Political News: ರಾಜ್ಯದಲ್ಲಿ ಮುಡಾ ಹಗರಣದ ಬಳಿಕ ಸರ್ಕಾರ ಹಾಗೂ ರಾಜ್ಯಪಾಲರ ನಡುವಿನ ಸಂಘರ್ಷ ಕೊನೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಗ್ರೇಟರ್ ಬೆಂಗಳೂರು ಸೇರಿದಂತೆ ರಾಜ್ಯ ಸರ್ಕಾರದ ಹಲವು ಮಸೂದೆಗಳನ್ನು ರಾಜ್ಯಪಾಲರು ಸಹಿ ಮಾಡದೆ ವಾಪಸ್ ಕಳುಹಿಸಿರುವುದಕ್ಕೆ ಇದೀಗ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಕಿಡಿ ಕಾರಿದ್ದಾರೆ. ಅಲ್ಲದೆ ಒಂದು ವೇಳೆ ರಾಜ್ಯಪಾಲರು ಉದ್ದೇಶ ಪೂರ್ವಕವಾಗಿಯೇ ಮಸೂದೆಗಳಿಗೆ ಸಹಿ ಹಾಕದಿದ್ದರೆ ನಾವು ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇವೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಮಸೂದೆಗಳನ್ನು ವಾಪಸ್ ಕಳುಹಿಸುವುದು ಹೊಸತೇನಲ್ಲ. ಅವರು ಮಸೂದೆಗಳಿಗೆ ಸೂಕ್ತ ಸ್ಪಷ್ಟನೆ ಕೇಳಿದರೆ ನಾವು ಕೊಡುತ್ತೇವೆ. ಆದರೆ ಸರ್ಕಾರದ ಮಸೂದೆಗಳನ್ನು ವಾಪಸ್ ಕಳುಹಿಸುವುದು ಸರಿಯಲ್ಲ. ಶಾಸಕಾಂಗ ಅಂಗೀಕರಿಸಿದ ವಿಧೇಯಕಗಳಿಗೆ ರಾಜ್ಯಪಾಲರು ವಾಪಸ್ ಕಳುಹಿಸುತ್ತಿದ್ದರೆ ತಮಿಳುನಾಡಿನಂತಹ ಕಾನೂನು ಹೋರಾಟವನ್ನು ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ವಿಪಕ್ಷಗಳು ರಾಜ್ಯಪಾಲರನ್ನು ಬಳಸಿಕೊಳ್ಳುತ್ತಿವೆ..
ಇನ್ನೂ ರಾಜ್ಯಪಾಲರು ಸರ್ಕಾರದ ಮಸೂದೆಗಳನ್ನು ವಾಪಸ್ ಕಳುಹಿಸುತ್ತಾರೆಂದರೆ ಅದರರ್ಥ ಏನು..? ಅವರ ಈ ನಡೆ ಸಮಂಜಸವಾಗಿಲ್ಲ. ಈ ವಿರೋಧ ಪಕ್ಷಗಳು ಸದನದಲ್ಲಿ ಮಾಡಲು ಸಾಧ್ಯವಾಗದಿದ್ದನ್ನು ರಾಜ್ಯಪಾಲರಿಂದ ಮಾಡಿಸುತ್ತಿವೆ ಎಂದು ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಟೀಕಿಸಿದ್ದಾರೆ.
ವಿಪಕ್ಷಗಳು ದೂರು ನೀಡಿದ ಬಳಿಕ ಅವರು ಮಸೂದೆಗಳನ್ನು ವಾಪಸ್ ಕಳುಹಿಸುತ್ತಾರೆಂದರೆ ಅವರ ಈ ಕ್ರಮದ ವಿರುದ್ಧ ಕೋರ್ಟ್ ಮೆಟ್ಟಿಲೇರುವುದು ಅನಿವಾರ್ಯವಾಗಿದೆ. ಅಲ್ಲದೆ ಕೇರಳ, ಪಶ್ಚಿಮ ಬಂಗಾಳ ಸರ್ಕಾರಗಳು ಅಲ್ಲಿನ ರಾಜ್ಯಪಾಲರ ವಿರುದ್ಧ ಈಗಾಗಲೇ ಕೋರ್ಟ್ ಮೊರೆ ಹೋಗಿವೆ. ಕೋರ್ಟ್ ಕೂಡ ರಾಜ್ಯಪಾಲರ ನಡೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ ಎಂದು ಅವರು ತಿಳಿಸಿದ್ದಾರೆ.
ಮಸೂದೆ ವಾಪಸ್ ಕಳುಹಿಸಿದ್ದ ರಾಜ್ಯಪಾಲರು..
ಇನ್ನೂ ಕಳೆದ ಅಧಿವೇಶನದಲ್ಲಿ ವಿಧಾನಮಂಡಲದ ಉಭಯ ಸದನಗಳ ಅಂಗೀಕಾರದ ಬಳಿಕ ಒಪ್ಪಿಗೆಗಾಗಿ ಕಳುಹಿಸಿದ್ದ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆಯನ್ನು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಸ್ಪಷ್ಟನೆ ಕೇಳಿ ಕಳೆದ ವಾರದಲ್ಲಿಯೇ ರಾಜ್ಯ ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದರು. ಅಲ್ಲದೆ ಇತರ 6 ಮಸೂದೆಗಳನ್ನು ಸ್ಪಷ್ಟನೆ ಕೋರಿ ಅವರು ವಾಪಸ್ ಕಳುಹಿಸಿದ್ದರು.

