ಬೆಂಗಳೂರು: ನಟ ದರ್ಶನ್ & ಗ್ಯಾಂಗ್ (Actor Darshan & Gang) ನಡೆಸಿರುವ ಕ್ರೌರ್ಯ ಒಂದೊಂದಾಗೇ ಬಯಲಾಗುತ್ತಿದೆ. ಕಾಮಾಕ್ಷಿಪಾಳ್ಯ ಪೊಲೀಸರು 3 ಸಾವಿರದ 991 ಪುಟಗಳ ಚಾರ್ಜ್ಶೀಟ್ (Charge Sheet) ಅನ್ನು ಕೋರ್ಟ್‌ಗೆ ಸಲ್ಲಿಸುತ್ತಿದ್ದಂತೆ ಇದೀಗ ಕೊಲೆಗೂ ಮುನ್ನ ರೇಣುಕಾಸ್ವಾಮಿ (Renukaswamy) ನನ್ನನ್ನು ಬಿಟ್ಟುಬಿಡಿ ಕಣ್ಣೀರಿಡುತ್ತಾ ಅಂಗಲಾಚುತ್ತಿರುವ ಫೋಟೋಗಳು ರಿವೀಲ್ ಆಗಿದೆ.
ಬೆಂಗಳೂರಿನ ಪಟ್ಟಣಗೆರೆಯಲ್ಲಿರುವ ಶೆಡ್ (Pattanagere Shed)ನಲ್ಲಿ ಕೊಲೆಗೂ ಮುನ್ನ ನಟ ದರ್ಶನ್ & ಟೀಮ್ ರೇಣುಕಾಸ್ವಾಮಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ. ಈ ವೇಳೆ ನೋವು ತಾಳಲಾರದೆ ಮೃತ ರೇಣುಕಾಸ್ವಾಮಿ ದಯವಿಟ್ಟು ನನ್ನನ್ನು ಬಿಟ್ಟು ಬಿಡಿ ಎಂದು ಗೋಗರೆಯುತ್ತಿರುವ ಫೋಟೋ ರಿವೀಲ್ ಆಗಿದೆ. ಅಲ್ಲದೆ, ರೇಣುಕಾಸ್ವಾಮಿ ಪ್ರಜ್ಞಾಹೀನ ಸ್ಥಿತಿಯಲ್ಲಿ ನೆಲದ ಬಿದ್ದಿರುವ ಫೋಟೋ ಕೂಡ ಇದೀಗ ಬಿಡುಗಡೆಯಾಗಿದೆ.
ಪಟ್ಟಣಗೆರೆ ಶೆಡ್ನಲ್ಲಿ ಲಾರಿಗಳ ಮುಂದೆ ನೆಲದಲ್ಲಿ ಕುಳಿತಿರುವ ರೇಣುಕಾಸ್ವಾಮಿ ಮೈಮೇಲೆ ಬಟ್ಟೆ ಇಲ್ಲ. ಅಲ್ಲದೆ, ರೇಣುಕಾಸ್ವಾಮಿ ನನ್ನನ್ನು ಬಿಟ್ಟು ಬಿಡಿ ಎಂದು ಆರೋಪಿಗಳ ಮುಂದೆ ಕಣ್ಣೀರಿಡುತ್ತಿದ್ದಾನೆ. ಹಲ್ಲೆಯಿಂದ ರೇಣುಕಾಸ್ವಾಮಿಯ ಎಡಗಣ್ಣು ಊದಿಕೊಂಡಿದ್ದು, ಆತನ ಎಡಗೈ ಹೆಬ್ಬೆರಳು ಮುರಿದಿದೆ. ಇನ್ನು ರಿವೀಲ್ ಆಗಿರುವ ಮತ್ತೊಂದು ಫೋಟೋದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವ ರೇಣುಕಾಸ್ವಾಮಿ ಬಿಳಿ ಬನಿಯನ್, ನೀಲಿ ಬಣ್ಣದ ಜಿನ್ಸ್ ಪ್ಯಾಂಟ್ ಹಾಕಿದ್ದು, ಪ್ಯಾಂಟ್ ಜಿಪ್ ಓಪನ್ ಆಗಿದೆ.
ಚಿತ್ರದುರ್ಗದಲ್ಲಿ ರೇಣಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಬೆಂಗಳೂರಿನ ಪಟ್ಟಣಗೆರೆ ಶೆಡ್ಗೆ ಕರೆ ತಂದಿದ್ದ ನಟ ದರ್ಶನ್ ಆ್ಯಂಡ್ ಗ್ಯಾಂಗ್ ಮನಸೋಇಚ್ಛೆ ಹಲ್ಲೆ ನಡೆಸಿತ್ತು. ಅಲ್ಲದೆ ರೇಣುಕಾಸ್ವಾಮಿ ಎಷ್ಟೇ ಗೋಗರೆದು ಕಣ್ಣೀರಿಟ್ಟರೂ ಬಿಡದ ಆರೋಪಿಗಳು ಚಿತ್ರಹಿಂಸೆ ಕೊಟ್ಟು ಬರ್ಬರವಾಗಿ ಹತ್ಯೆ ಮಾಡಿದ್ದರು. ಕೊಲೆ ಪ್ರಕರಣದಲ್ಲಿ ಬುಧವಾರ ದರ್ಶನ್ ಮತ್ತು ಗ್ಯಾಂಗ್ ವಿರುದ್ಧ ಬೆಂಗಳೂರಿನ 41ನೇ ಎಸಿಎಂಎಂ ಕೋರ್ಟ್‌ಗೆ ಕಾಮಾಕ್ಷಿಪಾಳ್ಯ ಪೊಲೀಸರು 3,991 ಪುಟಗಳ ದೋಷಾರೋಪ ಪಟ್ಟಿಯನ್ನ ಸಲ್ಲಿಕೆ ಮಾಡಿದ್ದಾರೆ.