ಮೈದಾ ಅಥವಾ ಗೋಧಿ ಬಳಸಿ ಕೇಕ್ ಮಾಡೋದು ಹೇಗೆ ಅಂತಾ ನಿಮಗೆ ಗೊತ್ತಿರಬಹುದು. ಆದ್ರೆ ನಾವಿಂದು ರವಾ ಕೇಕ್ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಅಲ್ಲದೇ, ಈಗ ಮಾವಿನ ಹಣ್ಣಿನ ಸೀಸನ್ ಆಗಿರುವುದರಿಂದ, ಮಾವಿನ ಹಣ್ಣಿನ ಕೇಕ್ ಹೇಗೆ ಮಾಡೋದು ಅಂತಾ ಹೇಳಲಿದ್ದೇವೆ..
ಬೇಕಾಗುವ ಸಾಮಗ್ರಿ: ಒಂದು ಕಪ್ ರವಾ, ಒಂದು ಕಪ್ ಮಾವಿನ ಹಣ್ಣು, ಅರ್ಧ ಕಪ್ ಸಕ್ಕರೆ, ಕಾಲು ಕಪ್ ಎಣ್ಣೆ, ಕಾಲು ಕಪ್ ಹಾಲು, ಒಂದು ಸ್ಪೂನ್ ಬೇಕಿಂಗ್ ಪೌಡರ್, ಮುಕ್ಕಾಲು ಸ್ಪೂನ್ ಬೇಕಿಂಗ್ ಸೋಡಾ, ಅರ್ಧ ಕಪ್ ಟೂಟಿ ಫ್ರೂಟಿ, ಬೇಕಾದ್ರೆ ಡ್ರೈ ಫ್ರೂಟ್ಸ್ ಕೂಡ ಬಳಸಬಹುದು.
ಮಾಡುವ ವಿಧಾನ: ಮೊದಲು ಒಂದು ಮಿಕ್ಸಿ ಜಾರ್‌ಗೆ, ರವಾ ಹಾಕಿ, ಗ್ರೈಂಡ್ ಮಾಡಿ, ಪುಡಿ ಮಾಡಿ, ಪಕ್ಕಕ್ಕಿರಿಸಿ. ಈಗ ಅದೇ ಜಾರ್‌ಗೆ ಮಾವಿನ ಹಣ್ಣು, ಸಕ್ಕರೆ, ಎಣ್ಣೆ, ಹಾಲು ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟನ್ನು ರವಾಪುಡಿಗೆ ಮಿಕ್ಸ್ ಮಾಡಿ. ಈ ಮಿಶ್ರಣವನ್ನ 10 ನಿಮಿಷ ಮುಚ್ಚಿಡಿ. ನಂತರ ಇದಕ್ಕೆ, ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ ಮಿಕ್ಸ್ ಮಾಡಿ.
ಈಗ ಕೇಕ್ ಬೌಲ್‌ಗೆ ಬೆಣ್ಣೆ ಅಥವಾ ತುಪ್ಪ ಸವರಿ, ಅದರ ಮೇಲೆ ಬಟರ್ ಪೇಪರ್ ಇಟ್ಟು, ಅದರ ಮೇಲೆ ಈ ಕೇಕ್ ಮಿಕ್ಸ್ ಹಾಕಿ. ಈಗ ಇದರ ಮೇಲೆ ಟೂಟಿ ಫ್ರೂಟಿ, ಡ್ರೈಫ್ರೂಟ್ಸ್ ಹರಡಿ. ಈ ಕೇಕನ್ನ ನೀವು ವೋವನ್ ನಲ್ಲಿಟ್ಟು ತಯಾರಿಸಬಹುದು. ಅಥವಾ ಗ್ಯಾಸ್ ಮೇಲೆ ಪ್ಯಾನ್ ಇಟ್ಟು, ಅದರಲ್ಲಿ ಮರಳು ಹಾಕಿ 10 ನಿಮಿಷ ಅದನ್ನು ಕವರ್ ಮಾಡಿ ಬಿಸಿ ಮಾಡಿ. ನಂತರ ಅದರಲ್ಲಿ ವೈರ್‌ಸ್ಟ್ಯಾಂಡ್ ಇಟ್ಟು, ಅದರ ಮೇಲೆ ಕೇಕ್ ಬೌಲ್ ಇಟ್ಟು, 45 ನಿಮಿಷ ಮಂದ ಉರಿಯಲ್ಲಿ ಬೇಯಿಸಬಹುದು. ಕೇಕ್ ರೆಡಿಯಾಯಿತೋ, ಇಲ್ಲವೋ ಎಂದು ಅದರಲ್ಲಿ ಕಡ್ಡಿ ಅಥವಾ ಚಾಕು ಹಾಕಿ, ನೋಡಿ. ಚಾಕುಗೆ ಹಿಟ್ಟು ತಾಕದಿದ್ದಲ್ಲಿ, ಕೇಕ್ ರೆಡಿ ಎಂದರ್ಥ.