Sunday, September 8, 2024

Latest Posts

ಮಂಗಳೂರಿನ ಸ್ಪೆಶಲ್ ಪಲ್ಯ, ಚೀನಿಕಾಯಿ ಕಲಸ್ ರೆಸಿಪಿ..

- Advertisement -

ಮಂಗಳೂರು ಕಡೆ ಜನ ಸಿಹಿಗುಂಬಳಗಾಯಿಗೆ ಚೀನಿಕಾಯಿ ಎಂದು ಕರೆಯುತ್ತಾರೆ. ಇದರ ಪಲ್ಯ, ಸಾಂಬಾರ್ ಬಲು ರುಚಿಯಾಗಿರುತ್ತದೆ. ಹಾಗಾಗಿ ನಾವಿಂದು ಮಂಗಳೂರಿನ ಸ್ಪೆಶಲ್ ಪಲ್ಯ ಚೀನಿಕಾಯಿ ಕಲಸ್ ರೆಸಿಪಿಯನ್ನು ತಿಳಿಸಿಕೊಡಲಿದ್ದೇವೆ. ಹಾಗಾದ್ರೆ ಈ ಪಲ್ಯ ತಯಾರಿಸಲು, ಬೇಕಾಗುವ ಸಾಮಗ್ರಿಗಳೇನು..? ಇದನ್ನು ಮಾಡೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಬೇಕಾಗುವ ಸಾಮಗ್ರಿ: ಒಂದು ದೊಡ್ಡ ಬೌಲ್ ಸಿಹಿಗುಂಬಳಕಾಯಿ. ಎರಡು ಸ್ಪೂನ್ ಜೀರಿಗೆ, ನಾಲ್ಕು ಒಣ ಮೆಣಸು, (ಖಾರ ಹೆಚ್ಚು ಬೇಕಾದಲ್ಲಿ ಹೆಚ್ಚು ಮೆಣಸು ಬಳಸಿ). ಚಿಕ್ಕ ತುಂಡು ಹುಣಸೆಹಣ್ಣು, ಒಂದು ಕಪ್ ಕೊಬ್ಬರಿ ತುರಿ, 10ರಿಂದ 15 ಗೇರುಬೀಜ, ಚಿಕ್ಕ ತುಂಡು ಬೆಲ್ಲ, ಕೊಂಚ ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಅರಿಶಿನ ಪುಡಿ. ಒಗ್ಗರಣೆಗೆ ಸಾಸಿವೆ, ಜೀರಿಗೆ, ಒಣ ಮೆಣಸು, ಕಡಲೆ ಬೇಳೆ, ಉದ್ದಿನ ಬೇಳೆ, ಕರಿಬೇವು.

ಮೊದಲು ಒಂದು ಪಾತ್ರೆಯಲ್ಲಿ ನೀರು, ಹುಣಸೆಹಣ್ಣು, ಬೆಲ್ಲ ಮತ್ತು ಸಿಹಿಗುಂಬಳಕಾಯಿ ಹಾಕಿ ಬೇಯಿಸಿ. ಯಾವುದೇ ಕಾರಣಕ್ಕೂ ಸಿಹಿಗುಂಬಳಕಾಯಿಯನ್ನು ಕುಕ್ಕರ್‌ನಲ್ಲಿ ಬೇಯಿಸಬೇಡಿ. ಕುಂಬಳಕಾಯಿ ಬೇಯುವವರೆಗೂ ಮಸಾಲೆ ರೆಡಿಮಾಡಿಕೊಳ್ಳಿ. ಮಿಕ್ಸಿ ಜಾರ್‌ಗೆ ತೆಂಗಿನತುರಿ, ಮೆಣಸಿನಕಾಯಿ, ಜೀರಿಗೆ ಉಪ್ಪು ಹಾಕಿ ಗ್ರೈಂಡ್ ಮಾಡಿ, ಮಸಾಲೆ ತಯಾರಿಸಿ.

ಈಗ ಒಂದು ಪ್ಯಾನ್‌ನಲ್ಲಿ ಕೊಂಚ ತುಪ್ಪ ಹಾಕಿ, ಗೋಡಂಬಿ ಹುರಿದುಕೊಳ್ಳಿ. ನಂತರ ಅದೇ ಪ್ಯಾನ್‌ನಲ್ಲಿ ಮಸಾಲೆ ಹಾಕಿ ಹುರಿದುಕೊಳ್ಳಿ. ಇದಾದ ಬಳಿಕ ಬೆಂದ ಚೀನಿಕಾಯಿ ಹಾಕಿ, ಮಿಕ್ಸ್ ಮಾಡಿ. ಕೊಂಚ ಹೊತ್ತು ಬೇಯಿಸಿ. ನಂತರ ಗ್ಯಾಸ್ ಆಫ್ ಮಾಡಿ, ಒಗ್ಗರಣೆಗೆ ರೆಡಿ ಮಾಡಿಕೊಳ್ಳಿ. ಒಗ್ಗರಣೆ ಸೌಟ್‌ಗೆ ಎಣ್ಣೆ, ಸಾಸಿವೆ, ಜೀರಿಗೆ, ಒಣಮೆಣಸು, ಕರಿಬೇವು, ಕಡಲೆ ಬೇಳೆ, ಉದ್ದಿನ ಬೇಳೆ ಹಾಕಿ, ಒಗ್ಗರಣೆ ರೆಡಿ ಮಾಡಿ, ಪಲ್ಯಕ್ಕೆ ಸೇರಿಸಿ. ಈಗ ತುಪ್ಪದಲ್ಲಿ ಹುರಿದ ಗೋಡಂಬಿಯನ್ನು ಪಲ್ಯಕ್ಕೆ ಸೇರಿಸಿದರೆ, ಚೀನಿಕಾಯಿ ಕಲಸ್‌ ಸವಿಯಲು ಸಿದ್ಧ.

- Advertisement -

Latest Posts

Don't Miss