Sandalwood News: ಸಿನಿಮಾರಂಗದಲ್ಲಿ ಎಲ್ಲವೂ ಸರಿಯಾಗಿದೆಯಾ? ಯಾವುದೇ ಸಿನಿಮಾರಂಗವಿರಲಿ, ಅಲ್ಲೊಂದಷ್ಟು ಆರೋಪ, ಪ್ರತ್ಯಾರೋಪಗಳು ಕಾಮನ್. ಅದರಲ್ಲೂ ನಟಿಯರು ಮಾಡುವ ಆರೋಪಗಳಿಗೆ ಕೆಲವು ಇಂಡಸ್ಟ್ರಿಗಳು ತತ್ತರಿಸಿರುವುದಂತೂ ನಿಜ. ಕೆಲ ವರ್ಷಗಳ ಹಿಂದೆ ಮೀಟೂ ಪ್ರಕರಣಗಳ ಸುದ್ದಿ ಓಡಾಡಿತ್ತು. ಅವರಿವರ ಮೇಲೆ ಕೆಲವು ನಟಿಮಣಿಗಳು ಬೊಟ್ಟು ಮಾಡಿ ತೋರಿಸಿದ್ದರು. ಅದು ಮರೆಯುತ್ತಿದ್ದಂತೆಯೇ ಇತ್ತೀಚೆಗೆ ಮಲಯಾಳಂ ಇಂಡಸ್ಟ್ರಿಯಲ್ಲಿ ಹೇಮಾ ಕಮಿಟಿ ವರದಿ ಕೇಳಿ ಇಡೀ ಭಾರತೀಯ ಚಿತ್ರರಂಗವೇ ಬೆಚ್ಚಿಬಿದ್ದಿತ್ತು. ಒಂದಷ್ಟು ಮಲಯಾಳಂ ನಿರ್ದೇಶಕರು, ನಟರು, ನಿರ್ಮಾಪಕರ ಮೇಲೆ ಕೆಲವು ನಟಿಯರು ನೇರ ಆರೋಪ ಮಾಡಿದ್ದರು. ಆ ಬಗ್ಗೆ ಹೇಮಾ ಸಮಿತಿ ವರದಿ ಬಹಿರಂಗಪಡಿಸಿತ್ತು. ಕೆಲವರು ಅಲ್ಲಿನ ಫಿಲ್ಮ್ ಚೇಂಬರ್ ಸ್ಥಾನಗಳಿಗೆ ರಾಜಿನಾಮೆ ನೀಡಿದ್ದರು.
ಕನ್ನಡ ಚಿತ್ರರಂಗದಲ್ಲೂ ಮೀಟೂ ಪ್ರಕರಣ ಸದ್ದು ಮಾಡಿದ್ದು ಬಿಟ್ಟರೆ, ಬೇರೆ ಆರೋಪಗಳೇನೂ ಇರಲಿಲ್ಲ. ಆದರೆ, ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಈಗ ಅಂಥದ್ದೊಂದು ಆರೋಪ ಮಾಡಿದ್ದಾರೆ. ಅವರಿಗೆ ಕನ್ನಡ ಚಿತ್ರರಂಗದಲ್ಲಿ ನಟಿಸುವ ಸಂದರ್ಭದಲ್ಲಿ ಕೆಟ್ಟ ಅನುಭವ ಆಗಿದೆಯಂತೆ. ಹೀಗಂತ ಸ್ವತಃ ಸೋನಾಲಿ ಬೇಂದ್ರೆ ಅವರೇ ಹೇಳಿಕೊಂಡಿದ್ದಾರೆ. ಸೋನಾಲಿ ಬೇಂದ್ರೆ ಎರಡುವರೆ ದಶಕಗಳ ಹಿಂದೆ ಸ್ಟಾರ್ ಎನಿಸಿಕೊಂಡಿದ್ದ ಬಾಲಿವುಡ್ ನ ನಟಿ. ಹಿಂದಿಗಷ್ಟೇ ಸೀಮಿತವಾಗಿದ್ದ ಸೋನಾಲಿ, ಕ್ರಮೇಣ ದಕ್ಷಿಣ ಭಾರತದ ಸಿನಿಮಾಗಳಲ್ಲೂ ಕಾಣಿಸಿಕೊಂಡರು ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿ, ಹಲವು ಹಿಟ್ ಸಿನಿಮಾ ನೀಡಿದ್ದಾರೆ. ಅತ್ತ, ಕನ್ನಡದ ಒಂದೇ ಒಂದು ಸಿನಿಮಾದಲ್ಲೂ ಅವರು ನಟಿಸಿದ್ದಾರೆ. ಆದರೆ, ಕನ್ನಡ ಸಿನಿಮಾದಲ್ಲಿ ನಟಿಸುವಾಗ ಅವರಿಗೆ ಕೆಟ್ಟ ಅನುಭವ ಆಗಿತ್ತಂತೆ.
ಅದೇನೆ ಇರಲಿ, ಬಾಲಿವುಡ್ ನಟಿಮಣಿಗಳು ಕೂಡ ದಕ್ಷಿಣ ಭಾರತ ಸಿನಿಮಾಗಳಲ್ಲಿ ನಟಿಸೋಕೆ ತುದಿಗಾಲ ಮೇಲೆ ನಿಲ್ತಾರೆ. ತೆಲುಗು, ತಮಿಳು ಕನ್ನಡ ಹಾಗು ಮಲಯಾಳಂ ಸಿನಿಮಾಗಳಲ್ಲಿ ಅವಕಾಶ ಸಿಕ್ಕರೆ ಸಅಕು ಕಣ್ಣಿಗೊತ್ತಿಗೊಂದು ನಟಿಸೋಕೆ ಸೈ ಅಂತಿದ್ದಾರೆ. ಹಾಗೆ ನೋಡಿದರೆ, ಬಾಲಿವುಡ್ ನ ಅನೇಕ ಮಂದಿ ಬಾಲಿವುಡ್ ಗಿಂತಲೂ ದಕ್ಷಿಣ ಭಾರತ ಚಿತ್ರರಂಗದ ಬಗ್ಗೆ ಹಲವು ಸಂದರ್ಶನಗಳಲ್ಲಿ ಮಾತಾಡಿದ್ದರು. ಈಗಲೂ ನಮ್ಮ ಸಿನಿಮಾರಂಗದ ಬಗ್ಗೆ ಮಾತಾಡುತ್ತಿದ್ದಾರ. ಬಾಲಿವುಡ್ ಮಂದಿ ದಕ್ಷಿಣ ಭಾರತ ಚಿತ್ರರಂಗದವರಿಂದ ಕಲಿಯಬೇಕು ಅಂತ ಹೇಳಿಕೊಂಡಿದ್ದಾರೆ. ಆದರೆ ಬಾಲಿವುಡ್ ನಟಿ ಸೊನಾಲಿ ಬೇಂದ್ರೆ ಮಾತ್ರ ದಕ್ಷಿಣ ಭಾರತ ಚಿತ್ರರಂಗದ ಬಗ್ಗೆ ತಕರಾರು ಎತ್ತಿದ್ದಾರೆ. ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿ ನಟಿಸಿದ ಬಗ್ಗೆ ಬೇಸರ ಹೊರಹಾಕಿದ್ದು, ಅಲ್ಲಿ ನನಗೆ ನೋವಾಗಿದೆ ಅಂದಿದ್ದಾರೆ.
ಇಷ್ಟಕ್ಕೂ ಸೋನಾಲಿ ಈ ಕುರಿತು ಹೇಳಿಕೊಂಡಿರೋದು ಇತ್ತೀಚೆಗೆ ಅಮೆಜಾನ್ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ. ಕನ್ನಡ ಚಿತ್ರರಂಗದಲ್ಲಿ ನನಗೆ ಕಹಿ ಅನುಭವ ಆಗಿದೆ ಎಂದು ಹೇಳಿದ್ದಾರೆ. ‘ನಾನು ಕೆಲವು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದೇನೆ. ಅದರ ನಡುವೆ ಒಂದು ಕನ್ನಡ ಸಿನಿಮಾದಲ್ಲೂ ನಾನು ನಟಿಸಿದ್ದೆ. ಆದರೆ ನನಗೆ ಆ ಸಿನಿಮಾದಲ್ಲಿ ಬಹಳ ಕೆಟ್ಟ ಅನುಭವ ಆಯ್ತು. ಆಗಿನಿಂದಲೇ ನಾನು ಇನ್ನೆಂದೂ ಕನ್ನಡ ಸಿನಿಮಾನಲ್ಲಿ ನಟಿಸುವುದಿಲ್ಲ ಎಂಬ ನಿರ್ಧಾರ ಮಾಡಿದ್ದೆ. ಆ ನಂತರ ಎಂದೂ ನಾನು ಕನ್ನಡ ಸಿನಿಮಾನಲ್ಲಿ ನಟಿಸಲಿಲ್ಲ’ ಎಂದಿದ್ದಾರೆ.
ಸೋನಾಲಿ ಬೇಂದ್ರೆ ಕನ್ನಡದಲ್ಲಿ ನಟಿಸಿದ್ದು ಒಂದೇ ಒಂದು ಸಿನಿಮಾ. ಅದು ‘ಪ್ರೀತ್ಸೆ’ ಚಿತ್ರ. ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಹೀರೋ. ಉಪೇಂದ್ರ ಕೂಡ ನಟಿಸಿದ್ದರು. ಇದು ಶಾರುಖ್ ಖಾನ್ ನಟನೆಯ ‘ಡರ್’ ಚಿತ್ರದ ರಿಮೇಕ್. ಸಿನಿಮಾದಲ್ಲಿ ಉಪೇಂದ್ರ ಪಾಗಲ್ ಪ್ರೇಮಿಯಾಗಿ ನಟಿಸಿದ್ದರು. ಈ ಚಿತ್ರದಲ್ಲಿ ನಟಿಸುವಾಗ ಸೋನಾಲಿ ಬೇಂದ್ರೆಗೆ ಕೆಟ್ಟ ಅನುಭವ ಆಗಿತ್ತಂತೆ. ಹಾಗಾಗಿ ಅವರು ಮತ್ತೆಂದೂ ಸಹ ಕನ್ನಡ ಸಿನಿಮಾಗಳಲ್ಲಿ ನಟಿಸಲಿಲ್ಲವಂತೆ. ಎಲ್ಲವೂ ಸರಿ, ಆಗ ಆಗಿದ್ದ ಆ ಕಹಿ ಅನುಭವವನ್ನು ಅಂದೇ ಹೇಳಬಹುದಿತ್ತು. ಆಗಲೂ ಮಾಧ್ಯಮಗಳಿದ್ದವು. ಆಗ ಹೇಳದ ಮಾತನ್ನು ಈಗ ಯಾಕೆ ಹೇಳಿದರು ಅನ್ನೋ ಕಾಮೆಂಟ್ಸ್ ಕೂಡ ಬರುತ್ತಿವೆ. ಇರಲಿ, ಆದರೆ ತಮಗೆ ಆದ ಆ ಕಹಿ ಅನುಭವ ಏನು ಎಂಬುದನ್ನು ಸೋನಾಲಿ ಬೇಂದ್ರೆ ಮಾತ್ರ ಹೇಳಿಕೊಂಡಿಲ್ಲ.
ಕನ್ನಡದ ‘ಪ್ರೀತ್ಸೆ’ ಸಿನಿಮಾನಲ್ಲಿ ನಟಿಸುವ ಮುನ್ನ ಬೇಂದ್ರೆ, ತಮಿಳಿನ ಎರಡು ಸಿನಿಮಾಗಳಲ್ಲಿ ನಟಿಸಿದ್ದರು. ‘ಪ್ರೀತ್ಸೆ’ ಸಿನಿಮಾ ಬಳಿಕ ಸೋನಾಲಿ ಬೇಂದ್ರೆ ಮುರಾರಿ ಎಂಬ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟರು ಆ ಸಿನಿಮಾ ಹಿಟ್ ಆಯ್ತು. ಅದಾದ ಬಳಿಕ ಹಲವಾರು ತೆಲುಗು ಸಿನಿಮಾಗಳಲ್ಲಿ ನಟನೆ ಮುಂದುವರೆಸಿದ್ದರು. 2004 ರಲ್ಲಿ ಬಿಡುಗಡೆ ಆದ ‘ಶಂಕರ್ ದಾದ ಎಂಬಿಬಿಎಸ್’ ಸಿನಿಮಾ ಸೊನಾಲಿ ಬೇಂದ್ರೆಯ ಕೊನೆ ಚಿತ್ರ. ಅದಾದ ಬಳಿಕ ಸುಮಾರು 10 ವರ್ಷಗಳ ಕಾಲ ಯಾವ ಸಿನಿಮಾದಲ್ಲಿಯೂ ನಟಿಸಲಿಲ್ಲ ಸೋನಾಲಿ. ಆ ಬಳಿಕ ಮತ್ತೆ ಹತ್ತು ವರ್ಷ ಗ್ಯಾಪ್ ತೆಗೆದುಕೊಂಡು ಈಗ ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ಹಾಗೆ ನೋಡಿದರೆ, ಸೋನಾಲಿ ಬೇಂದ್ರೆ ಅವರ ಬದುಕೇ ಒಂದು ರೋಚಕ. 1975ರಲ್ಲಿ ಮುಂಬೈನಲ್ಲಿ ಜನಿಸಿದ ಬೇಂದ್ರೆ, ಶ್ರೀಮಂತ ಕುಟುಂಬದಲ್ಲಿ ಬೆಳೆಯುತ್ತಾರೆ. ಆರಂಭದಲ್ಲಿ ಮಾಡೆಲ್ ಆಗಿದ್ದ ಅವರು, ಮೆಲ್ಲನೆ ಬಾಲಿವುಡ್ ಅಂಗಳಕ್ಕೆ ಜಿಗಿದು, ಅಲ್ಲಿ ಖ್ಯಾತಿಯ ನಟಿ ಎನಿಸಿಕೊಳ್ತಾರೆ. ಬಹು ಬೇಡಿಕೆಯಲ್ಲಿರುವಾಗಲೇ ಅವರು ತಮಿಳು, ತೆಲುಗು ಇಂಡಸ್ಟ್ರಿಗೂ ಕಾಲಿಡುತ್ತಾರೆ. ಅಲ್ಲೂ ಹಿಟ್ ಸಿನಿಮಾ ಕೊಟ್ಟು ಬೇಡಿಕೆ ಹೆಚ್ಚಿಸಿಕೊಳ್ತಾರೆ. ನಂತರ ಕನ್ನಡ ಇಂಡಸ್ಟ್ರಿ ಕಡೆ ಮುಖ ಮಾಡಿ, ಕನ್ನಡದ ಪ್ರೀತ್ಸೆ ಸಿನಿಮಾ ಮಾಡ್ತಾರೆ. ಅಷ್ಟಾದರೂ ಅವರ ಡಿಮ್ಯಾಂಡ್ ಮಾತ್ರ ಕಮ್ಮಿ ಆಗೋದಿಲ್ಲ.
ಬೇಡಿಕೆಯಲ್ಲಿರುವಾಗಲೇ ಅವರು ಗೋಲ್ಡಿ ಬೇಲ್ ಜೊತೆ ಮದ್ವೆ ಆಗ್ತಾರೆ. ಅವರಿಗೆ ರಣವೀರ್ ಬೇಲ್ ಎಂಬ ಮಗ ಕೂಡ ಇದಾನೆ. ಒಳ್ಳೆಯ ಜೀವನದ ನಡುವೆಯೇ, ಸೋನಾಲಿ ಆಲ್ಕೋಹಾಲ್, ಸ್ಮೋಕಿಂಗ್ ಗೆ ದಾಸಿಯಾಗಿರುತ್ತಾರೆ. ಮದ್ಯಪಾನ, ಧೂಮಪಾನ ಚಟಕ್ಕೆ ಬಿದ್ದು ಸುದ್ದಿಯಾಗ್ತಾರೆ. ಹಾಗೆ ನೋಡಿದರೆ, ಸಿನಿಮಾ ನಾಯಕಿಯರು, ಮಾಡೆಲ್ಸ್ ಅಂದ್ರೆ ಇವೆಲ್ಲ ಕಾಮನ್. ಕಾರಣ, ಅವರ ಸ್ಟ್ರೆಸ್ ಅಂಥದ್ದು. ಅವರ ಲೈಫ್ ಸ್ಟ್ರೈಲ್ ಕೂಡ ಹಾಗೆ ಇರುತ್ತೆ. ಸೋ ಇದೆಲ್ಲದರಿಂದ ಅವರ ಅನಾರೋಗ್ಯ ಕ್ಷೀಣಿಸುತ್ತೆ. ಅನಾರೋಗ್ಯ ಕಾಡಿದಾಗ, ಆಸ್ಪತ್ರೆಗೆ ಹೋಗ್ತಾರೆ. ಅಲ್ಲಿ ಅವರಿಗೆ ಕ್ಯಾನ್ಸರ್ ಇರೋದು ಗೊತ್ತಾಗುತ್ತೆ. ಅವರಿಗಷ್ಟೇ ಅಲ್ಲ, ಎಲ್ಲರಿಗೂ ಅದು ಶಾಕ್ ಎನಿಸುತ್ತೆ. ಹಣ ಇದ್ದೋರಿಗೆ ಕ್ಯಾನ್ಸರ್ ಗೆಲ್ಲೋದು ಕಷ್ಟವೇನಲ್ಲ. ಹಣ ಇದ್ದವರು ಮಾತ್ರ ಗೆದ್ದು ಬಂದಿದ್ದಾರೆ ಕೂಡ.
ಕೆಲವು ಬೆರಳೆಣಿಕೆ ಮಂದಿ ಕ್ಯಾನ್ಸರ್ ಗೆದ್ದು ಬಂದಿದ್ದು ಕಣ್ಣ ಮುಂದೆಯೇ ಇದೆ.. ಯಾವಾಗ ಕ್ಯಾನ್ಸರ್ ಇದೆ ಅನ್ನೋದು ದೃಢವಾಯ್ತೋ, ಅಲ್ಲಿಂದ ಸೋನಾಲಿ ಅವರ ಪ್ರತಿದಿನದ ಹೋರಾಟ ಶುರುವಾಗುತ್ತೆ. ಸಹಜವಾಗಿಯೇ ಸೋನಾಲಿ ಖಿನ್ನತೆಗೆ ಒಳಗಾಗುತ್ತಾರೆ. ಅದ್ಭುತ ಬ್ಯೂಟಿ ಕ್ವೀನ್ ಎನಿಸಿಕೊಂಡಿದ್ದ ಸೋನಾಲಿ, ಬೇಡಿಕೆಯಲ್ಲಿದ್ದರು. ಕಾಲಕ್ರಮೇಣ ಕ್ಯಾನ್ಸರ್ ತಲೆಯಲ್ಲಿನ ಒಂದೇ ಒಂದು ಕೂದಲು ಇಲ್ಲದಂತೆ ಮಾಡುತ್ತೆ. ದೇಹ ತೆಳುವಾಗುತ್ತೆ. ಹೀಗಾದಾಗ, ಭಾರತೀಯ ಚಿತ್ರರಂಗನ್ನು ಆಳಿದ್ದ ನಟಿಗೆ ಹೇಗಾಗಬೇಡ. ಕೊನೆಗೆ ಕ್ಯಾನ್ಸರ್ ಗುಣಕ್ಕೆ ಫಾರಿನ್ ಹಾರ್ತಾರೆ. ಅಲ್ಲಿ ಟ್ರೇಟ್ ಮೆಂಟ್ ಆಗುತ್ತೆ. ಅಷ್ಟೊತ್ತಿಗಾಗಲೇ ಜೋರು ಸುದ್ದಿ ಹರಡುತ್ತೆ. ಆದರೂ, ಅವರಿಗೆ ಒಳಗೆ ಇದ್ದದ್ದು ಬದುಕುವ ಹಠ. ಆತ್ಮವಿಶ್ವಾಸ ಬದುಕುವಂತೆ ಮಾಡುತ್ತೆ. ಅದೇನೆ ಇರಲಿ, ಸೋನಾಲಿ ಕ್ಯಾನ್ಸರ್ ಗೆದ್ದುಬಂದ್ರು. ಅದಾದ ಬಳಿಕ ಮತ್ತೆ ಬಣ್ಣ ಹಚ್ಚಿದ್ರು. ಆಕ್ಟೀವ್ ಆಗಿ ನಿಂತ್ರು. ಈಗ ನೋಡಿದ್ರೆ ಕನ್ನಡ ಇಂಡಸ್ಟ್ರಿಯಲ್ಲಿ ನನಗೆ ಕಹಿ ಘಟನೆ ಆಗಿದೆ ಅಂತ ಹೇಳುವ ಮೂಲಕ ಪುನಃ ಸುದ್ದಿಯಲ್ಲಿದ್ದಾರೆ ಬೇಂದ್ರೆ.