ಈಗ ಹಲಸಿನ ಹಣ್ಣು, ಹಲಸಿನ ಕಾಯಿ ಸೀಸನ್ ಶುರುವಾಗಿದೆ. ಹಾಗಾಗಿ ಹಲಸಿನ ಕಾಯಿ ಬಳಸಿ ಮಾಡುವ ತರಹೇವಾರಿ ಪದಾರ್ಥವನ್ನು ನಾವು ಮನೆಯಲ್ಲಿಯೇ ತಯಾರಿಸಿ, ತಿನ್ನಬಹುದು. ಹಾಗಾಗಿ ಇಂದು ನಾವು ಹಲಸಿನಕಾಯಿ ಗ್ರೇವಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.
ಬೇಕಾಗುವ ಸಾಮಗ್ರಿ: ಅರ್ಧ ಕೆಜಿ ತುಂಡರಿಸಿದ ಹಲಸಿನಕಾಯಿ, 5 ಸ್ಪೂನ್ ಎಣ್ಣೆ, 1 ಸ್ಪೂನ್ ಜೀರಿಗೆ, ಚಿಟಿಕೆ ಹಿಂಗು, ಚಿಕ್ಕ ತುಂಡು ಚಕ್ಕೆ, 2 ಪಲಾವ್ ಎಲೆ, 2 ಏಲಕ್ಕಿ, 3 ಸಣ್ಣಗೆ ಕತ್ತರಿಸಿದ ಈರುಳ್ಳಿ, 1 ಹಸಿಮೆಣಸಿನಕಾಯಿ, ಚಿಟಿಕೆ ಅರಿಶಿನ, 1 ಸ್ಪೂನ್ ಗರಂ ಮಸಾಲೆ, 1ಸ್ಪೂನ್ ಧನಿಯಾ ಪುಡಿ, 2 ಸ್ಪೂನ್ ಖಾರದ ಪುಡಿ, 3 ಟೊಮೆಟೋ ಪ್ಯೂರಿ, ಅರ್ಧ ಸ್ಪೂನ್ ಚಾಟ್ ಮಸಾಲೆ ಪುಡಿ, 2ಸ್ಪೂನ್ ಮೊಸರು, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಮೊದಲು ಕುಕ್ಕರ್‌ನಲ್ಲಿ ಕೊಂಚ ಉಪ್ಪು, ಅಗತ್ಯವಿದ್ದಷ್ಟು ನೀರು ಹಾಕಿ, ಬೇಯಿಸಿ. ಹಲಸಿನಕಾಯಿ ಹೆಚ್ಚು ಬೇಯಿಸಿದಷ್ಟು ಬೆಜ್ಜಾಗುತ್ತದೆ. ಹಾಗಾಗಿ ಒಂದೇ ಶಿಳ್ಳೆಗೆ ಬೇಯಿಸಿದರೆ ಸಾಕು.
ಈಗ ಪ್ಯಾನ್ ಬಿಸಿ ಮಾಡಿ, 5 ಸ್ಪೂನ್ ಎಣ್ಣೆ, ಜೀರಿಗೆ, ಹಿಂಗು, ಚಕ್ಕೆ, ಪಲಾವ್ ಎಲೆ, ಏಲಕ್ಕಿ, ಒಂದು ಸ್ಪೂನ್ ಶುಂಠಿ- ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿ, ಹಸಿಮೆಣಸಿನಕಾಯಿ, ಹಾಕಿ ಚೆನ್ನಾಗಿ ಹುರಿಯಿರಿ. ಬಳಿಕ ಇದಕ್ಕೆ ಅರಿಶಿನ, ಗರಂ ಮಸಾಲೆ, 1ಸ್ಪೂನ್ ಧನಿಯಾ ಪುಡಿ, ಖಾರದ ಪುಡಿ, ಟೊಮೆಟೋ ಪ್ಯೂರಿ, 2ಸ್ಪೂನ್ ಮೊಸರು, ಅರ್ಧ ಸ್ಪೂನ್ ಚಾಟ್ ಮಸಾಲೆ ಪುಡಿ, ಉಪ್ಪು ಇವಿಷ್ಟನ್ನು ಮಿಕ್ಸ್ ಮಾಡಿ. ಕೊಂಚ ಬೇಯಿಸಿ.
ಟೊಮೆಟೊ ಹಸಿ ವಾಸನೆ ಹೋದ ಬಳಿಕ, ಇದಕ್ಕೆ ಈಗಾಗಲೇ ಬೇಯಿಸಿಟ್ಟುಕೊಂಡ ಹಲಸಿನಕಾಯಿಯನ್ನ ಸೇರಿಸಿ. ಕೊನೆಗೆ 1 ಕಪ್ ನೀರು ಹಾಕಿ, 5 ನಿಮಿಷ ಮಂದ ಉರಿಯಲ್ಲಿ ಬೇಯಿಸಿ. ಈಗ ಗ್ರೇವಿ ರೆಡಿ. ಅವಶ್ಯಕತೆ ಇದ್ದಲ್ಲಿ ನೀವು ಇದಕ್ಕೆ ಕೊತ್ತೊಂಬರೀ ಸೊಪ್ಪನ್ನ ಸೇರಿಸಬಹುದು.