News: ಅರಮನೆ ಮೈದಾನದ ಭೂಮಿಯ ವಿಚಾರದಲ್ಲಿ ರಾಜ್ಯ ಸರ್ಕಾರ ಹಾಗೂ ರಾಜ ವಂಶಸ್ಥರ ನಡುವಿನ ತಿಕ್ಕಾಟ ಮುಗಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ಇಷ್ಟು ದಿನ ಟಿಡಿಆರ್ ನೀಡಲು ಹಿಂದೇಟು ಹಾಕಿದ್ದ ಸರ್ಕಾರ ಇದೀಗ ಜಾಣ ನಡೆಯನ್ನು ಅನುಸರಿಸಿ ಟಿಡಿಆರ್ ನೀಡುವುದಕ್ಕೆ ಸಮ್ಮತಿ ಸೂಚಿಸಿದೆ.
ಸುಪ್ರೀಂ ಕೋರ್ಟ್ ಸೂಚನೆಯಂತೆ ಬೆಂಗಳೂರಿನ ಬಳ್ಳಾರಿ ರಸ್ತೆ ಹಾಗೂ ಜಯಮಹಲ್ ಪ್ರದೇಶದ ರಸ್ತೆಗಳ ವಿಸ್ತರಣೆಗಾಗಿ ರಾಜ್ಯ ಸರ್ಕಾರ ಸ್ವಾಧೀನಪಡಿಸಿಕೊಂಡಿರುವ ಅರಮನೆ ಮೈದಾನದ ಭೂಮಿಗೆ ಸಂಬಂಧಿಸಿದಂತೆ 3,400 ಕೋಟಿ ರೂಪಾಯಿಕ್ಕಿಂತಲೂ ಅಧಿಕ ವರ್ಗಾಯಿಸಬಹುದಾದ ಅಭಿವೃದ್ದಿ ಹಕ್ಕು ಅಂದರೆ ಟಿಡಿಆರ್ ಪ್ರಮಾಣಪತ್ರಗಳನ್ನು ನ್ಯಾಯಾಲಯದಲ್ಲಿ ಷರತ್ತುಬದ್ಧವಾಗಿ ಠೇವಣಿ ಇಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಅರಮನೆಯ ಸುತ್ತಲಿನ ರಸ್ತೆಯ ವಿಸ್ತರಣೆಯ ಉದ್ದೇಶದಿಂದ 15.36 ಎಕರೆ ಭೂಮಿಯನ್ನು ರಾಜ್ಯ ಸರ್ಕಾರ ಸ್ವಾಧೀನಪಡಿಸಿಕೊಂಡಿದೆ. ಇದಕ್ಕೆ ಪ್ರತಿಯಾಗಿ 3,400 ಕೋಟಿ ರೂಪಾಯಿಗಳ ಟಿಡಿಆರ್ ಪ್ರಮಾಣಪತ್ರಗಳನ್ನು ವಾರದಲ್ಲಿ ಠೇವಣಿ ಇಡುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯವು ಸೂಚಿಸಿತ್ತು. ಅದರಂತೆಯೇ ಇದೀಗ ರಾಜ್ಯ ಸರ್ಕಾರವು ಈ ಕ್ರಮಕ್ಕೆ ಮುಂದಾಗಿದೆ.
ಅಲ್ಲದೆ ಈ ಪ್ರಕರಣದಲ್ಲಿ ನ್ಯಾಯಲಯದ ಅಂತಿಮ ತೀರ್ಪು ಬರುವವರೆಗೂ ಈ ಮೊತ್ತವನ್ನು ಭೂಮಿಯ ಮಾಲೀಕರು ಬಳಸುವಂತಿಲ್ಲ ಎನ್ನವ ಷರತ್ತನ್ನು ಸರ್ಕಾರ ತನ್ನ ಪತ್ರದಲ್ಲಿ ಉಲ್ಲೇಖಿಸಲು ನಿರ್ಧರಿಸಿದೆ. ಇನ್ನೂ ಒಂದು ವೇಳೆ ಈ ಮೊತ್ತವನ್ನು ಬಳಸಿದರೆ ಪ್ರಕರಣದ ಕುರಿತು ಮಧ್ಯದಲ್ಲಿಯೇ ತೀರ್ಪು ಸರ್ಕಾರದ ಪರವಾಗಿ ಬಂದರೆ ಆಗ ಟಿಡಿಆರ್ ಪಡೆಯಲು ತೊಂದರೆಯಾಗುತ್ತದೆ ಎಂಬ ಲೆಕ್ಕಾಚಾರದಿಂದ ರಾಜ ಮನೆತನದವರಿಗೆ ಟಿಡಿಆರ್ ವಿಚಾರದಲ್ಲಿ ಯಾವುದೇ ಅನುಕೂಲವಾಗಬಾರದೆಂಬ ಅಡಿಬರಹದೊಂದಿಗೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಸಾರ್ವಜನಿಕ ಹಿತದೃಷ್ಟಿಗೆ ನಮ್ಮ ಆಸ್ತಿನೇ ಬೇಕಾ..?
ಇನ್ನೂ ಇದೇ ವಿಚಾರಕ್ಕೆ ಈ ಹಿಂದೆ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದ ರಾಜವಂಶಸ್ಥ ಹಾಗೂ ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಬೆಂಗಳೂರು ಅರಮನೆ ಆಸ್ತಿ ಕುರಿತು ರಾಜ್ಯ ಸರ್ಕಾರ ಜನರ ದಿಕ್ಕು ತಪ್ಪಿಸುತ್ತಿದ್ದು, ಕಾನೂನಾತ್ಮಕ ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದ್ದರು.
ಅಲ್ಲದೆ ರಾಜ್ಯ ಸರ್ಕಾರದಿಂದ ನಮಗೆ ಪರಿಹಾರ ಕೊಡುವ ಅಗತ್ಯವಿಲ್ಲ. ಟಿಡಿಆರ್ ಕೊಟ್ಟರೆ ಸಾಕು. ಆದರೆ, ಕೊಡುತ್ತಿಲ್ಲ, ಸರ್ಕಾರ ಅವರ ಕೈಯಲ್ಲಿರುವುದರಿಂದ ಹೀಗೆ ವರ್ತಿಸುತ್ತಿದ್ದಾರೆ. ಸಾರ್ವಜನಿಕ ಹಿತದೃಷ್ಟಿಗೆ ನಮ್ಮ ಆಸ್ತಿನೇ ಬೇಕಾ ಎಂದು ಯದುವೀರ್ ಪ್ರಶ್ನಿಸಿದ್ದರು. ಅಲ್ಲದೆ ರಾಜ್ಯ ಸರ್ಕಾರ ನ್ಯಾಯಾಲಯದ ಆದೇಶದ ಅನುಸಾರ ನಡೆದುಕೊಳ್ಳಲಿ, ಸಾಮಾಜಿಕ ನ್ಯಾಯದ ವಿಚಾರ ಪ್ರಸ್ತಾಪಿಸಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು ಎಂದು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಯದುವೀರ್ ಹರಿಹಾಯ್ದಿದ್ದರು.