Udupi News: ದರೋಡೆ ಪ್ರಕರಣವೊಂದರ ಸಂಬಂಧ ಮಣಿಪಾಲದಲ್ಲಿ ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆದಿದೆ. ಗರುಡ ಗ್ಯಾಂಗ್‌ನ ಇಸಾಕ್ ಎಂಬಾತ, ತನ್ನ ಕಾರಿನಿಂದ ಹಲವು ಕಾರ್‌ಗಳಿಗೆ ಡಿಕ್ಕಿ ಹೊಡೆದು, ಕಾರ್ ಬಿಟ್ಟು ಎಸ್ಕೇಪ್ ಆಗಿದ್ದ. ಆ ಕಾರ್‌ನಲ್ಲಿ ಇದ್ದ ಆತನ ಗೆಳತಿ ಸುಜೈನ್‌ಳನ್ನು ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ಬುಧವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಆಕೆಯನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ 2ನೇ ಆರೋಪಿ ಇಸಾಕ್ ಸದ್ಯ ನಾಪತ್ತೆಯಾಗಿದ್ದಾನೆ. ಆದರೆ ಇವನನ್ನು ಪತ್ತೆ ಹಚ್ಚಲು ಪ್ರಯತ್ನಿಸಿದ್ದೇ ಬಲು ರೋಚಕವಾಗಿದೆ. ಈತ ಮೂಲತಃ ಬೈಂದೂರಿನವನು. ಮಾದಕ ವಸ್ತು ಪೂರೈಕೆ, ಹಲ್ಲೆ, ದರೋಡೆ ಸೇರಿ ಹಲವು ಕೇಸ್‌ಗಳು ಈತನ ಮೇಲಿದೆ. ಕುಂಜುಬೆಟ್ಟು ಬಳಿ ನಡೆದಿದ್ದ ಗ್ಯಾಂಗ್‌ವಾರ್‌ನಲ್ಲಿ ಈತ ಸೂತ್ರಧಾರನಾಗಿದ್ದ. ಅಲ್ಲದೇ ಹಲವು ಕೇಸ್‌ಗಳು ಇವನ ಮೇಲಿದ್ದು, ಪೊಲೀಸರು ಇವನ ಮೇಲೆ ನಿಗಾ ಇಟ್ಟಿದ್ದರು.
ಈತ ಎಲ್ಲಿ ಹೋಗುತ್ತಾನೆ. ಈತನ ಗರ್ಲ್‌ಫ್ರೆಂಡ್ ಯಾರು..? ಹೀಗೆ ಇತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ತಿಳಿದು, ಬೆಂಗಳೂರು ಪೊಲೀಸರು ಮಣಿಪಾಲ್‌ಗೆ ಬಂದು, ಈತನ ಗರ್ಲ್‌ಫ್ರೆಂಡ್ ಮನೆಯ ಬಳಿ ಕಾವಲು ಕಾದಿದ್ದಾರೆ. ಮಣ್ಣಂಪಾಡಿಯಲ್ಲಿರುವ ಈಕೆಯ ಮನೆಯಿಂದ ಹೊರಬಿದ್ದ, ಸುಜೈನ್ ಮತ್ತು ಆಕೆಯ ಸಹೋದರಿ, ಅಲ್ಲೇ ಇದ್ದ ಮೊಬೈಲ್ ಅಂಗಡಿಗೆ ಹೋಗಿದ್ದಾರೆ. ಈ ವೇಳೆ ಕಪ್ಪು ಬಣ್ಣದ ಥಾರ್ ಆ ಮೊಬೈಲ್ ಅಂಗಡಿಗೆ ಬಂದಿದ್ದು, ಪೊಲೀಸರು ಆ ಥಾರ್ ಗಾಡಿಯನ್ನು ಫಾಲೋ ಮಾಡಿದಾಗ, ಅದರಲ್ಲಿ ಇಸಾಕ್ ಇರುವುದು ಕನ್ಫರ್ಮ್ ಆಗಿದೆ.
ಈ ವೇಳೆ ಇಸಾಕ್‌ಗೂ ಪೊಲೀಸರು ತನ್ನನ್ನು ಫಾಲೋ ಮಾಡುತ್ತಿದ್ದಾರೆಂದು ಕನ್ಫರ್ಮ್ ಆಗಿದೆ. ಈ ವೇಳೆ ಅಡ್ಡಾದಿಡ್ಡಿ ಕಾರು ಚಲಾಯಿಸಿ, ಪೊಲೀಸರನ್ನು ಸಾಯಿಸಲು ಇಸಾಕ್ ಪ್ರಯತ್ನಿಸಿದ್ದಾನೆ. ಅಲ್ಲದೇ ಈ ವೇಳೆ ಹಲವು ವಾಹನಗಳಿಗೆ ಇವನ ಥಾರ್ ಡಿಕ್ಕಿಯಾಗಿ, ಸರಣಿ ಅಪಘಾತವೂ ಆಗಿದೆ. ಹೀಗಾಗಿ ಪೊಲೀಸರ ವಿರುದ್ಧ ಸಾರ್ವಜನಿಕರು ವಾಗ್ವಾದ ನಡೆಸಿದ್ದಾರೆ. ಇದೇ ಗ್ಯಾಪ್‌ನಲ್ಲಿ ಇಸಾಕ್ ತನ್ನ ಗೆಳತಿಯನ್ನು ಕರೆದುಕೊಂಡು ಕತ್ತಲೆಯಲ್ಲಿ ಓಡಿ ಹೋಗಿ ಎಸ್ಕೇಪ್ ಆಗಿದ್ದಾನೆ.
ಬಳಿಕ ಮತ್ತೆ ಕಾರ್ಯಾಚರಣೆ ಮುಂದುವರೆಸಿದ ಪೊಲೀಸರು, ಮಣ್ಣಂಗುಡ್ಡೆಯ ಸುಜೇನ್ ಮನೆಗೆ ಹೋಗಿ, ರಾತ್ರಿ 2 ಗಂಟೆಗೆ ಆಕೆಯನ್ನು ಬಂಧಿಸಿದ್ದಾರೆ. ಇನ್ನು ಇದಕ್ಕೂ ಮುನ್ನ ಥಾರ್‌ನಲ್ಲಿ ಒಂದು ಬ್ಯಾಗ್ ಸಿಕ್ಕಿದ್ದು, ಇದರಲ್ಲಿ ನಿಷ್ಕ್ರೀಯಗೊಂಡಿದ್ದ 15ಕ್ಕೂ ಹೆಚ್ಚು ಸಿಮ್, ಮಾದಕ ವಸ್ತುಗಳು, ತಲವಾರ್, ಚಾಕು ಎಲ್ಲವೂ ಪತ್ತೆಯಾಗಿದೆ.
ಸದ್ಯ ಆರೋಪಿಯ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ರೈಲು ನಿಲ್ದಾಣದ ಮೂಲಕ ಯಾವ ಊರಿಗೆ ಹೋಗಿದ್ದಾನೆಂದು, ಸಿಸಿಟಿವಿ ದೃಶ್ಯದ ಮೂಲಕ ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ.