Bengaluru News: ಸಮಾಜದಲ್ಲಿ ನಾವು ಟೀಚರ್ಸ್‌ಗಳಿಗೆ ವಿಶೇಷವಾದ ಗೌರವ ನೀಡುತ್ತೇವೆ. ಅವರು ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿ ತೋರುತ್ತಾರೆ, ಎಲ್ಲರಿಗೂ ಮಾದರಿಯಾದ ಬದುಕು ಅವರದ್ದಾಗಿರುತ್ತದೆ ಎಂದು ನಾವೆಲ್ಲ ಭಾವಿಸುತ್ತಿರುತ್ತೇವೆ. ಆದರೆ ಇದಕ್ಕೆ ತದ್ವಿರುದ್ಧವೆಂಬಂತೆ ಇಲ್ಲೊಬ್ಬ ಶಿಕ್ಷಕಿ ತನ್ನ ಗ್ಯಾಂಗ್ ಜೊತೆ ಸೇರಿ ಮಾಡಬಾರದ ಕೆಲಸ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಶ್ರೀದೇವಿ ರುಡಿಗಿ ಎನ್ನುವ ಶಿಕ್ಷಕಿ ಖಾಸಗಿ ಪ್ರೀಸ್ಕೂಲ್ ನಡೆಸುತ್ತಿದ್ದಳು. ಈ ಶಾಲೆಗೆ ಗುಜರಾತ್ ಮೂಲದ ಪೋಷಕ ರಾಕೇಶ್ ವೈಷ್ಣವ್ ಕಳೆದ 2023ರಲ್ಲಿ ತಮ್ಮ 5 ವರ್ಷದ ಮಗಳನ್ನು ಸೇರಿಸಿದ್ದರು. ಹೀಗೆ ಪರಿಚಯವಾಗಿದ್ದ ಈ ಇಬ್ಬರ ನಡುವೆ ದಿನಕಳೆದಂತೆ ಆತ್ಮೀಯತೆ, ಸಲುಗೆ ಬೆಳೆಯುತ್ತದೆ. ಈ ನಡುವೆ ಶಾಲೆಯ ನಿರ್ವಹಣೆಗಾಗಿ ಹಾಗೂ ತಂದೆಯ ಚಿಕಿತ್ಸೆಗೆಂದು ಶ್ರೀದೇವಿ ರಾಕೇಶ್ನಿಂದ 4 ಲಕ್ಷ ರೂಪಾಯಿ ಸಾಲ ಪಡೆದಿದ್ದಳು. ಅಲ್ಲದೆ 2024ರ ಮಾರ್ಚ್ನಲ್ಲಿ ವಾಪಸ್ ಕೊಡುವುದಾಗಿ ಭರವಸೆ ನೀಡಿದ್ದಳು. ಹೀಗೆ ಹೇಳಿದ್ದ ಶ್ರೀದೇವಿ ಹಣ ವಾಪಸ್ ಕೇಳಿದಾಗ ಮಾತ್ರ ಕೊಟ್ಟಿರಲಿಲ್ಲ. ಈಗ ಸದ್ಯ ತುಂಬಾ ಕಷ್ಟವಿದೆ, ಹಣ ವಾಪಸ್ ಕೊಡಲು ಆಗುವುದಿಲ್ಲ. ನೀವು ನಮ್ಮ ಶಾಲೆಗೆ ಪಾರ್ಟನರ್ ಆಗಿ ಎಂದು ಹೇಳುವ ಮೂಲಕ ರಾಕೇಶ್‌ನಲ್ಲಿ ಹೊಸ ಆಸೆ ಚಿಗುರುವಂತೆ ಮಾಡಿದ್ದಳು.
ನನ್ನ ಜೊತೆ ರಿಲೇಶನ್ ಶಿಪ್‌ನಲ್ಲಿ ಇರು..
ಇನ್ನೂ ಅವಳ ಮೈಮಾಟ ಹಾಗೂ ಆಕರ್ಷಕ ಸೌಂದರ್ಯಕ್ಕೆ ರಾಕೇಶ್ ಆಕರ್ಷಿತನಾಗಿದ್ದ. ಅಲ್ಲದೆ ಈ ಇಬ್ಬರ ಸುತ್ತಾಟದಿಂದ ಬಹಳಷ್ಟು ಹತ್ತಿರವಾಗಿದ್ದರು. ಇನ್ನೂ ಈ ಶ್ರೀದೇವಿ ಜೊತೆ ಮಾತನಾಡಲೆಂದೇ ರಾಕೇಶ್ ಪ್ರತ್ಯೇಕವಾದ ಸಿಮಾ ಕಾರ್ಡ್ ಖರೀದಿಸಿದ್ದರು. ದಿನಾಲೂ ಫೋನ್‌ನಲ್ಲಿ ಮಾತನಾಡುತ್ತಿದ್ದರು, ಕಳೆದ ಜನವರಿ ತಿಂಗಳಲ್ಲಿ ರಾಕೇಶ್ ಮತ್ತೆ ತಾವು ಕೊಟ್ಟ ಹಣವನ್ನು ವಾಪಸ್ ಕೇಳಿದ್ದರು. ಆದರೆ ಆಗ ಮತ್ತೊಂದು ಹೊಸ ವರಸೆ ತೆಗೆದಿದ್ದ ಟೀಚರ್ ಶ್ರೀದೇವಿ ನಾನು ನಿನ್ನ ಜೊತೆ ರಿಲೇಶನ್ ಶಿಪ್‌ನಲ್ಲಿ ಇರುತ್ತೇನೆ. ಅಲ್ಲದೆ 1ದಿನ ನಿನ್ನೊಂದಿಗೆ ಖಾಸಗಿಯಾಗಿ ಕಳೆಯುತ್ತೇನೆ 15 ಲಕ್ಷ ರೂಪಾಯಿಗಳನ್ನು ನೀಡುವಂತೆ ಬೇಡಿಕೆ ಇಟ್ಟಿದ್ದಳು. ಅವಳ ಮಾತಿಗೆ ಒಪ್ಪದ ರಾಕೇಶ್ ಹಣ ನೀಡಲು ನಿರಾಕರಿಸಿದ್ದರು.
50 ಸಾವಿರಕ್ಕೆ ಒಂದು ಮುತ್ತಿನ ಕಥೆ..
ಅಲ್ಲದೆ ರಾಕೇಶ್ ಪತ್ನಿ ಹಾಗೂ ಮಕ್ಕಳು ಯಾರು ಇಲ್ಲದ ವೇಳೆ ಅವರ ಮನೆಗೆ ಹೋಗಿದ್ದ ಶ್ರೀದೇವಿ ಒಂದು ಮುತ್ತನ್ನು ಕೊಟ್ಟು ಬ್ಲಾಕ್‌ಮೆಲ್ ಮಾಡಿ ಅವರಿಂದ 50 ಸಾವಿರ ರೂಪಾಯಿ ಹಣ ಎಗರಿಸಿದ್ದಳು. ಇದಾದ ಬಳಿಕ ಆಗಾಗ್ಗೆ ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ಶ್ರೀದೇವಿ ಜೊತೆಗೆ ಮಾತನಾಡಲು ರಾಕೇಶ್ ಬಳಿ ಇದ್ದ ಸಿಮ್ ಅನ್ನು ಮುರಿದಿದ್ದರು. ಅಲ್ಲದೆ ತಮ್ಮ ಉದ್ಯಮದಲ್ಲಿ ನಷ್ಟ ಉಂಟಾಗಿ ಬೆಂಗಳೂರು ತೊರೆದು ಗುಜರಾತ್‌ಗೆ ತೆರಳುವ ಯೋಚನೆಯನ್ನು ರಾಕೇಶ್ ಮಾಡಿದ್ದರು. ಇನ್ನೂ ಮಾರ್ಚ್ 12 ರಂದು ರಾಕೇಶ್ ಪತ್ನಿಗೆ ಕರೆ ಮಾಡಿದ್ದ ಶ್ರೀದೇವಿ ಮಕ್ಕಳ ಸ್ಕೂಲ್ ಟಿಸಿ ಕಳುಹಿಸಿಕೊಡುತ್ತೇನೆ, ನಿಮ್ಮ ಪತಿಯನ್ನು ಶಾಲೆಗೆ ಕಳುಹಿಸಿ ಎಂದಿದ್ದಳು. ಅದರಂತೆ ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಮಗಳ ವರ್ಗಾವಣೆ ಪತ್ರವನ್ನು ಪಡೆಯಲು ಶಾಲೆಗೆ ರಾಕೇಶ್ ಹೋಗಿದ್ದರು. ಆಗ ಶ್ರೀದೇವಿ ಕೊಠಡಿಯಲ್ಲಿ ಗಣೇಶ್ ಕಾಳೆ ಹಾಗೂ ಸಾಗರ್ ಎಂಬುವವರು ಕುಳಿತಿದ್ದರು. ನಾನು ಎಂಗೇಜ್‌ಮೆಂಟ್ ಮಾಡಿಕೊಂಡಿರುವ ಶ್ರೀದೇವಿ ಜೊತೆ ನೀನು ಸುತ್ತಾಡಿ ಅವಳೊಂದಿಗೆ ಖಾಸಗಿ ಕ್ಷಣಗಳನ್ನು ಕಳೆದಿದೀಯಾ.? ಅಲ್ಲದೆ ನಿಮ್ಮಿಬ್ಬರ ಆ ಪೋಟೋ ಹಾಗೂ ವಿಡಿಯೋಗಳು ನನ್ನ ಬಳಿ ಇವೆ. ನನಗೆ ಗೊತ್ತಿರುವ ಮುರಳಿ ಎಂಬ ಪೊಲೀಸರಿಗೆ ಹೇಳಿ ನಿನ್ನನ್ನು ಜೈಲಿಗೆ ಹಾಕಿಸುತ್ತೇನೆ ಎಂದು ಸಾಗರ್ ರಾಕೇಶ್ ಅವರಿಗೆ ಬೆದರಿಕೆ ಹಾಕಿದ್ದಾನೆ.
1 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಐನಾತಿ ಗ್ಯಾಂಗ್..!
ಇನ್ನೂ ಈ ಬೆದರಿಕೆಗೆ ಶ್ರೀದೇವಿ ಹಾಗೂ ಗಣೇಶ್ ಇಬ್ಬರೂ ಕೂಡ ಸಾಥ್ ನೀಡಿದ್ದಾರೆ. ಅಲ್ಲದೆ ನಿನ್ನನ್ನು ಜೈಲಿಗೆ ಕಳುಹಿಸಬಾರದೆಂದರೆ ನಮಗೆ ನೀನು 20 ಲಕ್ಷ ರೂಪಾಯಿಗಳನ್ನು ನೀಡಬೇಕೆಂದು ಮೂವರು ಬೇಡಿಕೆ ಇಟ್ಟಿದ್ದಾರೆ. ಇದಾದ ನಂತರ ಕಾರಿನಲ್ಲಿ ಕೂರಿಸಿಕೊಂಡು ನಾವು ಯಾರಿಗೂ ಈ ವಿಚಾರ ಹೇಳಬಾರದು ಎಂದರೆ 1 ಕೋಟಿ ರೂಪಾಯಿ ಕೊಡು ಇಲ್ಲವಾದರೆ ನಿನ್ನ ಕೊಲೆ ಮಾಡುವುದಾಗಿ ಹೆದರಿಸಿದ್ದಾರೆ. ಅಲ್ಲದೆ ಕೊನೆಯದಾಗಿ ಆರೋಪಿಗಳು ರಾಕೇಶ್ ಬಳಿಯಿಂದ 1.90 ಲಕ್ಷ ರೂಪಾಯಿ ಹಣ ಪಡೆದು ಬಿಟ್ಟು ಕಳುಹಿಸಿದ್ದರು. ಆದರೆ, ಉಳಿದ ಹಣ ನೀಡುವಂತೆ ಮತ್ತೆ ಪ್ರಾಣ ಬೆದರಿಕೆ ಹಾಕಿದ್ದರು ಎಂದು ರಾಕೇಶ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ. ಈ ದೂರಿನ ಅನ್ವಯ ತನಿಖೆಗಿಳಿದಿದ್ದ ಸಿಸಿಬಿ ಪೊಲೀಸರು ಶ್ರೀದೇವಿ, ಅರುಣ್ ಮತ್ತು ಸಾಗರ್ ಎಂಬುವವರನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಮೂವರು ಆರೋಪಿಗಳು ಕೂಡ ವಿಜಯಪುರ ಮೂಲದವರಾಗಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.