದಲ್ಲೂ ಇಲ್ಲದ ಕಾಂಗ್ರೆಸ್ ದಿವಾಳಿ ಮಾಡೆಲ್ ಜಾರಿ ಆಗುತ್ತಿದೆ ಎಂದು ಟೀಕೆ ಮಾಡಿದ್ದರು. ಅಲ್ಲದೆ ಮುಸ್ಲಿಂ ಓಲೈಕೆಗೆ ಮುಂದಾಗಿರುವುದು ಇದೊಂದು ಹಲಾಲ್ ಬಜೆಟ್ ಎಂದು ಜರಿದಿದ್ದರು.