ಸ್ಮಶಾನ ಅನ್ನೋ ಪದವೇ ಭಯ ಹುಟ್ಟಿಸುವಂಥದ್ದು. ಮನೆಯ ಬಳಿ ಸ್ಮಶಾನವಿದೆ ಅಂದ್ರೇನೇ ಜನ, 7 ಗಂಟೆಯೊಳಗೆ ಮನೆ ಸೇರಿ, ಬಾಗಿಲು ಹಾಕಿಕೊಳ್ಳುತ್ತಾರೆ. ಇನ್ನು ರಾತ್ರಿ ಹೊತ್ತು ಸ್ಮಶಾನ ದಾಟಿ ಹೋಗುವವರು ಪ್ರತಿದಿನ ನಡುಗುತ್ತಲೇ, ಆ ದಾರಿಯಿಂದ ಸಾಗಬೇಕು. ಅಂಥ ಭಯಂಕರ ಸ್ಥಳವದು. ಆದ್ರೆ ಒಂದು ಊರಿನ ಸ್ಮಶಾನದಲ್ಲಿ ವೇಶ್ಯೆಯರು ಉರಿಯುತ್ತಿರುವ ಚಿತೆಯ ಮುಂದೆ ನೃತ್ಯ ಮಾಡುತ್ತಾರಂತೆ. ಹಾಗಾದ್ರೆ ಯಾಕೆ ಅವರು ಸ್ಮಶಾನದಲ್ಲಿ ನೃತ್ಯ ಮಾಡುತ್ತಾರೆಂಬ ಬಗ್ಗೆ ತಿಳಿಯೋಣ ಬನ್ನಿ..
ವಾರಣಾಸಿಯ ಬನಾರಸ್ ಸ್ಮಶಾನದಲ್ಲಿ ವೇಶ್ಯೆಯರ ಶವದ ಮುಂದೆ ನೃತ್ಯ ಮಾಡುತ್ತಾರೆ. ಇಲ್ಲಿನ ಮಣಿಕರ್ಣಿಕಾ ಸ್ಮಶಾನದಲ್ಲಿ, ಚೈತ್ರ ನವರಾತ್ರಿಯ ಸಪ್ತಮಿಯಂದು, ಮಹಾ ಸ್ಮಶಾನ ಮಹೋತ್ಸವವನ್ನು ಆಚರಿಸಲಾಗತ್ತೆ. ಈ ದಿನ ಈ ಕಾರ್ಯಕ್ರಮದಲ್ಲಿ ಮಹಾಶಿವ ಅದೃಷ್ಯನಾಗಿ ಭಾಗವಹಿಸುತ್ತಾನೆಂಬ ನಂಬಿಕೆ ಇದೆ. ಇದೆಷ್ಟ ವಿಚಿತ್ರ ಸಂಭ್ರಮವೆಂದರೆ, ಒಂದೆಡೆ ಸ್ಮಶಾನದಲ್ಲಿ ತಮ್ಮವರನ್ನ ಕಳೆದುಕೊಂಡ ಜನ ಕಣ್ಣೀರು ಹಾಕಿ, ದುಃಖಿಸುತ್ತಾರೆ. ಇನ್ನೊಂದೆಡೆ ಸಂಗೀತ ನೃತ್ಯ ನಡೆಯುತ್ತಿರುತ್ತದೆ. ಇದೊಂದು ವಿಚಿತ್ರ ಸಮ್ಮಿಲನ ಎಂದು ಹೇಳಲಾಗಿದೆ.
ಇನ್ನೊಂದು ವಿಷಯವೆಂದರೆ, ವೇಶ್ಯೆಯರು ಬೇರೆಡೆ ನೃತ್ಯ ಮಾಡುವಾಗ, ದುಡ್ಡಿಗಾಗಿ ನೃತ್ಯ ಮಾಡುತ್ತಾರೆ. ಆದ್ರೆ ಈ ಮಹೋತ್ಸವದಲ್ಲಿ ಇವರಿಗೆ ಯಾರೂ ದುಡ್ಡು ಕೊಡುವುದಿಲ್ಲ. ಯಾಕಂದ್ರೆ ಇವರು ಇಲ್ಲಿ ನೃತ್ಯ ಮಾಡುವುದು, ಭೋಲೇನಾಥನನ್ನು ಮೆಚ್ಚಿಸುವುದಕ್ಕಾಗಿ. ಶಿವನ ಮೇಲಿನ ಭಕ್ತಿಯಿಂದ ಇಲ್ಲಿ ನೃತ್ಯವನ್ನು ಮಾಡಲಾಗುತ್ತದೆ. ಅಲ್ಲದೇ, ಹೀಗೆ ಸ್‌ಮಶಾನದಲ್ಲಿ ಶಿವನಿಗಾಗಿ ನೃತ್ಯ ಮಾಡಿದ್ದಲ್ಲಿ, ಅವರಿಗೆ ಬೇಗ ಈ ಜನ್ಮದಿಂದ ಮುಕ್ತಿ ಸಿಗುತ್ತದೆ ಅನ್ನೋ ನಂಬಿಕೆ ಇದೆ.
ಹಾಗಾದ್ರೆ ಈ ಪದ್ಧತಿ ಯಾಕೆ ಶುರುವಾಯ್ತು..? ಯಾರು ಶುರು ಮಾಡಿದರು ಅನ್ನೋ ಪ್ರಶ್ನೆಗೆ ಉತ್ತರ, ಬಾದ್‌ಶಾ ಅಕ್ಬರನ ನವರತ್ನದಲ್ಲಿ ಒಬ್ಬರಾದ, ರಾಜಸ್ಥಾನದ ರಾಜ ಮಾನ್‌ಸಿಂಗ್ ಈ ಪದ್ಧತಿಯನ್ನ ಹುಟ್ಟುಹಾಕಿದ್ದರು. ಮಣಿಕರ್ಣಿಕಾ ಸ್ಮಶಾನದಲ್ಲಿ ಶಿವನ ದೇವಸ್ಥಾನವೊಂದನ್ನ ಸ್ಥಾಪಿಸಿ, ಅಲ್ಲಿ ಶಿವಲಿಂಗ ಪ್ರತಿಷ್ಠಾಪಿಸಿ. ಪದ್ಧತಿ ಪ್ರಕಾರ ಪೂಜೆಯೂ ಸಲ್ಲಿಸಿದರು. ಆದ್ರೆ ಅಲ್ಲೊಂದು ಕಾರ್ಯಕ್ರಮವನ್ನ ಮಾಡಿ, ಜನರನ್ನು ಕರೆದು ಅನ್ನದಾಸೋಹ ಮಾಡಬೇಕು ಅನ್ನೋ ಆಸೆ ಇತ್ತು.
ಹಾಗಾಗಿ ಸ್ಥಳೀಯ ನೃತ್ಯ, ಸಂಗೀತ ಕಲಾಕಾರರನ್ನ ಕಾರ್ಯಕ್ರಮಕ್ಕೆ ಆಮಂತ್ರಿಸಿದರು. ಆದ್ರೆ ಆ ದೇವಸ್ಥಾನ ಸ್ಮಶಾನದಲ್ಲಿ ಇರುವುದರಿಂದ, ಕಲಾಕಾರರು ಬರಲು ಒಪ್ಪಲಿಲ್ಲ. ಹಾಗಾಗಿ ಕಾರ್ಯಕ್ರಮ ರದ್ದು ಮಾಡಲು ರಾಜ ನಿರ್ಧರಿಸಿದ. ಆದ್ರೆ ಅಲ್ಲಿನ ವೇಶ್ಯೆಯರಿಗೆ ಈ ವಿಷಯ ಗೊತ್ತಾಯಿತು. ಅವರು ರಾಜನಿಗೆ ಒಂದು ಪತ್ರ ಬರೆದರು. ಆ ಪತ್ರದಲ್ಲಿ ಈ ಕಾರ್ಯಕ್ರಮದಲ್ಲಿ ನಾವು ನೃತ್ಯ ಮಾಡಬಹುದೇ..? ನೀವು ಇದಕ್ಕೆ ಅವಕಾಶ ಕೊಟ್ಟರೆ, ನಮಗೆ ಅದಕ್ಕಿಂತ ಅದೃಷ್ಟ ಮತ್ತೊಂದಿಲ್ಲ ಎಂದು ಹೇಳಿರುತ್ತಾರೆ.
ರಾಜನಿಗೆ ವೇಶ್ಯೆಯರ ಪತ್ರ ಓದಿ ಸಂತೋಷವಾಗುತ್ತದೆ. ಅವನು ವೇಶ್ಯೆಯರ ನೃತ್ಯಕ್ಕೆ ಅನುಮತಿ ಕೊಡುತ್ತಾನೆ. ವೇಶ್ಯೆಯರು ಆ ಕಾರ್ಯಕ್ರಮಕ್ಕೆ ಬಂದು ನೃತ್ಯ ಮಾಡುತ್ತಾರೆ. ಅಂದಿನಿಂದ ಮಣಿಕರ್ಣಿಕಾ ಸ್ಮಶಾನದಲ್ಲಿ ನಡೆಯುವ ಚೈತ್ರ ನವರಾತ್ರಿಯ ಸಪ್ತಮಿಯ, ಮಹಾ ಸ್ಮಶಾನ ಮಹೋತ್ಸವದಂದು ವೇಶ್ಯೆಯರೇ ನೃತ್ಯ ಮಾಡುತ್ತಾರೆ.